ಚಿಕ್ಕಬಳ್ಳಾಪುರ: ನಾಟಿ ಔಷಧಿಯಿಂದ 8 ವರ್ಷದ ಬಾಲಕ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರದ ನಲ್ಲಗುಟ್ಟ ಪಾಳ್ಯದಲ್ಲಿ ನಡೆದಿದೆ.
ಶಶಿಕಲಾ ಹಾಗೂ ಶ್ರೀನಿವಾಸ್ ದಂಪತಿಯ ಪುತ್ರ ವೇದೇಶ್(8) ಮೃತಪಟ್ಟ ಬಾಲಕ. ಮಗನಿಗೆ ನಾಟಿ ಔಷಧಿ ಕುಡಿಸಿದ ಶ್ರೀನಿವಾಸ್ ತಾನೂ ಕೂಡ ಕುಡಿದು ಮತ್ತೋರ್ವ ಪುತ್ರಿಗೂ ನೀಡಿದ್ದಾನೆ. ಸ್ವಲ್ಪ ಹೊತ್ತಿನಲ್ಲೇ ಎಲ್ಲರೂ ಅಸ್ವಸ್ಥಗೊಂಡಿದ್ದು ಕೂಡಲೇ ತಂದೆ-ಮಗಳು ಆಸ್ಪತ್ರೆ ಸೇರಿದರೆ 8 ವರ್ಷದ ಬಾಲಕ ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ವೇದೇಶ್ ಎಂಬ ಮಗುವಿಗೆ ಕಿವಿಯ ಬಳಿ ಅಲರ್ಜಿ ಆಗಿರುತ್ತದೆ. ನಾನಾ ಕಡೆ ಚಿಕಿತ್ಸೆ ಕೊಡಿಸಿದರೂ ಕೂಡ ಅಲರ್ಜಿ ಕಡಿಮೆ ಆಗಿರಲಿಲ್ಲ. ಹಾಗಾಗಿ ಅಕ್ಕ ಪಕ್ಕದ ಮನೆಯವರು, ಈ ರೀತಿಯ ಸಮಸ್ಯೆಗಳಿಗೆ ಮಂತ್ರ ಹಾಕಿ ಔಷಧಿ ನೀಡುತ್ತಾರೆ ಎಂದು ಭೋಯಿನಹಳ್ಳಿಯ ಸತ್ಯನಾರಾಯಣ ಎಂಬಾತನ ಹೆಸರನ್ನು ಹೇಳುತ್ತಾರೆ. ಜನರ ಮಾತನ್ನೇ ನಂಬಿಕೊಂಡು ಸತ್ಯನಾರಾಯಣ ಬಳಿ ಹೋಗುತ್ತಾರೆ. ಮೊದಲು ಮಗುವನ್ನು ನೋಡಿ ಇದು ಒಂದೇ ಬಾರಿ ವಾಸಿ ಆಗಲ್ಲ. ನೀವು ಮೂರು ಬಾರಿ ಬರಬೇಕು ಎಂದು ಮಂತ್ರವಾದಿ ಹೇಳುತ್ತಾನೆ. ಮಂತ್ರವಾದಿಯ ಮಾತನ್ನು ಕೇಳಿ ಈಗ ಮಗುವನ್ನು ಕಳೆದುಕೊಂಡಿದೆ.
ಮಂತ್ರವಾದಿ ಬಳಿ ತೋರಿಸಿದಾಗ, ಮಂತ್ರ ಹಾಕಿದ್ದೇನೆ ಒಂದು ಔಷಧವನ್ನು ನೀಡುತ್ತೇನೆ, ಅದನ್ನ ಮೂರು ದಿನ ಕುಡಿಸಿ ಎಂದು ಹೇಳಿ ಒಂದು ಔಷಧಿಯನ್ನು ಕೊಡುತ್ತಾನೆ. ಅವನ ಮಾತನ್ನು ನಂಬಿಕೊಂಡು ಮಗುವಿಗೆ ಔಷಧಿ ಕೊಡುತ್ತಾರೆ. ಔಷಧಿ ತುಂಬಾ ಕಹಿ ಇದೆ ಎಂದು ಮಗು ಕುಡಿಯಲು ಹಠ ಮಾಡಿದಾಗ ಮಗುವಿನ ತಂದೆ ಮತ್ತು ಅಕ್ಕ ಕೂಡ ಹಠ ಮಾಡುತ್ತಿದ್ದ ಮಗುವಿನ ಮುಂದೆಯೇ ಕುಡಿದು ಆ ಮಗುವಿಗೂ ಕುಡಿಸುತ್ತಾರೆ.
ಈ ವೇಳೆ ಮಗು ಹೊಟ್ಟೆ ಉರಿ ಎಂದು ಒದ್ದಾಡುತ್ತಿರುತ್ತದೆ. ಆಗ ನಾಟಿ ಔಷಧಿ ವೈದ್ಯನಿಗೆ ಕರೆ ಮಾಡಿದಾಗ, ಆ ಔಷಧಿ ಹಾಗೇ, ಸ್ವಲ್ಪ ಹೊತ್ತು ಹೋದರೆ ಎಲ್ಲಾ ಸರಿ ಹೋಗುತ್ತೆ ಎಂದು ಹೇಳುತ್ತಾನೆ. ಅಷ್ಟರ ವೇಳೆ ತಂದೆ ಮತ್ತು ಮಗಳಿಗೂ ಇದರ ಎಫೆಕ್ಟ್ ಕಾಣಿಸುತ್ತದೆ. ತಕ್ಷಣ ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬರುತ್ತಾರೆ. ವೈದ್ಯರು ಚಿಕಿತ್ಸೆ ನೀಡಿದ ಕಾರಣ ತಂದೆ ಮತ್ತು ಮಗು ಪ್ರಾಣಾಪಾಯದಿಂದ ಪಾರಾಗುತ್ತಾರೆ. ಆದರೆ ಮೂರು ದಿನಗಳಿಂದ ಗಂಡು ಮಗು ವೇದೇಶ್ ಗೆ ನಾಟಿ ಔಷಧಿ ಕುಡಿಸಿದ್ದ ಕಾರಣ ಮಗು ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪುತ್ತಾನೆ.
ಒಟ್ಟಾರೆ ಯಾರೋ ಮಂತ್ರವಾದಿಗಳು, ನಾಟಿ ವೈದ್ಯರು ಹೇಳಿದರು ಎಂದು ಕುರುಡಾಗಿ ನಂಬಿ ಅವರು ಹೇಳಿದ ಮಾತು ಕೇಳಿವ ವ್ಯಕ್ತಿಗಳು ಎಚ್ಚರಿಕೆಯಿಂದ ಇರಬೇಕಾಗಿದೆ. ನಾಟಿ ವೈದ್ಯನ ಮಾತು ಕೇಳಿ ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡು ಪೋಷಕರು ದಿಕ್ಕು ದೋಚದ ಪರಿಸ್ಥಿತಿಗೆ ತಲುಪಿದ್ದಾರೆ.