ಕೋಲಾರ: ಹಿಂಗಾರು ಮಳೆಯಿಂದ ನಷ್ಟವಾಗಿರುವ ತೋಟಗಾರಿಕಾ ಬೆಳೆಗಳನ್ನು ಸಮೀಕ್ಷೆ ಮಾಡಲು ವಿಶೇಷ ತಂಡ ರಚನೆ, ಬಿತ್ತನೆ ಆಲೂಗಡ್ಡೆಯನ್ನು ಸಬ್ಸಿಡಿ ದರದಲ್ಲಿ ವಿತರಣೆ ಸೇರಿದಂತೆ ನಷ್ಟವಾಗಿರುವ ಪ್ರತಿ ಎಕರೆಗೆ 1 ಲಕ್ಷ ಪರಿಹಾರ ವಿತರಣೆ ಮಾಡಬೇಕೆಂದು ರೈತ ಸಂಘದಿಂದ ನಗರದ ತೋಟಗಾರಿಕೆ ಇಲಾಖೆಯ ಮುಂದೆ ನಷ್ಟ ಬೆಳೆ ಸಮೇತ ಹೋರಾಟ ಮಾಡಿ ತೋಟಗಾರಿಕೆ ಸಚಿವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮುಂಗಾರು ಮಳೆ ಕೈಕೊಟ್ಟ ಹಿನ್ನಲೆಯಲ್ಲಿ ಟೊಮೋಟೊ ಕ್ಯಾಪ್ಸಿಕಂಗೆ ಬಿಂಗಿ ರೋಗದಿಂದ ನಷ್ಟವಾದರೆ ಮತ್ತೆ ಹಿಂಗಾರು ಮಳೆ ಆರ್ಭಟಕ್ಕೆ ಮತ್ತೆ ತೋಟಗಾರಿಕಾ ಬೆಳೆಗಳಿಗೆ ತೇವಾಂಶ ಹೆಚ್ಚಾಗಿ ಲಕ್ಷಾಂತರ ಔಷಧಿ ಸಿಂಪರಣೆ ಮಾಡಿದರೂ ಗುಣಮಟ್ಟವಿಲ್ಲದ ನಕಲಿ ಔಷಧಿಗಳಿಂದ ಬೆಂಕಿ ರೋಗ ಬಿಂಗಿ ರೋಗ ನಿಯಂತ್ರಣಕ್ಕೆ ಬಾರದೆ ತೋಟದಲ್ಲಿಯೇ ಬೆಳೆ ನಾಶವಾಗಿ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆ ಇದ್ದರೂ ಬೆಳೆ ಇಲ್ಲದೆ ತೋಟದ ಮುಂದೆ ಕಣ್ಣೀರು ಸುರಿಸುತ್ತಿದ್ದರೂ ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಗಳು ಜನಪ್ರತಿನಿದಿಗಳು ನಾಪತ್ತೆ ಆಗಿರುವುದು ದುರಾದೃಷ್ಟಕರ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾದ್ಯಂತ ಟೊಮೋಟೊ, ಕ್ಯಾಪ್ಸಿಕಂ, ಬೆಳೆ ನಂತರ ಪರ್ಯಾಯ ಬೆಳೆಯಾಗಿ ಸಾವಿರಾರು ಹೆಕ್ಟೆರ್ ಪ್ರದೇಶದಲ್ಲಿ ಆಲೂಗಡ್ಡೆಯನ್ನು ಬೆಳೆಯುವ ರೈತರ ಹಣೆಬರಹ ೫ ವರ್ಷಗಳಿಂದ ಸರಿಹೊಂದುತ್ತಿಲ್ಲ. ದುಬಾರಿ ಬೆಲೆಗೆ ಬಿತ್ತನೆ ಆಲೂಗಡ್ಡೆಯನ್ನು ಖಾಸಗಿ ವ್ಯಾಪಾರಸ್ಥರಿಂದ ಖರೀದಿ ಮಾಡಿ ಬಿತ್ತನೆ ಮಾಡುವ ಬೆಳೆಗಳು ಅಂಗಮಾರಿ ಇಲ್ಲವೇ ಗಡ್ಡೆ ಬಿಡದೇ ನಷ್ಟ ಅನುಭವಿಸಿದಾಗ ನೆಪಮಾತ್ರಕ್ಕೆ ಅಧಿಕಾರಿಗಳು ವಿಜ್ಞಾನಿಗಳನ್ನು ಕರೆಯಿಸಿ ರೈತರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತೋಟ ಪರೀಶೀಲನೆ ಮಾಡಿ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಊಟ ಮಾಡಿ 30 ದಿನಗಳ ನಂತರ ವ್ಯಾಪಾರಸ್ಥರಿಗೆ ಗುಣಮಟ್ಟದ ವರದಿ ನೀಡಿ ರೈತರಿಂದ ಬೆಳೆ ನಿರ್ವಹಣೆ ಸಮರ್ಪಕವಾಗಿ ನಿಭಾಯಿಸಿಲ್ಲ ಎಂದು ರೈತರನ್ನೇ ತಪ್ಪಿತಸ್ಥರನ್ನಾಗಿ ಮಾಡುವ ವರದಿಗಳಿಂದ ರೈತರಿಗೆ ಮುಕ್ತಿ ಇಲ್ಲವೇ ಎಂದು ಪ್ರಶ್ನೆ ಮಾಡಿದರು.
