ಪರಿಸರ ಮಾಲಿನ್ಯ ಉಂಟುಮಾಡುವ ಬಾಂಬೆ ಗಣೇಶ, ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿ.ಒ.ಪಿ) ನಿಂದ ತಯಾರಿಸಿದ ಗಣೇಶ ವಿಗ್ರಹಗಳನ್ನು ಮಾರಾಟ ಮಾಡುವುದು ಹಾಗೂ ಬಳಕೆ ಮಾಡುವುದನ್ನು ನಿಷೇಧಿಸಲಾಗಿದ್ದು, ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಈ ಆದೇಶಕ್ಕೆ ಕ್ಯಾರೆ ಎನ್ನದೇ ನಗರದ ನಗರಸಭೆ ಮುಂಭಾಗದಲ್ಲಿ ಬಾಂಬೆ ಗಣೇಶಮೂರ್ತಿಗಳ ಮಾರಾಟ ಮಾಡಲಾಗುತ್ತಿದ್ದು, ದಾಳಿ ನಡೆಸಿದ ನಗರಸಭೆ ಅಧಿಕಾರಿಗಳು ಬಾಂಬೆ ಗಣೇಶಮೂರ್ತಿಗಳನ್ನ ವಶಕ್ಕೆ ಪಡೆದಿದ್ದಾರೆ.
ದೊಡ್ಡಬಳ್ಳಾಪುರ ನಗರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಬಿದಿರು ಮತ್ತು ಹುಲ್ಲಿನಿಂದ ಮಾಡಲಾಗಿದ್ದ ಅಪಾಯಾಕಾರಿ ಬಣ್ಣಗಳಿಂದ ಕೂಡಿದ ಗಣೇಶಮೂರ್ತಿಗಳ ಮಾರಾಟ ಮಾಡಲಾಗುತ್ತಿದ್ದು, ಈ ಕುರಿತು ಪರಿಸರ ಪ್ರೇಮಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪೌರಾಯುಕ್ತರಾದ ಕಾರ್ತಿಕೇಶ್ವರ್ ದಾಳಿ ನಡೆಸಿ ಮಾರಾಟಕ್ಕೆಂದು ಇಡಲಾಗಿದ್ದ ಬಾಂಬೆ ಗಣೇಶಮೂರ್ತಿಗಳನ್ನ ಜಪ್ತಿ ಮಾಡಿದ್ದಾರೆ.
ಈ ವೇಳೆ ಪರಿಸರ ಪ್ರೇಮಿ ಚಿದಾನಂದ್, ಸಾಮಾಜಿಕ ಹೋರಾಟಗಾರರಾದ ಗಿರೀಶ್ ಸೇರಿದಂತೆ ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.