ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಇಎಸ್ಐ ಆಸ್ಪತ್ರೆಗೆ ಶಂಕುಸ್ಥಾಪನೆ

ಕೋಲಾರ: ತಾಲ್ಲೂಕಿನ ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ 100 ಹಾಸಿಗೆಗಳ ಇಎಸ್ಐ ಆಸ್ಪತ್ರೆಯ ಕಟ್ಟಡ‌‌ ಕಾಮಗಾರಿಗೆ ವರ್ಚುವಲ್ ವೇದಿಕೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದರು.

ನವದೆಹಲಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಸೇರಿದಂತೆ ಸಚಿವರು ಭಾಷಣ ಮಾಡಿದರು.

ನರಸಾಪುರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರ ಭಾಷಣವನ್ನು ದೊಡ್ಡ ಪರದೆಯಲ್ಲಿ ನೇರಪ್ರಸಾರ‌ದ ವ್ಯವಸ್ಥೆ ಮಾಡಲಾಗಿತ್ತು

ಈ ಸಂದರ್ಭದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ ವೇಮಗಲ್ ಮತ್ತು ನರಸಾಪುರ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ಇಲ್ಲಿನ ಕಾರ್ಮಿಕರಿಗೆ ಆರೋಗ್ಯ ಭಾಗ್ಯವನ್ನು ‌ಕಲ್ಪಿಸುವ ಉದ್ದೇಶದಿಂದ ಇಎಸ್ಐ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದೆ ಇಲ್ಲಿ ಚಿಕಿತ್ಸೆ ಸೌಲಭ್ಯ ಇಲ್ಲದಿದ್ದರೆ ಬೇರೆ ಕಡೆ ಚಿಕಿತ್ಸೆಗೆ ಶಿಫಾರಸ್ಸು ಮಾಡುತ್ತದೆ. ಈ ಆಸ್ಪತ್ರೆಯನ್ನು ಮಗುವಿನಂತೆ ಕಾಪಾಡಿಕೊಳ್ಳಬೇಕು. ನೀರು, ವಿದ್ಯುತ್ ಸೌಲಭ್ಯವನ್ನು ಪಂಚಾಯಿತಿಯಿಂದ ಒದಗಿಸಬೇಕು. ಗುತ್ತಿಗೆದಾರರು ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಕೈಗಾರಿಕಾ ಪ್ರದೇಶ ಇರುವುದರಿಂದ ಹೆಚ್ಚು ಕಾರ್ಮಿಕರು ಇದ್ದು, ಇಂಥ ಆಸ್ಪತ್ರೆ ಅಗತ್ಯವಿತ್ತು. ಸದ್ಯ 100 ಬೆಡ್ ಇರುವ ಆಸ್ಪತ್ರೆ ‌ಇದಾಗಿದೆ. ಮುಂದೆ 200 ಬೆಡ್ ಆಸ್ಪತ್ರೆ ಆಗಬೇಕು.‌ ಬೇಗನೇ ಲೋಕಾರ್ಪಣೆ ‌ಆಗಲು ಎಲ್ಲರೂ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಸಂಸದ ಎಂ‌.ಮಲ್ಲೇಶ್ ಬಾಬು ಮಾತನಾಡಿ ಈ ಆಸ್ಪತ್ರೆ ಪ್ರಾರಂಭದ ಹಿಂದೆ ಮಾಜಿ ಸಂಸದ‌ ಎಸ್. ಮುನಿಸ್ವಾಮಿ ಅವರ ಪರಿಶ್ರಮವೂ ಇದೆ. ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಕೂಡ ಒತ್ತು ನೀಡಿತ್ತು. ಮುಂದಿನ ದಿನಗಳಲ್ಲಿ ಕಾರ್ಮಿಕರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಸಿಗಲಿದೆ ಅಧಿಕಾರಿಗಳು,‌ ಜನಪ್ರತಿನಿಧಿಗಳು, ವೈದ್ಯರು ತಿಳುವಳಿಕೆ ಮೂಡಿಸಬೇಕು. ಇಲ್ಲದಿದ್ದರೆ ಚಿಕಿತ್ಸೆಗೆ ಕಾರ್ಮಿಕರು ಬರಲ್ಲ. ನರ್ಸಿಂಗ್ ಹೋಂಗೆ ಹೋಗುತ್ತಾರೆ. ಹಾಗೆಯೇ ಗುಣಮಟ್ಟ ಕಾಯ್ದುಕೊಳ್ಳಬೇಕು. 32 ತಿಂಗಳಲ್ಲಿ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು‌.

ಈ ಸಂದರ್ಭದಲ್ಲಿ ಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ, ಮುಖಂಡರಾದ ಸೀಸಂದ್ರ ಗೋಪಾಲಗೌಡ, ಚಂಜಿಮಲೆ ರಮೇಶ್, ಮೈಲಾಂಡಹಳ್ಳಿ ಮುರಳಿ, ಕೇಂದ್ರ ಸರ್ಕಾರದ ಕಾರ್ಮಿಕ ರಾಜ್ಯ ವಿಮಾ ನಿಗಮದ (ಇಎಸ್ಐಸಿ) ಅಧಿಕಾರಿ ರಾಜೇಶ್ ಕುಮಾರ್, ಅಕ್ಷತಾ, ಜಿಲ್ಲಾ ಅಧೀಕ್ಷಕ ಕೆಜಿಎಫ್‌ನ ರವಿ ಚಂದ್ರಶೇಖರ್‌ ಇದ್ದರು.