ನಮ್ಮ ಸಂವಿಧಾನ ಆಶಯಗಳನ್ನ ಎತ್ತಿಹಿಡಿಯಬೇಕು- ಹಿರಿಯ ವಕೀಲ ರುದ್ರಾರಾಧ್ಯ

ದೊಡ್ಡಬಳ್ಳಾಪುರ : ನಮ್ಮ ಸಂವಿಧಾನದ ಆಶಯಗಳಾದ ಭ್ರಾತೃತ್ವ, ಸೋದರತೆ, ಸಮಾನತೆಯನ್ನು ಕಾಯ್ದುಕೊಳ್ಳುವುದು ಮತ್ತು ಕೋಮುವಾದವನ್ನು ಅಳಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು, ಇಂದು ಕೋಮುವಾದ ಹಾಗೂ ಮೂಲಭೂತವಾದಗಳು ಬೆಳೆದು ನಿಂತಿದೆ, ಅದು ಯಾವುದೇ ಧರ್ಮದ ಮೂಲಭೂತವಾದರೂ ಮಾನವ ವಿರೋಧಿಯಾದುದು, ಇಂತಹ ವಿಷಯಗಳು ಹೆಚ್ಚಾದಾಗ ಮನುಷ್ಯ ಮನುಷ್ಯನ ನಡುವೆ ಭೇದ ಉಂಟಾಗುತ್ತದೆ ಎಂದು ಹಿರಿಯ ವಕೀಲ ರುದ್ರಾರಾಧ್ಯ ಅವರು ಹೇಳಿದರು.

ರಾಮನಗರದ ಐಜೂರು ಪೊಲೀಸ್ ಇನ್ಸ್ಪೆಕ್ಟರ್ ವಿನಾಕಾರಣ ವಕೀಲರ ಮೇಲೆ ಎಫ್‌ಐಆರ್ ದಾಖಲಿಸಿರುವುದನ್ನು ಕೂಡಲೇ ರದ್ದು ಮಾಡಬೇಕು ಎಂದು ತಾಲ್ಲೂಕು ವಕೀಲರ ಸಂಘದ ನೇತೃತ್ವದಲ್ಲಿ ನಡೆದ ಕಲಾಪ ಬಹಿಷ್ಕಾರ ಹಾಗೂ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನ್ಯಾಯಾವಾದಿಗಳಿಗೆ ಯಾವುದೇ ಧರ್ಮವಿಲ್ಲ, ಕಕ್ಷಿದಾರನಿಗೆ ಕಾನೂನು ರೀತಿಯ ನ್ಯಾಯ ಒದಗಿಸುವುದೇ ನಮ್ಮ ಧರ್ಮ ಎಂದು ಹೇಳಿದರು.

ನ್ಯಾಯಾಲಯಗಳು ನೀಡುವ ಆದೇಶವನ್ನು ಟೀಕಿಸುವ ಹಕ್ಕು ಇದೆ. ಆದರೆ, ಅದು ಕಾನೂನು ವ್ಯಾಪ್ತಿಯನ್ನು ಮೀರಿರಬಾರದು ಎಂದ ಅವರು, ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಂಚಿಕೊಂಡವರು ತಪ್ಪು ಮಾಡಿದ್ದರೆ ಅವರ ವಿರುದ್ಧ ಕೇಸು ದಾಖಲು ಮಾಡಬೇಕಿತ್ತು. ಆದರೆ, ಈವರೆಗೂ ಆತನ ಮೇಲೆ ಕೇಸು ದಾಖಲು‌ ಮಾಡಿಲ್ಲ. ಬದಲಿಗೆ ಇಡೀ ವಕೀಲ ಸಮುದಾಯದ ಮೇಲೆ ಕೇಸು ದಾಖಲಿಸಿರುವುದು ಖಂಡನೀಯ ಎಂದರು.

ವಕೀಲರ ಮೇಲೆ ದಾಖಲು ಮಾಡಿರುವ ಎಫ್‌ಐಆರ್ ಈ ಕೂಡಲೇ ವಜಾ ಮಾಡಬೇಕು, ವಕೀಲರ ನಡುವೆ ಸಾಮರಸ್ಯ ಕಾಪಾಡಬೇಕು, ಹಾಗೂ ಜಿಲ್ಲಾಡಳಿತ ಮಧ್ಯೆ ಪ್ರವೇಶ ಮಾಡಿ ಸೂಕ್ತ ತನಿಖೆ ನಡೆಸಿ ಪ್ರಕರಣವನ್ನು ಶಾಂತ ರೀತಿಯಲ್ಲಿ ಬಗೆ ಹರಿಸಬೇಕು ಎಂದು ಒತ್ತಾಯಿಸಿದರು.

ನಂತರ ವಕೀಲರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ.ಕೃಷ್ಣಮೂರ್ತಿ ಮಾತನಾಡಿ, ವಕೀಲರ ರಕ್ಷಣಾ ಕಾಯ್ದೆ ಜಾರಿಯಾದರೂ ವಕೀಲರ ಮೇಲಿನ ದೌರ್ಜನ್ಯಗಳು ನಿಲ್ಲುತ್ತಿಲ್ಲ, ಪೊಲೀಸರು 40 ಜನ ವಕೀಲರ ಮೇಲೆ ಎಫ್‌ಐಆರ್ ದಾಖಲು ಮಾಡಿದೆ, ಪೊಲೀಸರ ಈ ನಿಲುವನ್ನು ಖಂಡಿಸಿ ರಾಜ್ಯದಾದ್ಯಂತ 190 ತಾಲ್ಲೂಕುಗಳ ವಕೀಲರ ಸಂಘಗಳು ಇಂದು ಕೋರ್ಟ್ ಕಲಾಪಗಳನ್ನು ಬಹಿಷ್ಕಾರ ಮಾಡಿ ರಾಮನಗರದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿವೆ ಎಂದರು.

ಈ ಸಂದರ್ಭದಲ್ಲಿ ಸಂಘದ ತಾಲ್ಲೂಕು ಉಪಾಧ್ಯಕ್ಷ ಎಂ.ಆರ್.ಸುರೇಶ್, ನಿರ್ದೇಶಕರುಗಳಾದ ಆರ್.ಪ್ರಭಾಕರ್. ಎನ್.ಲೀಲಾವತಿ, ನಾಝಿಮ್, ಮಮ್ತಾಜ್ ಅನಿತ, ಶಿವಣ್ಣ, ಚಂದೇಶ್, ಮೋಹನ್ ಕುಮಾರ್, ಪ್ರವೀಣ್ ಕುಮಾರ್ ಗುಪ್ತಾ, ಉಮೇಶ, ಸೇರಿದಂತೆ ನೂರಾರು ವಕೀಲರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *