
ಕೋಲಾರ: ತಾಲೂಕಿನ ನರಸಾಪುರದ ಕೆರೆಯ ಜಾಗವನ್ನು ಬೆಂಗಳೂರಿನ ಭೂಗಳ್ಳರು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳುತ್ತಿದ್ದು, ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿ ಈ ಭಾಗದ ಗ್ರಾಮಸ್ಥರು, ವಿವಿಧ ಸಂಘಟನೆಗಳ ಮುಖಂಡರು ಗುರುವಾರ ಪ್ರತಿಭಟನಾ ಧರಣಿ ನಡೆಸಿದರು.
ಕಳೆದ ಒಂದೂವರೆ ತಿಂಗಳಿಂದಲೂ ಅಧಿಕಾರಿಗಳ ಗಮನಕ್ಕೆ ತರಲಾಗುತ್ತಿದ್ದರೂ ಸಹ ಬೆಳ್ಳೂರು ಸರ್ವೇ ನಂ.257ರ ನರಸಾಪುರ ಕೆರೆಯ ಬಳಿ ಅಕ್ರಮವಾಗಿ ಮಾಡಿಕೊಳ್ಳುತ್ತಿರುವ ಒತ್ತುವರಿ ಕಾರ್ಯ ನಿಂತಿಲ್ಲ. ಜೋಡಿ ಕೃಷ್ಣಾಪುರ ಗ್ರಾಮದ ಸರ್ವೇ ನಂ.೪೦ರ ಮಾಲೀಕರು ದೌರ್ಜನ್ಯವಾಗಿ ಕೆರೆಯಲ್ಲಿ ಮಣ್ಣು ತೆಗೆದು ಕೆರೆಯನ್ನು ಮುಚ್ಚಿ ಒತ್ತುವರಿ ಮಾಡಿಕೊಳ್ಳುತ್ತಿದ್ದು, ಕೂಡಲೇ ತೆರವುಗೊಳಿಸಿ ಕೆರೆಯನ್ನು ಉಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಯುವ ಮುಖಂಡ ಖಾಜಿಕಲ್ಲಹಳ್ಳಿ ಹರೀಶ್‌ಗೌಡ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಜೋಡಿಕೃಷ್ಣಾಪುರ ಗ್ರಾಮದ ಸರ್ವೇ ನಂ.೪೦ರ ಜಾಗವನ್ನು ಬೆಂಗಳೂರಿನ ಕೆಲ ಪ್ರಭಾವಿ ವ್ಯಕ್ತಿಗಳು ಖರೀದಿಸಿದ್ದು, ಇದೀಗ ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಳ್ಳುವುದಕ್ಕೆ ಮುಂದಾಗಿ ಜಾಗ ಸರಿಪಡಿಸಿಕೊಳ್ಳುತ್ತಿದ್ದಾರೆ ಈ ಹಿಂದೆ ನಾವು ಅಧಿಕಾರಿಗಳ ಗಮನಕ್ಕೆ ತಂದಿದ್ದೆವು, ಚುನಾವಣೆ ಒತ್ತಡದಲ್ಲಿ ಅಧಿಕಾರಿಗಳಿದ್ದರಿಂದ ಸರಿಯಾಗಿ ಇತ್ತ ಆದ್ಯತೆ ನೀಡಿರಲಿಲ್ಲ. ಆದರೆ, ಒತ್ತುವರಿದಾರರು ಯಾರಿಗೂ ಅಂಜದೆ ರಾತ್ರೋರಾತ್ರಿ ಲೋಡ್‌ಗಟ್ಟಲೇ ಮಣ್ಣು ಹಾಕಿ ಸಮತಟ್ಟು ಮಾಡಿಕೊಂಡು, ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಬೆಂಗಳೂರಿನ ಹಾಗೂ ಸ್ಥಳೀಯ ಕೆಲವು ಪುಡಾರಿಗಳಿಂದಾಗಿ ಕೆರೆ ಜಾಗ ಭೂಗಳ್ಳರ ಪಾಲಾಗುತ್ತಿದ್ದು ರಾಜ್ಯದ ಪ್ರಭಾವಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಗ್ರಾಮದ ಪಕ್ಕದಲ್ಲೇ ಸರಕಾರಿ ಕಂದಾಯ ಜಾಗವನ್ನು