
ಮಲೆನಾಡಿನಲ್ಲಿ ಸಾಮಾನ್ಯವಾಗಿ ಕಾಣುವ ಈ ಜೀವಿ ಇಂಬಳ(ಜಿಗಣೆ). ಗೊತ್ತೇ ಆಗದಂತೆ ಮೈಮೇಲೆ ಹತ್ತಿಕೊಂಡು ರಕ್ತ ಕುಡಿದು ಪೂರ್ತಿ ಹೊಟ್ಟೆ ತುಂಬಿದ ಮೇಲೆ ಉದುರಿ ಹೋಗುತ್ತದೆ. ಜಿಗಣೆ ಅಂದರೆ ಇದೇನಾ? ಬೇರೇನಾ? ಈ ಇಂಬಳದ ಬಗ್ಗೆ ಇಂಟೆರೆಸ್ಟಿಂಗ್ ಸ್ಟೋರಿ ಇಲ್ಲಿದೆ ಓದಿ….
ಜಿಗಣೆ(ಇಂಬಳ) ಇದು ಅನೆಲಿಡ ವಿಭಾಗದ ಹಿರುಡೀನಿಯ ವರ್ಗಕ್ಕೆ ಸೇರಿದ ಅಕಶೇರುಕ (ಲೀಚ್). ಎಷ್ಟು ಬುದ್ದಿಜೀವಿಗಳೆಂದರೆ, ಅವುಗಳು ರಕ್ತ ಹೀರುವ ಮುನ್ಮ ಕಶೇರುಕ ಪ್ರಾಣಿಗಳ ಅಂದರೆ, ಹಸು, ಆಡು ಕುರಿ, ಎಮ್ಮೆ ಮತ್ತು ಮನುಷ್ಯರ ಚರ್ಮದ ಮೇಲೆ Hirudin ಎಂಬ ರಾಯಾಸಾಯನಿಕ ವಸ್ತುವನ್ನು ಸ್ರವಿಸುತ್ತವೆ, ಈ ರಾಸಾಯನಿಕವು ತಾತ್ಕಾಲಿಕವಾಗಿ ಆ ಪ್ರಾಣಿಯ ಚರ್ಮದ ಮೇಲೆ ಸಣ್ಣ ಅರಿವಳಿಕೆಯಾಗಿ ಕೆಲಸ ಮಾಡುವುದರ ಜೊತೆಗೆ ಜೀವಿಯ ದೇಹದ ರಕ್ತವು ಆ ಭಾಗದಲ್ಲಿ ಸ್ವಲ್ಪ ಕಾಲದವರೆಗೆ ಹೆಪ್ಪುಗಟ್ಟದಂತೆ ತಡೆಯುತ್ತದೆ. ಹಾಗಾಗಿ ಜಿಗಣೆಯು ರಕ್ತವನ್ನು ಯಾವುದೇ ಅಡೆತಡೆಯಿಲ್ಲದೆ ಸರಾಗಾವಾಗಿ ಹೀರಲು ಈ ರಾಸಾಯನಿಕವು ಸಹಾಯ ಮಾಡುತ್ತದೆ.
ಸಾಮಾನ್ಯವಾಗಿ ನಮ್ಮ ಚರ್ಮದ ಮೇಲೆ ಅಲ್ಪ ಸ್ವಲ್ಪ ಗಾಯವಾಗಿ ರಕ್ತ ಹೊರ ಬರಲು ಪ್ರಾರಂಭಿಸಿದ ತಕ್ಷಣ ನಮ್ಮ ದೇಹದ ವ್ಯವಸ್ಥೆಯು ತಕ್ಷಣ ರಕ್ತವನ್ನು ಹೆಪ್ಪುಗಟ್ಟಿಸಿ ಹೆಚ್ಚಿನ ರಕ್ತಸ್ರಾವವಾಗುವುದನ್ನು ತಡೆಯುತ್ತದೆ. ಈ ಜಿಗಣೆಯು ಹಿರುಡಿನ್(Hirudin) ಅನ್ನು ಸ್ರವಿಸುವುದರಿಂದ ಅಲ್ಲಿ ತಾತ್ಕಾಲಿಕವಾಗಿ ರಕ್ತ ಹೆಪ್ಪುಗಟ್ಟೊಲ್ಲ. ಈ ರಾಸಾಯನಿಕವನ್ನು ಸ್ರವಿಸುವುದರಿಂದಲೇ ಇಡೀ ವರ್ಗವನ್ನು ಹಿರುಡೀನಿಯಾ ಎಂದು ವರ್ಗೀಕರಿಸಲಾಗಿದೆ.
