ಕುಳಿತುಕೊಳ್ಳುವ ಪಾರ್ಕ್ ಬೆಂಚುಗಳನ್ನು ಕಿಡಿಗೇಡಿಗಳು ಹೊಡೆದುರುಳಿಸಿರುವ ಘಟನೆ ಕಳೆದ ರಾತ್ರಿ ನಗರಸಭೆ ಪಾರ್ಕಿನಲ್ಲಿ (ಮೈ.ತಿ.ಶ್ರೀಕಂಠಯ್ಯ ಉದ್ಯಾನವನ) ನಡೆದಿದೆ.
ಇತ್ತೀಚೆಗೆ ಉದ್ಯಾನದ ಮಧ್ಯಭಾಗದಲ್ಲಿರುವ ಕಾಟೇಜ್ ಮಾದರಿಯ ತಂಗುದಾಣದಲ್ಲಿ ವಾಯು ವಿಹಾರಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಕಡಪಾ ಕಲ್ಲಿನ ಬೆಂಚುಗಳನ್ನು ನಿರ್ಮಿಸಲಾಗಿತ್ತು. ಅವುಗಳನ್ನು ಸಹ ಕಲ್ಲಿನಿಂದ ಜಜ್ಜಿ ಧ್ವಂಸ ಮಾಡಿದ್ದರು. ಇದೀಗ ಮತ್ತೆ ಈ ದುಷ್ಕೃತ್ಯಕ್ಕೆ ಕೈಹಾಕಿದ್ದಾರೆ.
12ಕ್ಕೂ ಹೆಚ್ಚು ಪಾರ್ಕ್ ಬೆಂಚುಗಳನ್ನ ಹೊಡೆದುರುಳಿಸಿದ್ದಾರೆ. ಈ ಕುರಿತು ನಗರಸಭೆ ಪೌರಾಯುಕ್ತ ಕೆ.ಪರಮೇಶ್ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ನುಣುಚಿಕೊಂಡಿದ್ದಾರೆ. ಉದ್ಯಾನವನದಲ್ಲಿ ಸಿಸಿಟಿವಿ ಸೇರಿದಂತೆ ಯಾವುದೇ ಸುರಕ್ಷತಾ ಕ್ರಮಗಳ ಇಲ್ಲದೇ ಇರುವುದು ಎದ್ದು ಕಾಣುತ್ತಿದೆ.
ಅಕ್ಷಮ್ಯ ಕೃತ್ಯದ ಹಿಂದೆ ಯಾರೇ ಇದ್ದರೂ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ಅವರ ವಿರುದ್ಧ ಗೂಂಡಾ ಕಾಯ್ದೆ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.