
ಭಾರತ ಬಲಿಷ್ಠವಾಗಿ ಬೆಳೆಯಬೇಕಾದರೆ ಮೊದಲು ಬಡವರಿಗೆ ಹೊಟ್ಟೆ ತುಂಬಾ ಅನ್ನ ಮತ್ತು ಸ್ವತಂತ್ರ ಚಿಂತನೆಗೆ ಅವಕಾಶ ನೀಡುವ ಶಿಕ್ಷಣ ಸಿಗಬೇಕು, ಪುರೋಹಿತಷಾಹಿ ಯಜಮಾನಿಕೆ ಮತ್ತು ಸಾಮಾಜಿಕ ಶೋಷಣೆ ಕೊನೆಗೊಳ್ಳಬೇಕು ಎಂದು ದಿಟ್ಟತನದಿಂದ ಹೇಳಿದವರು ಸ್ವಾಮಿ ವಿವೇಕಾನಂದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಭಾರತದಲ್ಲಿ ಹಿಂದೂ ಮತ್ತು ಇಸ್ಲಾಂ ಧರ್ಮಗಳ ಚಿಂತನೆಗಳ ಮಿಲನವಾಗಬೇಕು, ವೇದಾಂತದ ಮೆದುಳು ಮತ್ತು ಇಸ್ಲಾಮಿನ ದೇಹ – ಇದು ನಮ್ಮ ಮುನ್ನಡೆಗೆ ದಾರಿ ತೋರಬೇಕು ಎಂಬ ದಾರ್ಶನಿಕ ನುಡಿಗಳನ್ನಾಡಿದವರು ಸ್ವಾಮಿ ವಿವೇಕಾನಂದರು ಎಂದರು.

ರಾಜಕಾರಣಿ ಮತ್ತು ಆಡಳಿತಗಾರನಾಗಿ ನಾನು ಕೈಗೊಳ್ಳುತ್ತಾ ಬಂದ ನೀತಿ-ನಿರ್ಧಾರಗಳಲ್ಲಿ ಹಿಂದೂ ಧರ್ಮದ ಸುಧಾರಕ ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರೇರಣೆ ಇದೆ ಎನ್ನುವುದನ್ನು ವಿನೀತನಾಗಿ ಅರಿಕೆ ಮಾಡಿಕೊಳ್ಳುವೆ ಎಂದು ಹೇಳಿದರು.
ತಮ್ಮ ಅಲ್ಪಾಯುಷ್ಯದ ಅವಧಿಯ ಪ್ರತಿಯೊಂದು ಗಳಿಗೆಯನ್ನು ಹಿಂದೂ ಧರ್ಮದ ಸುಧಾರಣೆಗಾಗಿ ಅವಿರತವಾಗಿ ಶ್ರಮಿಸಿದ ದಾರ್ಶನಿಕ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬದ ದಿನ ಅವರನ್ನು ಗೌರವ ಮತ್ತು ಕೃತಜ್ಞತಾ ಭಾವದಿಂದ ನೆನೆಯುವೆ ಎಂದು ತಿಳಿಸಿದರು.
ನಾಡಿನ ಜನರೆಲ್ಲರು ವಿವೇಕಾನಂದರ ಚಿಂತನೆಗಳನ್ನು ಅರಿತುಕೊಂಡು ವಿವೇಕವನ್ನು ಬೆಳೆಸಿಕೊಳ್ಳಲಿ ಎಂದು ಹಾರೈಸಿದರು.