ಕಳೆದ ಸುಮಾರು ಎರಡು ವರ್ಷಗಳಿಂದ ನನ್ನ ಹಾಗೂ ಕನ್ನಡ ಮಾಧ್ಯಮ ಮಿತ್ರರ ನಡುವೆ ಒಂದು ಕಂದಕ ಉಂಟಾಗಿತ್ತು. ಈ ವರಮಹಾಲಕ್ಷ್ಮಿ ಹಬ್ಬದ ಮುನ್ನಾದಿನ, ಮಿತ್ರ ರಾಕ್ ಲೈನ್ ವೆಂಕಟಕೇಶ್ ನೇತೃತ್ವದಲ್ಲಿ ನನ್ನ ಹಾಗೂ ಕನ್ನಡದ ಪ್ರಮುಖ ಮಾಧ್ಯಮಗಳ ಸಂಪಾದಕರ ನಡುವೆ ಮಾತುಕತೆ ನಡೆದು ಇಡೀ ಪ್ರಕರಣ ಸುಖಾಂತ್ಯಗೊಂಡಿದೆ ಎಂದು ನಟ ದರ್ಶನ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಕೆಲ ವರ್ಷಗಳ ಹಿಂದಿನ ನನ್ನ ಆಡಿಯೋ ಒಂದು ದುರುದ್ದೇಶಪೂರ್ವಕವಾಗಿ ವೈರಲ್ ಆಗಿ ಇಡೀ ವಿವಾದಕ್ಕೆ ಕಾರಣವಾಗಿತ್ತು. ಅದು ಯಾವುದೋ ವಿಷಮ ಘಳಿಗೆಯಲ್ಲಿ ಒಬ್ಬ ವ್ಯಕ್ತಿಯ ಮಾತಿಗೆ ಪ್ರತಿಕ್ರಿಯೆಯಾಗಿತ್ತು. ಅದು ಮಾಧ್ಯಮದ ಇತರ ವ್ಯಕ್ತಿಗಳನ್ನು ಕುರಿತು ಆಡಿದ ಮಾತಾಗಿರಲಿಲ್ಲ. ಆ ವ್ಯಕ್ತಿ ಯಾವ ದುರುದ್ದೇಶದಿಂದ ಮಾಡಿದರು ಗೊತ್ತಿಲ್ಲ ಆದರೂ ಆ ವ್ಯಕ್ತಿಗೆ ಒಳ್ಳೆಯದಾಗಲಿ ಮುಂದೆ ಆ ವ್ಯಕ್ತಿ ಈ ರೀತಿಯ ದುರುದ್ದೇಶವನ್ನು ಮರುಕಳಿಸದಿರಲಿ.
ಆದರೂ ಅಂತಹ ಮಾತಿನಿಂದ ನೋವುಂಟಾಗಿದ್ದರೆ ಮಾಧ್ಯಮದ ಹಿರಿಯರಿಗೆ ಕ್ಷಮೆ ಕೋರುವುದರಲ್ಲಿ ತಪ್ಪಿಲ್ಲ. ಈ ಅಯಾಚಿತ ಘಟನೆಗೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ರಂಗದ ಕ್ಷಮೆ ಇರಲಿ ಎಂದು ನಟ ದರ್ಶನ್ ಹೇಳಿದ್ದಾರೆ.
ಒಟ್ಟಾರೆ ನಟ ದರ್ಶನ್- ಕನ್ನಡ ಮಾಧ್ಯಮದ ನಡುವೆ ಎರಡು ವರ್ಷಗಳಿಂದ ಇದ್ದ ವೈಮನಸ್ಯ ಮಾತುಕತೆಯಿಂದ ಇತ್ಯರ್ಥಪಡಿಸಲಾಗಿದೆ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ಎಡಿಟರ್ಸ್ ಗಿಲ್ಡ್ ಆಫ್ ಬೆಂಗಳೂರು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದರ್ಶನ್ ಮತ್ತು ಮಾಧ್ಯಮದ ನಡುವಿನ ಭಿನ್ನಾಭಿಪ್ರಾಯ ಸುಖಾಂತ್ಯ ಕಂಡಿದೆ.