ತಾಲೂಕಿನ ಕೊಟ್ಟಿಗೆ ಮಾಚೇನಹಳ್ಳಿ ಹಾಗೂ ಹೊಸಹಳ್ಳಿಯಿಂದ ಶಾಲಾ ವಿದ್ಯಾರ್ಥಿಗಳನ್ನು ದೊಡ್ಡಬಳ್ಳಾಪುರಕ್ಕೆ ಹೊತ್ತು ತರುತ್ತಿದ್ದ ಎರಡು ಕೆಎಸ್ಆರ್ ಟಿಸಿ ಬಸ್ಸುಗಳು ಮಾರ್ಗ ಮಧ್ಯದಲ್ಲೇ ಕೆಟ್ಟು ನಿಂತ ಪರಿಣಾಮ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಇತರೆ ಪ್ರಯಾಣಿಕರು ಪರದಾಡುವಂತಾಗಿತ್ತು.
ಕೊಟ್ಟಿಗೆಮಾಚೇನಹಳ್ಳಿ ಬಸ್ ಹೊಸಹಳ್ಳಿ ಸಮೀಪದ ದೊಡ್ಡಹಾಳ್ಳದಲ್ಲಿ ಒಂದು ಬಸ್, ಉಜ್ಜನಿ ಬಸ್ ಹೊಸಹಳ್ಳಿ ಬಳಿಯ ಕೆಇಬಿ ಮುಂಭಾಗ ಕೆಟ್ಟು ನಿಂತಿದೆ.
ಹಳೆಯ ಬಸ್‌ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿರುವುದರಿಂದ ವಿದ್ಯಾರ್ಥಿಗಳು ಹೊತ್ತಲ್ಲದ ಹೊತ್ತಿಗೆ ಶಾಲಾ ಕಾಲೇಜುಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಸರ್ಕಾರ ಪ್ರತಿ ಗ್ರಾಮಗಳಿಗೆ ಬಸ್‌ಗಳ ಸೌಕರ್ಯ ಕಲ್ಪಿಸಬೇಕು ಮತ್ತು ವಿದ್ಯಾರ್ಥಿಗಳು ಸಕಾಲಕ್ಕೆ ಶಾಲಾ-ಕಾಲೇಜುಗಳಿಗೆ ತೆರಳಲು ಅನುಕೂಲವಾಗಬೇಕೆಂಬ ಉದ್ದೇಶದಿಂದ ಸಾರಿಗೆ ಸಂಚಾರಕ್ಕಾಗಿ ಲಕ್ಷಾಂತರ ರೂ.ಖರ್ಚು ಮಾಡುತ್ತಿದೆ.
ಬಸ್ ಘಟಕಗಳಲ್ಲಿ ನಿಲ್ಲಿಸಲಾದ ಹಳೆಯ ಬಸ್‌ಗಳನ್ನು ಹಳ್ಳಿಗಳಿಗೆ ಬಿಡಲಾಗುತ್ತಿದೆ. ಇದರಿಂದ ಬಸ್‌ಗಳು ಎಲ್ಲೆಂದರಲ್ಲಿ ಕೆಟ್ಟು ಹೋಗುತ್ತಿದ್ದು, ಗಂಟೆಗಟ್ಟಲೆ ಕಾದು ಖಾಸಗಿ ವಾಹನದಲ್ಲಿ ತೆರಳುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ.
ಹಳ್ಳಿಗಳಿಗೆ ಬರುವ ಬಹುತೇಕ ಬಸ್‌ಗಳು ಹಳೆಯದ್ದಾಗಿದ್ದು, ಸಂಚಾರಕ್ಕೆ ಯೋಗ್ಯವಾಗಿಲ್ಲ. ಆದರೂ ಗ್ರಾಮೀಣ ಪ್ರದೇಶಗಳಿಗೆ ಡಕೋಟಾ ಬಸ್‌ಗಳನ್ನು ಓಡಿಸಲಾಗುತ್ತಿದೆ. ಆದ್ದರಿಂದ ಕೂಡಲೇ ಹೊಸ ಬಸ್‌ಗಳನ್ನು ಹಳ್ಳಿಗಳಿಗೆ ಓಡಿಸಲು ಸಾರಿಗೆ ಸಂಸ್ಥೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.