ದೊಡ್ಡಬಳ್ಳಾಪುರ:ನಗರದ ಹೃದಯಭಾಗದ ನಾಗರಕೆರೆಯಲ್ಲಿ ನೂರಾರು ಮೀನುಗಳು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ನಗರದಲ್ಲಿ ಶನಿವಾರ ಸಂಜೆ ಬಿದ್ದ ಮಳೆಯಲ್ಲಿ ಕಲುಷಿತ ನೀರು ನಾಗರಕೆರೆ ಅಂಗಳ ಸೇರಿದ್ದರಿಂದ ಕೆರೆಯಲ್ಲಿದ್ದ ಮೀನುಗಳು ಮೃತಪಟ್ಟು ತೇಲಿಕೊಂಡು ದಡಕ್ಕೆ ಬಂದಿವೆ ಎಂದು ಶಂಕಿಸಲಾಗಿದೆ.
ನಾಗರಕೆರೆ ಅಂಗಳದಲ್ಲೇ ಒಳಚರಂಡಿ ಪೈಪ್ ಲೈನ್ ಹಾಕಲಾಗಿದೆ. ಈ ನೀರಿನ ಸೋರಿಕೆಯಿಂದಲೂ ಕೆರೆಯಲ್ಲಿನ ನೀರು ಕಲುಷಿತವಾಗಿ ಮೀನುಗಳ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ.
ಇದಲ್ಲದೆ ನಗರಸಭೆ ವ್ಯಾಪ್ತಿಯಿಂದ ಶನಿವಾರ ಮುಂಗಾರು ಪೂರ್ವ ಮೊದಲ ಮಳೆ ಬಿದ್ದಿದ್ದರಿಂದ ರಸ್ತೆಗಳಲ್ಲಿನ ಹಾಗೂ ಚರಂಡಿಗಳಲ್ಲಿನ ಮಳೆಗಾಲದಿಂದಲೂ ನಿಂತಿದ್ದ ಕೊಚ್ಚೆಹರಿದು ಕೆರೆ ಅಂಗಳ ಸೇರಿದೆ. ಈ ಎಲ್ಲಾ ಕಾರಣಗಳಿಂದ ಮೀನು ಮೃತಪಟ್ಟರಬಹುದು ಎಂದು ಪರಿಸರವಾದಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ನಾಗರಕೆರೆ ಯಲ್ಲಿನ ಮ್ಯಾನ್ ಹೋಲ್ ತೆರವು ಮಾಡಬೇಕು. ಕೆರೆಯ ಪುನಶ್ವೇತನಗೊಳಿಸಿ, ಮಲಿನ ನೀರು ಕೆರೆ ಸೇರದಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹಿನ್ನೆಲೆ ಇಂದು ಶಾಸಕ ಧೀರಜ್ ಮುನಿರಾಜ್ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಸ್ವಚ್ಛತಾ ಕಾರ್ಯ ಹಾಗೂ ಮೀನುಗಳ ಉಳಿವಿಗೆ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಕಾರ್ತೀಕೇಶ್ವರ್, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ನಗರಸಭಾ ಸದಸ್ಯರು ಮತ್ತು ಇತರರು ಉಪಸ್ಥಿತರಿದ್ದರು.