ಹೊಸ ವರ್ಷದ ಮೊದಲ ಹಬ್ಬ ಸುಗ್ಗಿ ಹಬ್ಬ ಎಂದೇ ಕರೆಸಿಕೊಳ್ಳುವ ಮಕರ ಸಂಕ್ರಾಂತಿ ಹಬ್ಬದ ಸಡಗರ ಸಂಭ್ರಮ ನಾಡಿನಾದ್ಯಂತ ಮನೆಮಾಡಿದೆ.
ಈ ಹಬ್ಬಕ್ಕೆ ಪ್ರಮುಖವಾಗಿ ಬೇಕಾಗುವ ಕಬ್ಬು, ಎಳ್ಳು, ಬೆಲ್ಲ, ಸಕ್ಕರೆ ಅಚ್ಚು, ಹೂ, ಹಣ್ಣು ಖರೀದಿ ಭರಾಟೆ ನಗರದ ಮಾರುಕಟ್ಟೆಯಲ್ಲಿ ಜೋರಾಗಿದೆ.
ದೊಡ್ಡಬಳ್ಳಾಪುರ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಜನ ಜಂಗುಳಿ ಹೆಚ್ಚಾಗಿತ್ತು. ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ದರ ಸ್ವಲ್ಪ ಹೆಚ್ಚಾಗಿದೆ. ಹೂ, ಹಣ್ಣು ಮಾರುಕಟ್ಟೆಗೆ ಹೆಚ್ಚಾಗಿ ಬಂದಿದೆ. ಕಬ್ಬಂತೂ ಎಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನಗರದಲ್ಲಿ ಕಾಣಿಸಿಕೊಂಡಿದೆ.
ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಸುಗ್ಗಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಕಬ್ಬು ಜಲ್ಲೆ, ಹೂ, ಹಣ್ಣುಗಳ ಮಾರಾಟ ಭರದಿಂದ ಸಾಗಿದೆ. ಅಂಗಡಿಗಳಲ್ಲಿ ಸಿದ್ಧಪಡಿಸಿದ ಎಳ್ಳು-ಬೆಲ್ಲ, ಸಕ್ಕರೆ ಅಚ್ಚುಗಳ ಖರೀದಿಯೂ ಜೋರಾಗಿದೆ.
ವಿವಿಧ ದರಗಳಲ್ಲಿ ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಸಾಮಾನ್ಯ ಕಬ್ಬು ಜಳವೆಗೆ 60ರಿಂದ 70 ರೂ. ವವರೆಗೆ ಮಾರಾಟವಾಗುತ್ತಿದೆ.
ಈ ಹಬ್ಬದಲ್ಲಿ ಹೆಚ್ಚಾಗಿ ಬಳಸುವ ಕಡಲೇಕಾಯಿ ಕೆ.ಜಿಗೆ ₹100, ಎಳ್ಳು ಬೆಲ್ಲ ಕೆ.ಜಿಗೆ ₹200, ಗೆಣಸು ₹60, ಕಬ್ಬು ಒಂದು ಜಳವೆಗೆ ₹60, ಅವರೆ ಕಾಯಿ ಒಂದು ಕೆ.ಜಿಗೆ ₹80 ಇದ್ದು ಬೆಲೆಗಳು ಹಬ್ಬಕ್ಕಾಗಿ ಹೆಚ್ಚಿವೆ.
ಕಾಕಡ ಹೂವು 1 ಕೆ.ಜಿಗೆ ₹800, ಮಲ್ಲಿಗೆ ₹2,000, ಕನಕಾಂಬರ 1 ಕೆ.ಜಿಗೆ ₹1,600 ಇದ್ದರೆ, ಚೆಂಡು ₹80, ಸೇವಂತಿಗೆ, ಗುಲಾಬಿ ಮತ್ತಿತರೆ ಹೂವಿನ ಬೆಲೆಗಳು ಒಂದು ಕೆ.ಜಿಗೆ ₹250 ರವರೆಗೂ ಇವೆ.