ಈ ವರ್ಗದ ಪ್ರಾಣಿಗಳೆಲ್ಲವೂ ಇದೇ ರಾಸಾಯನಿಕವನ್ನು ಸ್ರವಿಸೋದು ವಿಶೇಷ. ಇವುಗಳು ಸಿಹಿನೀರಿನ ಕೊಳ, ಕೆರೆ, ಜೌಗು ಪ್ರದೇಶ ಮತ್ತು ನಿಧಾನವಾಗಿ ಹರಿಯುವ ಹಳ್ಳಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ನೀರಿನಲ್ಲಿ ತನ್ನ ಮಾಂಸಲವಾದ ದೇಹವನ್ನು ಅಲೆಗಳಂತೆ ಬಳುಕಿಸಿ ಈಜುತ್ತದೆ. ಆಹಾರಾರ್ಜನೆಗಾಗಿ ನೆಲದ ಮೇಲೂ ಬರುವುದುಂಟು, ಅದರಲ್ಲೂ ಶೀತ ಜಾಸ್ತಿಯಿರುವ ಕಾಡು ಅಥವಾ ಕೆಲವೊಮ್ಮೆ ಬಯಲು ಸೀಮೆಯ ಭತ್ತದ ಗದ್ದೆಗಳಲ್ಲೂ ಸಾಮಾನ್ಯವಾಗಿ ಕಾಣಸಿಗುತ್ತವೆ. ನೆಲದ ಮೇಲೆ ದೇಹದ ಎರಡೂ ತುದಿಗಳಲ್ಲಿರುವ ಹೀರುಬಟ್ಟಲುಗಳ (Succours) ನೆರವಿನಿಂದ ದೇಹವನ್ನು ಕುಣಿಕೆಯಂತೆ ಬಾಗಿಸಿ ಚಲಿಸುತ್ತದೆ. ಜಿಗಣೆ ಒಂದು ರೀತಿಯಲ್ಲಿ ಬಹಿರ್ ಪರತಂತ್ರ ಜೀವಿ. ಇದು ವಾಸಿಸುವ ನೆಲೆಯ ಬಳಿಗೆ ನೀರು ಕುಡಿಯಲು ಬರುವ ಕಶೇರುಕಗಳ ರಕ್ತವನ್ನು ಹೀರಿ ಬದುಕುತ್ತ ನೀರಿನಲ್ಲಿಯೇ ವಾಸಿಸುವ ಮೀನು, ಆಮೆಗಳ ಪರಾವಲಂಬಿಯಾಗಿ ಬದುಕುವುದೂ ಉಂಟು.. ಎಲ್ಲ ಜಿಗಣೆಗಳೂ ರಕ್ತ ಹೀರಿ ಜೀವಿಸುವ ಪರಾವಲಂಬಿಗಳಲ್ಲ. ಕೆಲವು ಬಸವನ ಹುಳು, ಕೀಟಗಳ ಡಿಂಬ ಮತ್ತು ಇತರ ಸೂಕ್ಷ್ಮಜೀವಿಗಳನ್ನು ತಿಂದು ಜೀವಿಸುತ್ತವೆ.