ಒತ್ತುವರಿ ನಡೆಯುತ್ತಾ ಇದ್ದರೂ ಜಿಲ್ಲಾಡಳಿತ, ತಾಲೂಕು ಆಡಳಿತ, ಜನಪ್ರತಿನಿಧಿಗಳು ಯಾವುದೇ ಸೂಕ್ತ ಕ್ರಮಕೈಗೊಂಡಿಲ್ಲ ಕೂಡಲೇ ಸರಕಾರಿ ಜಾಗ ಉಳಿಸುವ ಮೂಲಕ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಕಡಗಟ್ಟೂರು ವಿಜಯ್‌ಕುಮಾರ್ ಮಾತನಾಡಿ, ಕೆರೆಯ ಜಾಗವನ್ನು ಕೆರೆಗೆ ಉಳಿಸಿಕೊಡುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು ಮಾತಿಗಷ್ಟೇ ಸೀಮಿತರಾಗಿದ್ದಾರೆ. ನಾವು ಕಚೇರಿಗಳಿಗೆ ಅಲೆದು ಅಲೆದು ಸಾಕಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ನದಿನಾಲೆಗಳಿಲ್ಲದೆ ಮಳೆಯ ನೀರಿನ ಮೇಲೆ ಅವಲಂಭಿತವಾಗಿರುವ ಜಿಲ್ಲೆಯಲ್ಲಿ ಕೆರೆಗಳು ಉತ್ತಮವಾಗಿದ್ದರೆ ನೀರಿನ ಶೇಖರಣೆಗೂ ಸಹಕಾರಿಯಾಗುತ್ತದೆ. ಆದರೆ, ಈ ರೀತಿ ಒತ್ತುವರಿ ಕಾರ್ಯಗಳಾಗುತ್ತಿದ್ದರೆ ಕೆರೆಯ ಸ್ವರೂಪವೇ ಹಾಳಾಗುತ್ತದೆ. ನಾವು ತರಕಾರಿ ಬೆಳೆದು ಬೇರೆಯ ಜಿಲ್ಲೆಗಳಿಗೆ ನೀಡುತ್ತಿದ್ದೆವು ಆದರೆ ಇಂದು ನೀರಿನ ಸಮಸ್ಯೆಯಿಂದಾಗಿ ಬೇರೆ ಜಿಲ್ಲೆಯವರ ಬಳಿ ಖರೀದಿಸಬೇಕಾದ ಪರಿಸ್ಥಿತಿ ಬರಲು ಕೆರೆ ಒತ್ತುವರಿಗಳೇ ಕಾರಣವಾಗಿದೆ ಎಂದು ಕಿಡಿಕಾರಿದರು.
ಅಧಿಕಾರಿಗಳ ಕುಮ್ಮಕ್ಕಿನಿಂದಲೇ ಬೆಂಗಳೂರಿನವರು ಬಂದು ಇಲ್ಲಿ ಒತ್ತುವರಿ ಮಾಡುತ್ತಿದ್ದು, ಇದನ್ನು ಮಟ್ಟ ಹಾಕಲೇಬೇಕಾಗಿದೆ. ಅದಕ್ಕಾಗಿ ಪ್ರತಿಯೊಬ್ಬರೂ ಹೋರಾಟಕ್ಕೆ ಸಹಕಾರ ನೀಡಬೇಕು ಎಂದು ಕೋರಿದ ಅವರು, ನಮ್ಮ ಹೋರಾಟವನ್ನು ಅಧಿಕಾರಿಗಳು ನಿರ್ಲಕ್ಷಿಸಿದ್ದೇ ಆದಲ್ಲಿ ವಿಭಿನ್ನ ರೀತಿಯಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನರಸಾಪುರ ಗ್ರಾಪಂ ಅಧ್ಯಕ್ಷ ಕೃಷ್ಣಪ್ಪ, ಬೆಳಮಾರನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ್, ಬೆಳ್ಳೂರು ಗ್ರಾಮದ ಮುರಳಿ, ಮಂಜುನಾಥ್, ಸತೀಶ್, ಶಾಂತಕುಮಾರ್, ದಿನ್ನೇಹೊಸಹಳ್ಳಿ ಅಂಜಿನಪ್ಪ, ಶಶಿಕುಮಾರ್, ಮನು, ಸಂದೀಪ್ ರೈತ ಸಂಘದ ಕಲ್ವಮಂಜಲಿ ರಾಮು ಶಿವಣ್ಣ, ಜಿ.ನಾರಾಯಣಸ್ವಾಮಿ, ವಿಶ್ವನಾಥ್, ಮಂಜುನಾಥ್, ನಾಗರಾಜ್ ಮುಂತಾದವರು ಇದ್ದರು.