ಕೋಲಾರ: ಹಿಂಗಾರುಮಳೆ ಆರ್ಭಟದಿಂದ ತತ್ತರಿಸಿರುವ ರಾಜ್ಯದ ರೈತ, ಕೂಲಿಕಾರ್ಮಿಕರ ರಕ್ಷಣೆಗೆ 10 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿ ನರೇಗಾದಲ್ಲಿ ದುಡಿಯುವ ಕೈಗೆ 365 ದಿನ ಕೆಲಸ ಕೊಟ್ಟು ಸಂಕಷ್ಟದಲ್ಲಿರುವ ರೈತರ ರಕ್ಷಣೆಗೆ ನಿಲ್ಲಬೇಕೆಂದು ರೈತ ಸಂಘದಿಂದ ಬಂಗಾರಪೇಟೆ ನಗರದ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ಮುಖಾಂತರ ಪ್ರಧಾನ ಮಂತ್ರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮುಂಗಾರು ಮಳೆ ಹಿನ್ನಡೆಯಾಗಿ ಹಿಂಗಾರು ಮಳೆ ಆರ್ಭಟಕ್ಕೆ ರಾಜ್ಯದ ಜನಸಾಮಾನ್ಯರ ಬದುಕು ನೀರುಪಾಲು ಆಗುವ ಜೊತೆಗೆ ರೈತ ಕೂಲಿಕಾರ್ಮಿಕರ ಜೀವನ ಅಸ್ತವ್ಯಸ್ತವಾಗುತ್ತಿದೆ. ನಿಲ್ಲದ ಮಳೆರಾಯನ ಕೋಪಕ್ಕೆ ದುಡಿಯುವ ಕೈಗೆ ಕೆಲಸವಿಲ್ಲದೆ ರೈತರು ಬೆಳೆದ ಬೆಳೆಗಳಿಗೆ ರೋಗ ನಿಯಂತ್ರಣಕ್ಕೆ ಬಾರದೆ ಹಾಕಿದ ಬಂಡವಾಳ ಕೈಗೆ ಬಾರದೆ ಖಾಸಗಿ ಸಾಲಕ್ಕೆ ಸಿಲುಕಿ ನಷ್ಟದಲ್ಲಿರುವ ರೈತರ ರಕ್ಷಣೆಗೆ ನಿಲ್ಲಬೇಕಾದ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ವಿಫಲವಾಗಿದ್ದಾರೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ರಾಜ್ಯ ಸರಕಾರದ ಅವ್ಯವಸ್ಥೆ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ಮಳೆಯಿಂದ ನಷ್ಟವಾಗಿರುವ ರೈತರ ರಕ್ಷಣೆಗೆ ಅಧಿಕಾರಿಗಳು ಸ್ಪಂಧಿಸದ ಜೊತೆಗೆ ಯಾವುದೇ ರೈತರ ತೋಟಕ್ಕೆ ಹೋಗಿ ನಷ್ಟವಾಗಿರುವ ಬೆಳೆ ಸಮೀಕ್ಷೆ ಮಾಡಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾದ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಗ್ಯಾರೆಂಟಿಗಳ ಆಧಾರದ ಮೇಲೆ ಅಧಿಕಾರಕ್ಕೆ ಬಂದಿರುವ ಸರ್ಕಾರ ಅನುದಾನಗಳನ್ನು ಬಿಡುಗಡೆ ಮಾಡದೆ ಜಿಲ್ಲೆಗಳನ್ನು ನಿರ್ಲಕ್ಷೆ ಮಾಡಿ ರೈತ ವಿರೋಧಿ ದೋರಣೆ ಅನುಸರಿಸುತ್ತಿದ್ದಾರೆಂದು ಆರೋಪಿಸಿದರು.
ಒಂದು ಕಡೆ ಗ್ಯಾರೆಂಟಿಗಳ ಹಣ ಕೈಗೆ ಸೇರದೆ ಗ್ರಾಮ ಪಂಚಾಯಿತಿಗಳಲ್ಲಿ ದುಡಿಯುವ ಕೈಗೆ ಕೆಲಸ ನೀಡದೆ ಕೂಲಿ ಕಾರ್ಮಿಕರ ಹೆಸರಿನಲ್ಲಿ ನಕಲಿ ಜಾಬ್‌ಕಾರ್ಡ್ಗಳನ್ನು ಸೃಷ್ಟಿ ಮಾಡಿ 2 ಲಕ್ಷ ಕಾಮಗಾರಿಗೆ 10 ಲಕ್ಷ ಅನುದಾನ ಬಿಡುಗಡೆ ಮಾಡಿ ಜೆ.ಸಿ.ಬಿಗಳ ಮುಖಾಂತರ ಕಾಮಗಾರಿಗಳನ್ನು ನಡೆಸಿ, ಬಡವರ ಗಂಜಿಯನ್ನು ಅಧಿಕಾರಿಗಳು ಗುತ್ತಿಗೆದಾರರು ಕಸಿಯುತ್ತಿದ್ದಾರೆಂದು ಕಿಡಿಕಾರಿದರು.