ಒಂದು ಸಂತಸದ ಸುದ್ದಿ ಅಂದ್ರೆ ಉಂಬಳದ ತವರುಮನೆ ಬಹುಷಃ ತೋಟದ ಏರಿಯಾ. ಒಮ್ಮೆ ನಡೆದು ಹೋದ್ರೆ ತಕ್ಷಣ ಅವಕ್ಕೆ ಟವರ್ ಸಿಕ್ಕಿ ತಲೆ ಆಡಿಸುತ್ತವೆ ಹಿಂದೆ ಬಂದವನಿಗೆ ಫಿಕ್ಸ್. ಕೆರೆಯಲ್ಲಿ ಇರುವುದು ಜಿಗಣೆ. ಈ ಉಂಬಳ ಮಾತ್ರ ನೆಲದಲ್ಲಿ ವಾಸ. ಅವುಗಳ ಬಳಿ ಬಂದೋರಿಗೆ ವನವಾಸ. ಅದನ್ನು ತಡೆಯಲು ಒಬ್ಬೊಬ್ಬರ ಸಲಹೆ ಬೇರೆ. ತಂಬಾಕು ಹಚ್ಚಿ, ಸುಣ್ಣಹಚ್ಚಿ, ಸೆಂಟ್ ಹೊಡ್ಕೊಳಿ. ಅಂತೆಲ್ಲ. ಈ ಎಲ್ಲಾ ಪ್ರಯೋಗದ ನಂತ್ರ ಮನೆಗೆ ಬಂದ್ರೆ ಮದ್ಯ ಕಾಲುಬೆರಳಲ್ಲಿ ಪ್ರತ್ಯಕ್ಷ. ತೆಗೆದು ಕೊಂದು ಹಾಕೋಕು ವಿವಿಧ ವಿಧಾನಗಳು. ಕಚ್ಚಿ ಬಿದ್ದು ಹೋದನಂತರ ರಕ್ತ ನಿಲ್ಲಿಸಲು ಹರಸಾಹಸ. ಸುಣ್ಣ ಹಚ್ಚು, ವಸ್ತ್ರದ ದಾರ ನೂಲು ಹಾಕು ಮುಂತಾದ ಸಲಹೆಗಳು. ರಕ್ತನಿಂತು ಮರುದಿನ ತುರಿಕೆ ಶುರು. ತುರಿಸಿ ತುರಿಸಿ ರಕ್ತ ಬಂದಾಗ ಸಮಾಧಾನ. ನಂತರ ಉರಿ. ಮತ್ತೆ ಉಂಬಳ ಹತ್ತದಂತೆ ಗನ್ ಬೂಟ್ ಬಳಕೆ. ಮತ್ತೆ ಉಂಬಳ ಗೊತ್ತಾಗದ ಹಾಗೆ ಒಳಗೆ ಎಂಟ್ರಿ. ಬಿದ್ದಾಗಲೇ ಗೊತ್ತಾಗೋದು. ಬಡವರ ರಕ್ತ ಹೀರೊ ರಾಜಕಾರಣಿಗಳು ಇವರ ಆತ್ಮೀಯ ಗೆಳೆಯರು ಅಂತಾ ಎನ್ನುತ್ತಾರೆ ಇದರಿಂದ ನೋವು ಅನುಭವಿಸಿದ ವ್ಯಕ್ತಿ.
