ನವ ದೊಡ್ಡಬಳ್ಳಾಪುರ ನಿರ್ಮಾಣ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಶಾಸಕ ಒಂದೇ ವರ್ಷದಲ್ಲಿ ಚಿಗರೇನಹಳ್ಳಿ ಸಮೀಪದ ಎಂಎಸ್‌ಜಿಪಿ ಕಂಪನಿಯ ಬಿಬಿಎಂಪಿ ಕಸವಿಲೇವಾರಿ ಘಟಕ ಮುಚ್ಚಿಸಲಾಗುವುದು ಎಂದು ಹೇಳುತ್ತಿದ್ದರು. ಈ ಬಗ್ಗೆ ಮಾತನಾಡುವುದನ್ನೇ ನಿಲ್ಲಿಸಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಕ್ಷೇತ್ರದ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ಟೆರ್ರಾಫಾರಂ ಬಿಬಿಎಂಪಿ ಕಸ ವಿಲೇವಾರಿ ಘಟಕವನ್ನು ಸ್ಥಳೀಯ ಜನರ ಹಾಗೂ ಮಠಾದೀಶರ ಬೆಂಬಲದೊಂದಿಗೆ ಹೋರಾಟ ಮಾಡಿ ಮುಚ್ಚಿಸಲಾಗಿತ್ತು. ಆದರೆ ಈಗ ಮತ್ತೆ ಟೆರ್ರಾಫಾರಂ ಕಸ ವಿಲೇವಾರಿಯನ್ನು ಬಿಬಿಎಂಪಿ ಆರಂಭಿಸಲು ಹೋರಟಿದೆ. ಇದಕ್ಕೆ ನಮ್ಮ ವಿರೋಧ ಇದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ವಿರೋಧ ಪಕ್ಷದ ಶಾಸಕರು ಆಯ್ಕೆಯಾಗಿರುವ ಕ್ಷೇತ್ರಕ್ಕೆ ಅನುದಾನ ನೀಡದೆ ತಾರತಮ್ಯ ದೋರಣೆ ನೀತಿ ಅನುಸರಿಸುವ ಕೆಟ್ಟ ಸಂಪ್ರದಾಯ ಆರಂಭಿಸಿದ್ದು ಬಿಜೆಪಿ ಆಡಳಿತದಲ್ಲಿ. ಅದರೂ ಸಹ ಹೋರಾಟದ ಮೂಲಕ ಕ್ಷೇತ್ರಕ್ಕೆ ನನ್ನ ಅಧಿಕಾರದ ಅವಧಿಯಲ್ಲಿ ಮಂಜೂರಾಗಿದ್ದ ಚಿಕ್ಕಬಳ್ಳಾಪುರ ರಸ್ತೆಯ ರಾಜಘಟ್ಟ ಕೆರೆ ಏರಿ ಮೇಲಿನ ರಸ್ತೆ ವಿಸ್ತರಣೆ, ಸಾಸಲು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಕನಕೇನಹಳ್ಳಿ ರಸ್ತೆ ಕಾಮಗಾರಿಗಳು ಈಗ ನಡೆಯುತ್ತಿವೆ. ಇವುಗಳ ಹೊರತು ಈಗಿನ ಶಾಸಕರು ಯಾವುದೇ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ತಾಲ್ಲೂಕಿನಲ್ಲಿ ಅಭಿವೃದ್ಧಿ ಶೂನ್ಯವಾಗಿದೆ’ ಎಂದು ದೂರಿದರು.
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ನಿರ್ಮಾಣವಾಗಿ ಎರಡು ವರ್ಷಗಳು ಕಳೆಯುತ್ತ ಬಂದಿದ್ದರು ಸಹ ಉದ್ಘಾಟನೆಯಾಗಿಲ್ಲ. ಕೇಂದ್ರ ಸರ್ಕಾರದ ಅದೀನದಲ್ಲಿ ಬರುವ ಇಎಸ್‌ಐ ಆಸ್ಪತ್ರೆಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಬಿಜೆಪಿಯವರ ಕಾರ್ಮಿಕ ವಿರೋಧಿ ನೀತಿಯೇ ಇಎಸ್‌ಐ ಆಸ್ಪತ್ರೆ ಪಾಳುಬೀಳಲು ಕಾರಣವಾಗಿದೆ ಎಂದು ಆರೋಪಿಸಿದರು.
ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಚುಂಚೇಗೌಡ, ನಿರ್ದೇಶಕ ಎನ್.ಅಂಜನಮೂರ್ತಿ, ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಕೆ.ಪಿ.ಜಗನ್ನಾಥ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎಂ.ಬೈರೇಗೌಡ, ಕಸಬಾ ಬ್ಲಾಕ್ ಅಧ್ಯಕ್ಷ ಅಪ್ಪಿವೆಂಕಟೇಶ್, ಭೂನ್ಯಾಯ ಮಂಡಲಿ ಸದಸ್ಯ ಆದಿತ್ಯನಾಗೇಶ್, ಸಿ.ಡಿ.ಅಶ್ವತ್ಥನಾರಾಯಣಗೌಡ, ಕಚೇರಿಪಾಳ್ಯಮಂಜುನಾಥ್, ರಾಜಣ್ಣ, ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿ ಮಮತಾ, ನಗರಸಭೆ ಆಶ್ರಯ ಸಮಿತಿ ಸದಸ್ಯೆ ಮೌಷಿದಾಮುನ್ನಾ ಇದ್ದರು.