ಖಾಸಗಿ ಆಲೂಗಡ್ಡೆ ವ್ಯಾಪಾರಸ್ಥರು ಕಡ್ಡಾಯವಾಗಿ ಎ.ಪಿ.ಎಂ.ಸಿ ಹಾಗೂ ತೋಟಗಾರಿಕೆ ಅಧಿಕಾರಿಗಳಿಂದ ಪರವಾನಗಿ ಪಡೆದು ಖರೀದಿ ಮಾಡುವ ಜಲಂದರ್ ಮತ್ತಿತರ ರಾಜ್ಯಗಳಿಂದ ಬರುವ ಬಿತ್ತನೆ ಆಲೂಗಡ್ಡೆಯನ್ನು ಗುಣಮಟ್ಟದ ಅಧಿಕಾರಿಗಳು ಪರೀಶೀಲನೆ ಮಾಡಿ ಬಿಲ್ ಪಡೆದು ಆನಂತರ ರೈತರಿಗೆ ಕರಪತ್ರ ಹಾಗೂ ದ್ವನಿವರ್ದಕ ಮುಖಾಂತರ ಜಾಗೃತಿ ಮೂಡಿಸಿ ಕಡ್ಡಾಯ ಬಿಲ್ ಪಡೆದು ಗುಣಮಟ್ಟ ಪರೀಶೀಲನೆ ಮಾಡಬೇಕೆಂಬ ಆದೇಶದ ಜೊತೆಗೆ ಸ್ಥಳೀಯ ಕಾನೂನು ಮಾಪನ ಅಧಿಕಾರಿಗಳು ತೂಕವನ್ನು ಪರಿಶೀಲನೆ ಮಾಡಬೇಕಾದ ನಿಯಮಗಳಿದ್ದರೂ ಆ ನಿಯಮಗಳು ಕಛೇರಿಗರ ಸೀಮಿತವಾಗಿದೆ ಎಂದು ಆರೋಪ ಮಾಡಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ರೈತರ ಸಮಸ್ಯೆಗೆ ಸ್ಪಂದಿಸಬೇಕಾದ ವಿಮಾ ಕಂಪನಿಗಳು ಪ್ರತಿವರ್ಷ ನಾಪತ್ತೆ ಆಗಿರುವ ವಾಣಿಜ್ಯ ಬೆಳೆಗಳಿಗೆ ಕಡ್ಡಾಯವಾಗಿ ರೈತರು ವಿಮೆ ಹಣವನ್ನು ಪಾವತಿಸುತ್ತಾರೆ. ಅತೀವೃಷ್ಠಿ ಅನಾವೃಷ್ಠಿ ಸಮಯದಲ್ಲಿ ಬೆಳೆ ನಷ್ಟವಾದಾಗ ರೈತರ ಜೊತೆ ನಿರಂತರವಾಗಿರಬೇಕಾದ ವಿಮಾ ಕಂಪನಿಗಳು ವಿಮೆ ಪಾವತಿಸಿದ ನಂತರ ನಾಪತ್ತೆ ಆಗುತ್ತಾರೆ. ನಷ್ಟವಾಗಿರುವ ರೈತರು ಕರೆ ಮಾಡಿದರೆ ಸ್ವಿಚ್ಡ್ಪ್ ಆಗುತ್ತದೆ. ಮತ್ತೆ ವರ್ಷಕ್ಕೆ ಪ್ರತ್ಯಕ್ಷರಾಗಿ ರೈತರನ್ನು ಯಾಮಾರಿಸಿ ಕೋಟಿ ಕೋಟಿ ವಿಮೆ ಹಣವನ್ನು ಲೂಟಿ ಮಾಡುತ್ತಿದ್ದರೂ ಅಧಿಕಾರಿಗಳಿಗೆ ಕಂಪನಿಗಳ ಮೇಲೆ ಹಿಡಿತವಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರವಾನಗಿ ಇಲ್ಲದ ಅನದೀಕೃತ ನರ್ಸರಿಗಳ ರಕ್ಷಕರಾಗಿ ಅಧಿಕಾರಿಗಳು ಸರ್ಕಾರದ ತೋಟಗಾರಿಕೆ ನಿಯಮದ ಪ್ರಕಾರ ಕಡ್ಡಾಯವಾಗಿ ನರ್ಸರಿ ನಡೆಸುವ ಮಾಲೀಕರು ಪರವಾನಗೆ ಪಡೆದು ರೈತರಿಗೆ ನೀಡುವ ಪ್ರತಿ ಸಸಿಯ ಬೀಜವನ್ನು ಯಾವ ಕಂಪನಿ ವಿತರಣೆ ಮಾಡುತ್ತದೆ ಎಂಬ ಮಾಹಿತಿಯನ್ನು ಪಡೆಯಬೇಕು ಆದರೆ ಇದಕ್ಕೆ ಯಾವುದೇ ಕಾನೂನು ಇಲ್ಲ ರೈತರ ರಕ್ಷಣೆಯೂ ಇಲ್ಲ ಎಂಬಂತಹ ವಿದೆ ಜಿಲ್ಲೆಯ ತೋಟಗಾರಿಕಾ ಅಧಿಕಾರಿಗಳ ಅವಾಂತರಕ್ಕೆ ಕೊನೆ ಇಲ್ಲವೇ ಎಂದರು.
24 ಗಂಟೆಯಲ್ಲಿ ಹಿಂಗಾರು ಮಳೆಯಿಂದ ನಷ್ಟವಾಗಿರುವ ಬೆಳೆ ಸಮೀಕ್ಷೆ ಮಾಡಲು ವಿಶೇಷ ತಂಡ ರಚನೆ ಮಾಡಿ ನಷ್ಟವಾಗಿರುವ ಪ್ರತಿ ಎಕರೆಗೆ 1 ಲಕ್ಷ ಪರಿಹಾರ ವಿತರಣೆ ಮಾಡುವ ಜೊತೆಗೆ ಬಿತ್ತನೆ ಆಲೂಗಡ್ಡೆಯನ್ನು ಸರ್ಕಾರದಿಂದಲೇ ಸಬ್ಸಿಡಿ ದರದಿಂದಲೇ ವಿತರಣೆ ಮಾಡಿ ಸಂಕಷ್ಟದಲ್ಲಿರುವ ರೈತರ ರಕ್ಷಣೆಗೆ ನಿಲ್ಲಬೇಕೆಂದು ಮನವಿ ಮೂಲಕ ತೋಟಗಾರಿಕಾ ಸಚಿವರನ್ನು ಒತ್ತಾಯಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತೋಟಗಾರಿಕಾ ಅಧಿಕಾರಿಗಳು ಈಗಾಗಲೆ ಜಿಲ್ಲಾಧಿಕಾರಿಗಳ ಆದೇಶದಂತೆ ನಷ್ಟವಾಗಿರುವ ಬೆಳೆ ಸಮೀಕ್ಷೆ ನಡೆಯುತ್ತಿದೆ ಒಂದು ವಾರದಲ್ಲಿ ವರದಿ ನೀಡುವ ಜೊತೆಗೆ ಬಿತ್ತನೆ ಆಲೂಗಡ್ಡೆ ಸಬ್ಸಿಡ ದರ ಹಾಗೂ ಖಾಸಗಿ ವ್ಯಾಪಾರಸ್ಥರ ಸಂಬಂದಪಟ್ಟಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಭೆ ಕರೆದು ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಬಂಗವಾದಿ ನಾಗರಾಜ್‌ಗೌಡ,ಶಿವಾರೆಡ್ಡಿ, ಮಂಗಸಂದ್ರ ತಿಮ್ಮಣ್ಣ, ಸುಪ್ರೀಂ ಚಲ, ವಿನಿತ್, ಶಶಿ, ವೆಂಕಟೇಶಪ್ಪ, ಪಾರುಕ್‌ಪಾಷ ರಾಜೇಶ್, ಕುವ್ವಣ್ಣ, ಅನಿಲ್, ಯಲ್ಲಪ್ಪ, ಹರೀಶ್, ಶೈಲಜ, ರಾಧಮ್ಮ, ಸುಗುಣ, ಶೋಭ, ಮುಂತಾದವರಿದ್ದರು.