ಇಂಬಳ ಎಂದರೆ ಮಲೆನಾಡು ಭಾಗದಲ್ಲಿ ಜಿಗಳೇ ಅಥವಾ ಜಿಗಣೆ ಎನ್ನುತ್ತಾರೆ ಇವು ಹೆಚ್ಚಾಗಿ ಕೆರೆಯಲ್ಲಿ ವಾಸಿಸುತ್ತಿರುತ್ತವೆ ಜಾನುವಾರುಗಳು ನೀರು ಕುಡಿಯುವಾಗ ಮೂಗಿಗೆ ಸೇರಿಕೊಂಡು ರಕ್ತ ಹೀರುತ್ತವೆ. ತೆಗೆಯುವುದು ಬಹಳ ಕಷ್ಟ. ಒಂದು ವಿಶೇಷ ಎಂದರೆ ಬೇಸಿಗೆಯಲ್ಲಿ ಸತ್ತು ಹೋದ ಹಾಗೆ ಬಿದ್ದಿರುತ್ತವೆ. ಒಂದೆರಡು ಮಳೆ ಬಂದ ತಕ್ಷಣ ಜೀವಬಂದಂತಾಗುತ್ತದೆ. ಅವು ಬೇರೆ ಏನು ಆಹಾರ ಸೇವಿಸುವುದಿಲ್ಲ. ಬರೀ ರಕ್ತ ಮಾತ್ರ ಅವುಗಳ ಆಹಾರ.
ಲೀಚ್ theropy ಮಾಡಿಸಿಕೊಂಡ ವ್ಯಕ್ತಿಯ ಮಾತುಗಳು, ಈ ಲೀಚ್ theropy ನನ್ನ ಬಾಳಿಗೆ ಬದುಕು ಚೆಲ್ಲಿದಂತೂ ಸತ್ಯ. ಕೇವಲ ಬಿದ್ದ ಪರಿಣಾಮ ಕಾಲಿಗೆ ಪೆಟ್ಟು ಬಿದ್ದು ಕೀವು ರಕ್ತ ತುಂಬಿದ ಪರಿಣಾಮ ಗಾಯ ಮಾಯದೆ ನಾಲಕ್ಕೂ ವರ್ಷ ತುಂಬಾ ನೋವು ಅನುಭವಿಸಿ ನಡೆಯಕ್ಕೆ ಆಗದೆ ತುಂಬಾ ಬಳಲಿ ಬೇಂಡಾಗಿ ಹೋಗಿದ್ದೆ, ಕಡೆಗೆ ಡಾಕ್ಟರ್ ಕಾಲು ಕಡೆಯಲು ಸೂಚಿದ್ದರು, ಸತ್ತರೆ ಹೀಗೆ ಸಾಯುವೆ ಕಾಲು ಮಾತ್ರ ತೆಗಯುವದಿಲ್ಲ ಅಂತ ಪ್ರತಿಜ್ಞೆ ಮಾಡಿ ಬಿಟ್ಟೆ. ಹಣ ಸಾಕಷ್ಟು ಕಳೆದು ಕೊಂಡೆ. ಅಂತಹ ಸಮಯದಲ್ಲಿ ಈ ಜಿಗಣೆ ಟ್ರೀಟ್ ಮೆಂಟ್ ನನಗೆ ವರ ಆಯಿತು. ಕೇವಲ ಎರಡೇ ತಿಂಗಳ ಇದರ ಸದುಪಯೋಗ ಪಡೆದ ನಂತರ ಗಾಯ ಸಂಪೂರ್ಣ ಮೆಲ್ಲ ಮೆಲ್ಲಗೆ ವಾಸಿ ಆಗ ತೊಡಗಿ, ಇಗ ಸಂಪೂರ್ಣ ಗುಣಮುಖನಾಗಿ ಒಂದೂವರೆ ವರ್ಷದಿಂದ ನಿಮ್ಮೆಲ್ಲರ ಆಶೀರ್ವಾದ ದಿಂದ ನಡೆಯತೊಡಗುತ್ತಿರುವೆ ಎಂದು ಹೇಳಿದರು.
