ನಗರದ ಶಾಂತಿ ನಗರದಲ್ಲಿರುವ ಗ್ರಾಮ ದೇವತೆ ಶ್ರೀ ಮುತ್ಯಾಲಮ್ಮ ದೇವಿಯ ಮಹಾ ಕುಂಬಾಭಿಷೇಕ ಮಂಡಲ ಪೂರ್ತಿ ಅಂಗವಾಗಿ ನವ ಚಂಡಿಕಾ ಯಾಗವನ್ನು ಸೋಮವಾರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮುತ್ಯಾಲಮ್ಮ ದೇವಿ ಮೂರ್ತಿಗೆ ವಿಶೇಷ ಅಲಂಕಾರಗೊಳಿಸಿ, ವಿವಿಧ ಬಗೆಯ ಪೂಜಾ ವಿಧಿವಿಧಾನಗಳನ್ನು ಸಲ್ಲಿಸಲಾಯಿತು. ಲೋಕ ಕಲ್ಯಾಣಾರ್ಥವಾಗಿ ಎರಡು ದಿನಗಳ ಕಾಲ ನಡೆದ ಹಲವು ಧಾರ್ಮಿಕ ಪೂಜಾ ಕೈಂಕರ್ಯಗಳಲ್ಲಿ ಪ್ರಧಾನ ಪೂಜೆಗಳಾದ ಮಹಾಗಣಪತಿ ಪೂಜೆ, ಸ್ವಸ್ತಪುಣ್ಯಾಹ ಪಂಚಗವ್ಯ ದೇವಿ ಅನುಜ್ಞವಾಸ್ತು ಶಾಂತಿ, ಚಂಡಿಕಾ ಕಳಸ ಸ್ಥಾಪನೆ, ನವಾಕ್ಷಾರಿ ಶಾಂತಿ ಪೂಜೆ, ದಂಪತಿ, ಕನ್ಯಕಾ, ಸುಮಂಗಲಿ ಪೂಜೆ ಸೇರಿದಂತೆ ವಿವಿಧ ದೋಷ ಪರಿಹಾರದೊಂದಿಗೆ ಯಾಗ ನೆರವೇರಿಸಲಾಯಿತು.
ಬಳಿಕ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು. ನಗರ ಮಾತ್ರವಲ್ಲದೇ ಸುತ್ತಲಿನ ಹತ್ತಾರು ಗ್ರಾಮಗಳ ಸದ್ಭಕ್ತರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು. ಪ್ರಧಾನ ಅರ್ಚಕ ಶಿವಶ್ರೀ ವಿಶ್ವಾಸ್ ದೀಕ್ಷಿತರ ನೇತೃತ್ವದಲ್ಲಿ ಯಾಗ ನೆರವೇರಿಸಲಾಯಿತು. ಈ ವೇಳೆ ದೇಗುಲದ ರಾಜಗೋಪುರ ದಾನಿಗಳಾದ ಲೇ.ಸಂಜಿವಮ್ಮ, ಹನುಮಂತೇಗೌಡ ಹಾಗೂ ಪದ್ಮಾವತಮ್ಮ, ಮಹಾದೇವ ಅವರ ಕುಟುಂಬಸ್ಥರು, ಸಹಸ್ರಾರು ಭಕ್ತರು ಪೂಜೆಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮುತ್ಯಾಲಮ್ಮ ಸೇವಾ ದತ್ತಿ ಟ್ರಸ್ಟ್ ಗೌರವಾಧ್ಯಕ್ಷ ಹನುಮಂತರಾವ್, ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷ ನಾಗೇಶ್, ಪದಾಧಿಕಾರಿಗಳಾದ ಪ್ರಕಾಕರ್, ಗೋವಿಂದರಾಜು, ಜೆವೈ ಮಲ್ಲಪ್ಪ, ಕುಮಾರ್, ತಿಮ್ಮರಾಜು, ಅಪ್ಪಿ ವೆಂಕಟೇಶ್ ಇದ್ದರು.