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ, ಮೂರು ಪಕ್ಷದ ಜನಪ್ರತಿನಿಧಿಗಳು ಉಪಚುನಾವಣೆ ಒಳಮೀಸಲು, ಜಾತಿಗಣತಿ ಹಾಗೂ ಮುಡಾ ಮತ್ತು ವಾಲ್ಮೀಕಿ ಹಗರಣದಲ್ಲಿ ಪ್ರತಿನಿತ್ಯ ಬೀದಿ ನಾಯಿಗಳಂತೆ ಕಚ್ಚಾಡಿಕೊಂಡು ಸಂವಿಧಾನದ ಆಶಯವನ್ನು ಮರೆತು ಮಳೆಯಿಂದ ತತ್ತರಿಸಿರುವ ರಾಜ್ಯದ ಜನರ ಸಮಸ್ಯೆಗೆ ಸ್ಪಂದಿಸಲು ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲು ವಿಫಲವಾಗಿದ್ದಾರೆಂದು ಆಕ್ರೋಷ ವ್ಯಕ್ತಪಡಿಸಿದರು.
ಪ್ರತಿವರ್ಷ ಮುಂಗಾರು ಹಿಂಗಾರು ಮಳೆಯಿಂದ ರೈಲ್ವೇ ಇಲಾಖೆ ಅಭಿವೃದ್ಧಿಪಡಿಸಿರುವ ಜಿಲ್ಲೆಯ ಅಂಡರ್ ಪಾಸ್‌ಗಳು ಈಜುಕೊಳಗಳಾಗಿ ಮಾರ್ಪಟ್ಟು ಹಳ್ಳಿಯಿಂದ ಹಳ್ಳಿಗೆ ಸಂಪೂರ್ಣ ಸಂಪರ್ಕ ಕಳೆದುಕೊಳ್ಳುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಅಧಿಕಾರಿಗಳು ಪರಿಗಣಿಸುತ್ತಿಲ್ಲ. ಅಧಿಕಾರಿಗಳು ಅಂಡರ್ ಪಾಸ್ ಗಳಿಗೆ ಮೇಲ್ಛಾವಣಿ ಹಾಕಿ ಮಳೆ ನೀರು ಬಾರದಂತೆ ಅವೈಜ್ಞಾನಿಕ ಕಾಮಗಾರಿಗಳನ್ನು ಮಾಡುವ ಮುಖಾಂತರ ಕೋಟಿಕೋಟಿ ಹಣವನ್ನು ಲೂಟಿ ಮಾಡುವ ದಂಧೆಯಾಗಿ ಮಾಡಿಕೊಂಡಿದ್ದಾರೆ. ಜೊತೆಗೆ ರೈಲ್ವೇ ಟ್ರಾಕ್ ಗಳಲ್ಲಿ ಕೆಲವು ಕಡೆ ನಗರಸಭೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಸವನ್ನು ಸುರಿದು ದನಕರುಗಳು, ಮಕ್ಕಳು ಆಟವಾಡುವ ಜೊತೆಗೆ ರಾತ್ರಿಯಾದರೆ ರೈಲ್ವೇ ಟ್ರಾಕ್ ಗಳ ಮೇಲೆ ಕುಳಿತು ಮದ್ಯಪಾನ ಮಾಡುವ ಮಟ್ಟಕ್ಕೆ ಇಲಾಖೆ ಹದಗೆಟ್ಟಿದೆಂದು ಅಸಮದಾನ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ರೈಲ್ವೆ ಅಧಿಕಾರಿ, ಅಂಡರ್‌ಪಾಸ್ ಅವ್ಯವಸ್ಥೆ ಸರಿಪಡಿಸುವ ಜೊತೆಗೆ ನಿಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ತಾ.ಅಧ್ಯಕ್ಷ ಕದರಿನತ್ತ ಅಪ್ಪೋಜಿರಾವ್, ಮುನಿಕೃಷ್ಣ, ವಿಶ್ವ, ಮುನಿಯಪ್ಪ, ಕೃಷ್ಣಪ್ಪ, ಮಂಗಸಂದ್ರ ತಿಮ್ಮಣ್ಣ, ಶಿವಾರೆಡ್ಡಿ, ಗಿರೀಶ್, ರತ್ನಮ್ಮ, ಶೈಲಜ, ರಾಧಮ್ಮ, ಚೌಡಮ್ಮ, ಮುನಿರತ್ನಮ್ಮ, ನಾಗರತ್ನಮ್ಮ, ಪದ್ಮಾವತಿ, ಚಾಂದ್‌ಪಾಷ, ಅಹಮದ್, ಮುಂತಾದವರು ಇದ್ದರು.