ನಗರಸಭೆ ‘ಇ ಖಾತೆ’ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ- ಸಚಿವ ರಹೀಂ ಖಾನ್ ಭರವಸೆ

ಕೋಲಾರ: ನಗರಸಭೆ ವ್ಯಾಪ್ತಿಯಲ್ಲಿನ ಸಾರ್ವಜನಿಕರ ಆಸ್ತಿಗಳಿಗೆ ಸಂಬಂಧಿಸಿದಂತೆ ಇ ಖಾತೆ ಬಿ ಖಾತೆ ನೀಡಲು ಕಾಂಗ್ರೆಸ್ ಸರ್ಕಾರವು ಮುಂದಾಗಿದ್ದು, ಆದಷ್ಟು ಬೇಗ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲಾಗುತ್ತದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಭರವಸೆ ನೀಡಿದರು.

ಶುಕ್ರವಾರ ಕೋಲಾರ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಸಮಸ್ಯೆಗಳ ಆಲಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಬಿಎಂಪಿ ಹೊರತುಪಡಿಸಿ ನಗರಪಾಲಿಕೆ, ನಗರಸಭೆ ಮತ್ತು ಪುರಸಭೆಯ ವ್ಯಾಪ್ತಿಯ ಅಕ್ರಮ ಬಡಾವಣೆಯಲ್ಲಿ ನಕ್ಷೆ ಮಂಜೂರಾತಿ ಇಲ್ಲದೆ ಕಟ್ಟಡ ನಿರ್ಮಿಸಿ ಸೌಲಭ್ಯ ಪಡೆಯುತ್ತಿರುವ ಮಾಲೀಕರಿಗೆ ನಿರ್ವಹಣಾ ಶುಲ್ಕ ವಿಧಿಸುವ ಕುರಿತಂತೆ ಸಂಪುಟ ಉಪಸಮಿತಿಯಲ್ಲಿ ತೀರ್ಮಾನವಾಗಿದ್ದು, ಮೂರು ತಿಂಗಳ ಒಳಗೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲು ಕಾಂಗ್ರೆಸ್ ಸರಕಾರ ಬದ್ದವಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ದುಡಿಮೆಯಿಂದ ಅಧಿಕಾರಕ್ಕೆ ಬಂದಿದ್ದು, ಅವರನ್ನು ಗುರುತಿಸಿ ಉತ್ತಮ ಸ್ಥಾನಮಾನ ನೀಡಲಾಗುತ್ತದೆ. ಜನರು ನಂಬಿ ನಮ್ಮನ್ನು ಆರಿಸಿದ್ದಾರೆ. ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಳ್ಳುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಪಕ್ಷಕ್ಕೆ ಒಳ್ಳೆಯ ವಾತಾವರಣ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಕೊತ್ತೂರು ಜಿ ಮಂಜುನಾಥ್ ಮಾತನಾಡಿ, ಕೋಲಾರ ಜಿಲ್ಲೆ ಬೆಂಗಳೂರಿಗೆ ಹತ್ತಿರದಲ್ಲಿ ಇದ್ದರೂ ಸಹ ಎಲ್ಲಾ ಹಂತದಲ್ಲಿನ ಸಮಸ್ಯೆಗಳು ಮಾತ್ರ ಹಾಗೇ ಉಳಿದಿದೆ. ಸಮಸ್ಯೆಗಳಿಗೆ ದಾರಿ ಕಂಡುಹಿಡಿಯಲು ಪ್ರತಿ ಹಂತದಲ್ಲಿ ಮಾರ್ಗದರ್ಶನ ನೀಡಿ ಕೋಲಾರವನ್ನು ವಿಶೇಷ ಜಿಲ್ಲೆಯ ರೀತಿಯಲ್ಲಿ ಪರಿಗಣಿಸುವಂತೆ ಸಚಿವರಿಗೆ ಮನವಿ ಮಾಡಿದರು..

ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷೀನಾರಾಯಣ, ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್, ನಗರ ಬ್ಲಾಕ್ ಅಧ್ಯಕ್ಷ ಪ್ರಸಾದ್ ಬಾಬು, ಮುಖಂಡರಾದ ಜಯದೇವ್, ಯಲ್ಲಪ್ಪ, ಮೈಲಾಂಡಹಳ್ಳಿ ಮುರಳಿ, ವೈ ಶಿವಕುಮಾರ್, ಯೂನಿಸ್ ಷರೀಫ್, ವೆಂಕಟಪತಿ, ಮುಂತಾದವರು ಇದ್ದರು,

Leave a Reply

Your email address will not be published. Required fields are marked *