ಅಪಘಾತ ತಡೆ, ವಾಹನ ದಟ್ಟಣೆ ನಿಯಂತ್ರಣ, ಸರ್ಕಾರಿ ಜಾಗ ಉಳಿಸುವ ನಿಟ್ಟಿನಲ್ಲಿ ನಗರದ ಪ್ರಮುಖ ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ ಅಂಗಡಿಗಳನ್ನು ಭಾರೀ ವಿರೋಧದ ನಡುವೆಯೂ ತೆರವುಗೊಳಿಸಲಾಗಿದೆ.
ರಸ್ತೆ ಬದಿ ವ್ಯಾಪಾರಸ್ಥರು ತಮ್ಮ ವ್ಯಾಪಾರ ಮುಂದುವರಿಸಲು ನಗರಸಭೆ ವತಿಯಿಂದ ಪರ್ಯಾಯ ವ್ಯವಸ್ಥೆ ಮಾಡದೇ ಇರುವುದು ಈಗ ಆಕ್ರೋಶಕ್ಕೆ ಕಾರಣವಾಗಿದೆ.
ನಾವು ಸುಮಾರು ವರ್ಷಗಳಿಂದ ವ್ಯಾಪಾರವನ್ನೆ ನಂಬಿ ಜೀವನ ನಡೆಸುತ್ತಿದ್ದೇವೆ. ವ್ಯಾಪಾರ ಬಿಟ್ಟರೆ ನಮಗೆ ಏನೂ ಗೊತ್ತಿಲ್ಲ, ನಾವು ಅವಿದ್ಯಾವಂತರು, ಕಡುಬಡವರು ಕೂಡ ಹೌದು, ಆದರೆ ನಮ್ಮ ಮಕ್ಕಳು ನಮ್ಮಂತೆಯೇ ಅವಿದ್ಯಾವಂತರಾಗಿ, ಕಡುಬಡವರಾಗಿ ಇರಬಾರದು ಎರಡಕ್ಷರ ಕಲಿತು ಒಂದೊಳ್ಳೆ ಹುದ್ದೆ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ನಮ್ಮ ಆಸೆ. ಆದರೆ ನಮ್ಮ ಆಸೆ ನಿರಾಸೆಯಾಗುವ ಭಯದಲ್ಲಿದ್ದೇವೆ ಎಂದು ರಸ್ತೆ ಬದಿ ವ್ಯಾಪಾರಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಹೌದು ಎಲ್ಲರ ಪ್ರಾಣವೂ ಅತ್ಯಮೂಲ್ಯ, ಅಪಘಾತಗಳಿಂದ ಸಾವಿಗೀಡಾದವರ ಬಗ್ಗೆ ನಮಗೂ ನೋವು, ಅನುಕಂಪ, ಸಂಕಟ ಇದೆ. ಆದರೆ ರಸ್ತೆಬದಿ ವ್ಯಾಪಾರಸ್ಥರಿಂದಲೇ ಅಪಘಾತಗಳು ಆಗುತ್ತದೆ ಎನ್ನುವುದು ಸರಿಯಲ್ಲ, ಬದಲಾಗಿ ವಾಹನ ಸವಾರರು ಸಂಚಾರಿ ನಿಯಮ ಪಾಲನೆ ಮಾಡದೇ ಅಜಾಗುರಕತೆಯಿಂದ ವಾಹನ ಚಲಾಯಿಸುವುದು, ಅವೈಜ್ಞಾನಿಕ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಂದ ಸೇರಿದಂತೆ ನಾನಾ ರೀತಿಯ ಕಾರಣಗಳಿಂದ ಅಪಘಾತಗಳು ಸಂಭವಿಸುತ್ತವೆ. ಎಲ್ಲರಿಗೂ ಪ್ರಾಣ ಇರುವಂತೆ ನಮಗೂ ಪ್ರಾಣ ಇದೆ. ನಮ್ಮ ಪ್ರಾಣದ ಬಗ್ಗೆಯೂ ಅಧಿಕಾರಿಗಳು, ಜನಪ್ರತಿನಿಧಿಗಳು ಯೋಚನೆ ಮಾಡಬೇಕು ಎಂದು ರಸ್ತೆ ಬದಿ ವ್ಯಾಪಾರಸ್ಥರು ಆಗ್ರಹಿಸಿದರು.
ಯಾರೋ ಪ್ರಭಾವಿಗಳ ಮಾತಿಗೆ ಅಧಿಕಾರಿಗಳು ಮಣಿದು ರಸ್ತೆಬದಿ ವ್ಯಾಪಾರಸ್ಥರನ್ನು ಬೀದಿಗೆ ತಂದಿದ್ದಾರೆ. ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಪಕ್ಷಪಾತ, ದಬ್ಬಾಳಿಕೆಯಿಂದ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ ಎಂದು ಆರೋಪಿಸಿದರು.
ವ್ಯಾಪಾರ ಮಾಡಲು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಲು ಇಂದು ಬೆಳಿಗ್ಗೆ ಬೃಹತ್ ಜಾಥಾ ಮೂಲಕ ನಗರಸಭೆ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಮನವಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.