ವಿಶೇಷ ಸೂಚನೆ… ಜಿಗಣಿ ಕೇವಲ ದೇಹದಲ್ಲಿಯ ಕೆಟ್ಟ ರಕ್ತ ಮಾತ್ರ ಹಿರೋದು. ಈ ಟ್ರೀಟ್ ಮೆಂಟ್ ಗಳಿಗೆ ಹೆದರುವ ಅವಶ್ಯಕತೆ ಇಲ್ಲ, ನುರಿತ ವೈದ್ಯರಿಂದ ಮಾತ್ರ ಚಿಕಿತ್ಸೆ ಫಲಕಾರಿ ಆಗಲು ಸಾಧ್ಯ.
ಜಿಗಣೆ ದೊಡ್ಡದು…. ಇಂಬಳ ಸಲ್ಪ ಸಣ್ಣದು ಅಷ್ಟೇ… ರಕ್ತ ಹೀರಿದ ಮೇಲೆ ದೊಡ್ಡದಾಗುತ್ತೆ. ತುರಿಕೆ ನಂಜು ಅದು. ರಬ್ಬರ್ ನಂತೆ ದೇಹ ಅದರದ್ದು, ಗಾಯ ಆದಲ್ಲಿ ನಂಜು/ತುರಿಕೆ ಕಡಿಮೆ ಆಗಲು ಅರಿಶಿನ ಉಪ್ಪು ಹಚ್ಚಬೇಕು. ಇಂಬಳ ಉಪ್ಪು ಹಾಕಿದ್ರೆ ಸಾಯುತ್ತೆ… ನಮಗೆ ಕಚ್ಚಿದಾಗ ರಕ್ತಸ್ರಾವ ನಿಲ್ಲಿಸೋಕೆ ಸುಣ್ಣ ತಂಬಾಕು ಹಚ್ಚಬೇಕು.
ಜಿಗಣೆ ಮತ್ತು ಇಂಬಳ ಎರಡೂ ಒಂದೆ. ಜಿಗಣೆ ಕನ್ನಡ ಪದವಾದರೆ ಇಂಬಳ ಇಂಬ್ಳ ಮಲೆನಾಡಿನ ಪದ. ತಿಗಣೆ ಬೇರೆ ಅಷ್ಟೆ. ಜಿಗಣೆ ತುಂಬಾ ಪರೋಪಕಾರಿ ಜೀವಿ. ಅದು ಕಚ್ಚಿ ಹೀರಿದ ರಕ್ತದಷ್ಟೇ ಹೊರಹೋದರೆ ರಕ್ತ ಶುದ್ಧಿಯಾಗುತ್ತದೆ ಎಂಬ ಮಾತಿದೆ. ಕುರು, ಹುಣ್ಣು ಆದಲ್ಲಿ ಆ ಜಾಗಕ್ಕೆ ಜಿಗಣೆ ಬಿಟ್ಟು ಕೀವು ಹೀರುವಂತೆ ಮಾಡಿ ಕೆಟ್ಟ ರಕ್ತವನ್ನೆಲ್ಲಾ ಬಸಿದರೆ ಗಾಯ ಬೇಗ ವಾಸಿಯಾಗುತ್ತದೆ. ಆಯುರ್ವೇದ ಚಿಕಿತ್ಸೆಯಲ್ಲಿ ಇದರ ಬಳಕೆಯಿದೆ. ಅದರ ಮೈಮೇಲೆ ಇರುವ ಅಂಟು ದ್ರವ ದೇಹದಲ್ಲಿರುವ ನಂಜಿನ ಅಂಶವನ್ನು ತೆಗೆಯುತ್ತದೆ. ಕೆಲವರಿಗೆ ತುರಿಕೆಯಾಗುತ್ತದೆ, ಅಲರ್ಜಿಯಾಗುತ್ತದೆ.
