ನಗರದ ಸಾರ್ವಜನಿಕ ಸ್ಥಳ, ಪ್ರಮುಖ ವೃತ್ತಗಳು, ರಸ್ತೆಗಳ ಉದ್ದಕ್ಕೂ ರಾರಾಜಿಸುತ್ತಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್: ನಗರದ ಸೌಂದರ್ಯ ಹಾಳು: ವಾಹನ ಸವಾರರಿಗೆ ಕಿರಿಕಿರಿ: ಸಾರ್ವಜನಿಕರ ಆಕ್ರೋಶ

ನಗರದ ಸಾರ್ವಜನಿಕ ಸ್ಥಳ, ಪ್ರಮುಖ ವೃತ್ತಗಳು, ರಸ್ತೆಗಳ ಉದ್ದಕ್ಕೂ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್​ಗಳು ರಾರಾಜಿಸುತ್ತಿವೆ. ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್​ಗಳ ಹಾವಳಿ ದಿನದಿನಕ್ಕೆ ಹೆಚ್ಚುತ್ತಲಿದ್ದು, ಇದರಿಂದ ನಗರದ ಸೌಂದರ್ಯ ಹಾಳಾಗುತ್ತಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ರಾಜ್ಯ ಉಪಾಧ್ಯಕ್ಷ  ಸಿ.ನರಸಿಂಹಮೂರ್ತಿ ನಗರಸಭೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಮುಖಂಡರ ಹುಟ್ಟಿದ ಹಬ್ಬದ ಶುಭಾಶಯ ಕೋರುವ ಫ್ಲೆಕ್ಸ್ ಗಳು, ಬ್ಯಾನರ್ ಗಳು ಎಗ್ಗಿಲ್ಲದೆ ಎಲ್ಲೆಂದರಲ್ಲಿ ತಲೆಯೆತ್ತಿವೆ. ಆದರೆ, ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದ್ದ ದೊಡ್ಡಬಳ್ಳಾಪುರ ನಗರಸಭೆ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ಫ್ಲೆಕ್ಸ್ ಅಥವಾ ಬ್ಯಾನರ್ ಅಥವಾ ಓರ್ಡಿಂಗ್ಸ್, ಬಂಟ್ಟಿಂಗ್ಸ್ ಅಳವಡಿಸಲು  ನಗರಸಭೆ ವತಿಯಿಂದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ನಗರಸಭೆ ನಿಗದಿಪಡಿಸಿದಷ್ಟು ಮೊತ್ತ ಪಾವತಿಸಬೇಕಾಗಿದೆ. ಅನುಮತಿ ಪಡೆದಿರುವುದಿಕ್ಕಿಂತ ಹೆಚ್ಚಾಗಿ ಬೇಕಾಬಿಟ್ಟಿ ಫ್ಲೆಕ್ಸ್ ಗಳನ್ನು ಅಳವಡಿಸಿ ನಗರದ ಸೌಂದರ್ಯ ಹಾಳುಮಾಡುತ್ತಿದ್ದಾರೆ ಎಂದು ಗುಡುಗಿದರು.

ರಸ್ತೆಗಳಲ್ಲಿ ಫ್ಲೆಕ್ಸ್ ಕಟ್ಟುವುದರಿಂದ ವಾಹನ ಸವಾರರಿಗೂ ಸಹ ಕಿರಿಕಿರಿ ಅನುಭವಿಸುವಂತಾಗಿದೆ. ಫ್ಲೆಕ್ಸ್ ಗಳಲ್ಲಿ ಅಳವಡಿಸಿರುವ ಮೊಳೆಗಳು ವಾಹನಗಳ ಟೈರ್ ಗಳಿಗೆ ಸಹ ಚುಚ್ಚುವ ಸಾಧ್ಯತೆಗಳಿವೆ. ಕೂಡಲೇ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಥವಾ ಓರ್ಡಿಂಗ್ಸ್, ಬಂಟ್ಟಿಂಗ್ಸ್ ಗಳನ್ನು ತೆರವು ಮಾಡಬೇಕೆಂದು ನಗರಸಭೆಗೆ ಮನವಿ ಮಾಡಿದರು.

ಫ್ಲೆಕ್ಸ್, ಬ್ಯಾನರ್ ಅಥವಾ ಓರ್ಡಿಂಗ್ಸ್, ಬಂಟ್ಟಿಂಗ್ಸ್ ಅಳವಡಿಕೆ ಕುರಿತು ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು, ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಥವಾ ಓರ್ಡಿಂಗ್ಸ್, ಬಂಟ್ಟಿಂಗ್ಸ್ ಅಳವಡಿಸಿದ್ದಲ್ಲಿ ಕೂಡಲೇ ಕ್ರಮ ತೆಗೆದುಕೊಂಡು ತೆರವು ಮಾಡುತ್ತೇವೆ ಎಂದು ನಗರಸಭೆ ಪೌರಾಯುಕ್ತ ಕಾರ್ತೀಕೇಶ್ವರ್ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!