ಮಲೆನಾಡಿನ ಜಿಗಣೆಗಳಲ್ಲಿ ಹಲವು ಬಗೆಗಳಿವೆ…
ಊರು ಜಿಗಣೆ
ಕಾಡು ಜಿಗಣೆ
ಹುಲ್ಲು ಜಿಗಣಿ
ಹಾರುವ ಜಿಗಣಿ
ಪಟ್ಟೆ ಜಿಗಣಿ
ಸೂಜಿ ಜಿಗಣಿ
ಏಡಿ ಜಿಗಣಿ (ಏಡಿಯ ಒಳಗಿರುವ ಜಿಗಣಿ)
ಹಾವಿಗೆ ಕಡಿದ ಜಿಗಣಿ ಮನುಷ್ಯರಿಗೆ ಕಡಿದರೆ ತುರಿಕೆ ಮತ್ತೆ ಕೆಲವರಿಗೆ ಸಣ್ಣ ಗಾಯ ಆಗುತ್ತದೆ ಎಂಬ ನಂಬಿಕೆ ಇದೆ.
ವೆರಿಕೋಸ್ ರಕ್ತನಾಳಗಳನ್ನು ಶುದ್ಧ ಮಾಡಲು ಇವನ್ನು ಬಳಸುತ್ತಾರೆ. ಇವು ( ಇಂಬಳ, ಉಂಬುಳ, ಜಿಗಣೆ ) ನೀಲಿ ರಕ್ತವನ್ನು ಹೀರಿ ನಾಳಗಳನ್ನು ಶುದ್ಧ ಮಾಡುತ್ತವೆ. ಮೈಯ ಮೇಲೆ ಕಚ್ಚಿದಾಗ, ತಂಬಾಕು ಎಲೆ ಅಥವಾ ಉಪ್ಪು ಉಜ್ಜಿದರೆ ಕಳಚಿ ಬೀಳುತ್ತವೆ.
ಜಿಗಣೆಯ ಕೆಲವು ಪ್ರಭೇದಗಳು ಮನುಷ್ಯ ಮತ್ತು ಸಾಕುಪ್ರಾಣಿಗಳ ರಕ್ತವನ್ನು ಹೀರಿ ಮಾಡಿದರೂ ಕೆಲವು ಮನುಷ್ಯನಿಗೆ ಉಪಕಾರಿಗಳೂ ಆಗಿವೆ. ಹಿರುಡೊ ಮೆಡಿಸಿನ್ಯಾಲಿಸ್ ಎಂಬ ಪ್ರಭೇದದ ಜಿಗಣೆಗಳನ್ನು ಹುಣ್ಣು, ಕುರು ಇತ್ಯಾದಿಗಳಿಂದ ಕೆಟ್ಟ ರಕ್ತವನ್ನು ತೆಗೆಯಲು ವೈದ್ಯರು ಉಪಯೋಗಿಸುತ್ತಾರೆ. ಇವು ರಕ್ತವನ್ನು ಹೀರುವಾಗ ಮನುಷ್ಯನಿಗೆ ನೋವಾಗುವುದಿಲ್ಲವಾದುದರಿಂದ ಈ ವಿಧಾನವನ್ನು ಅನುಸರಿಸುತ್ತಾರೆ. ಅಲ್ಲದೆ ಜಿಗಣೆಗಳಿಂದ ಪ್ರತ್ಯೇಕಿಸಿದ ಕೆಲವು ರಾಸಾಯನಿಕಗಳನ್ನು ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಬಳಸುತ್ತಾರೆ. ಪಿಡುಗುಗಳಾಗಿ ಮನುಷ್ಯನಿಗೆ ಹಾನಿಕಾರಕವಾದ ಕೀಟ ಡಿಂಬಗಳು, ಹುಳುಗಳು, ಮೃದ್ವಂಗಿಗಳು ಮುಂತಾದ ಪ್ರಾಣಿಗಳನ್ನು ಜಿಗಣೆಗಳು ಆಹಾರವಾಗಿ ಬಳಸುವುದರಿಂದ ಅವುಗಳನ್ನು ನಾಶಪಡಿಸಿ ಮನುಷ್ಯನಿಗೆ ಉಪಕಾರವೆಸಗುತ್ತವೆ ಎಂದು ಜನ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.