ನಗರದ ರಸ್ತೆಗಳ ಅಗಲೀಕರಣಕ್ಕೆ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಹಣ ಬಿಡುಗಡೆ ಮಾಡಬೇಕು- ಶಾಸಕ ಧೀರಜ್ ಮುನಿರಾಜ್ ಒತ್ತಾಯ

ದೊಡ್ಡಬಳ್ಳಾಪುರ ತಾಲ್ಲೂಕು ಬಸವ ಭವನದಿಂದ ಕೆಸಿಪಿ ಸರ್ಕಲ್‌ವರೆಗೂ ರಾಷ್ಟ್ರೀಯ ಹೆದ್ದಾರಿ-4ನೇ ನೆಲಮಂಗಲದಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ-7ಕ್ಕೆ ಚಿಕ್ಕಬಳ್ಳಾಪುರ ಸೇರುವ ರಾಜ್ಯ ಹೆದ್ದಾರಿ -74 ರ ರಸ್ತೆಯ ಸರಪಳಿ 27.90 ರಿಂದ 31.40 ಕಿಮೀ ವರೆಗೆ 10 ಕೋಟಿ ವೆಚ್ಚದ ಕಾಂಕ್ರಿಟ್ ರಸ್ತೆ /ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ಧೀರಜ್ ಮುನಿರಾಜ್ ಅವರು ನಗರದ ತಾಲೂಕು ಕಚೇರಿ ವೃತ್ತದಲ್ಲಿಂದು ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಳೆ ಬಂದರೆ ನಗರದ ತಾಲೂಕು ಕಚೇರಿ ಮುಂದೆ‌ ಹಾದು ಹೋಗುವ ರಸ್ತೆಯಲ್ಲಿ ಮೊಣಕಾಲುದ್ದ ಮಳೆ ನೀರು ನಿಂತು ವಾಹನ ಸವಾರರು‌ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕನ್ನಡ ಜಾಗೃತ ಪರಿಷತ್ ಭವನ ಸರ್ಕಲ್ ನಲ್ಲಿ ರಸ್ತೆ ಮಧ್ಯೆ ಮ್ಯಾನ್ ಹೋಲ್ ಸಮಸ್ಯೆ ಇದೆ. ಈ ರಸ್ತೆಯಲ್ಲಿ ಎಷ್ಟೇ ಬಾರಿ ಡಾಂಬಾರು ಹಾಕಿದರೂ ಸಮಸ್ಯೆ ಹಾಗೇ ಇರುತ್ತದೆ ಎಂದು ಪರಿಗಣಿಸಿ ಶಾಶ್ವತ ಪರಿಹಾರಕ್ಕಾಗಿ ಬಸವ ಭವನ ವೃತ್ತದಿಂದ ಟೋಲ್ ಗೇಟ್ ವೃತ್ತದವರೆಗೆ ಬಿಬಿಎಂಪಿ ಮಾದರಿಯ ವೈಟ್ ಟಾಪಿಂಗ್(ಕಾಂಕ್ರೀಟ್ ರಸ್ತೆ) ನಿರ್ಮಾಣ ಮಾಡಲು‌ ನಿರ್ಧರಿಸಿ‌ ಇಂದು ಗುದ್ದಲಿ ಪೂಜೆ ಮಾಡಲಾಗಿದೆ ಎಂದರು.

ನ್ಯಾಷನಲ್ ಪ್ರೈಡ್ ಶಾಲೆಯಿಂದ ಆಲಹಳ್ಳಿ ಅಂಡರ್ ಪಾಸ್ ವರೆಗೂ ಡಬಲ್ ರೋಡ್ ಆಗುತ್ತದೆ. ನಗರದ ನಾಲ್ಕು ದಿಕ್ಕುಗಳಲ್ಲಿ ಇರುವ ಆಗಮನ ಮತ್ತು‌ ನಿರ್ಗಮನ‌ ಸ್ಥಳಗಳಿಂದ ಡಬಲ್ ರೋಡ್ ಗಳು ಆಗುತ್ತವೆ ಎಂದರು.

ದೊಡ್ಡಬಳ್ಳಾಪುರ ಯೋಜನಾ ಪ್ರಾಧೀಕಾರ ಪ್ರತೀ ಸೈಟ್, ಲೇಔಟ್, ಪ್ಲಾನ್ ಅಪ್ರುವಲ್ ಗೆ ಹಣ ತೆಗೆದುಕೊಳ್ಳುತ್ತಾರೆ. ಡಿಪಿಯಯಲ್ಲಿ ಸುಮಾರು 14-16ಕೋಟಿ ಅನುದಾನವಿದೆ. ಅದನ್ನು ರಸ್ತೆ ಅಗಲೀಕರಣ ಸೇರಿದಂತೆ ದೊಡ್ಡಬಳ್ಳಾಪುರ ಅಭಿವೃದ್ಧೆಗೆ ಆ ಹಣವನ್ನು ವಿನಿಯೋಗಿಸಬೇಕು ಎಂದು ಒತ್ತಾಯಿಸಿದರು.

ದೇವನಹಳ್ಳಿ, ಹೊಸಕೋಟೆ, ನೆಲಮಂಗಲದ ಕಮರ್ಷಿಯಲ್ ಸ್ಥಳಗಳಲ್ಲಿ ರಸ್ತೆಗಳು ಅಗಲೀಕರಣಗೊಂಡಿವೆ. ಆದರೆ ನಮ್ಮ ದೊಡ್ಡಬಳ್ಳಾಪುರದಲ್ಲಿ ರಸ್ತೆ ಅಗಲೀಕರಣವಾಗದೇ ಜನರಿಗೆ ಕಿರಿಕಿರಿ‌ ಉಂಟಾಗುತ್ತಿದೆ. ಕಿರಿದಾದ ರಸ್ತೆಗಳು ಅಗಲೀಕರಣವಾಗದ ಹೊರೆತು ದೊಡ್ಡಬಳ್ಳಾಪುರ ಅಭಿವೃದ್ಧಿಯಾಗಲು ಅಸಾಧ್ಯ ಎಂದರು.

ಡಿಪಿಎ ಅಧ್ಯಕ್ಷರು, ಸದಸ್ಯರು, ಕಾರ್ಯದರ್ಶಿಗಳೇ ನೀವು ನಗರಕ್ಕೆ ಏನಾದರೂ ಕೊಡುಗೆ ಕೊಡಬೇಕೆಂದುಕೊಂಡಿದ್ದರೆ ದಯಮಾಡಿ ರಸ್ತೆ ಅಗಲೀಕರಣಕ್ಕೆ ಅನುದಾನ ಬಿಡುಗಡೆ ಮಾಡಿ ಎಂದು ಹೇಳಿದರು.

ಈ ವೇಳೆ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆನಂದ್, ಉಪಾಧ್ಯಕ್ಷ ಎಮ್ ಮಲ್ಲೇಶ್, ಸ್ಥಾಯಿ ಸಮಿತಿ ಅದ್ಯಕ್ಷ ಎಸ್ ರವಿಕುಮಾರ್, ನಗರಸಭಾ ಸದಸ್ಯರಾದ ಬಂತಿ ವೆಂಕಟೇಶ್ ಸೇರಿದಂತೆ ಮತ್ತಿತರಿದ್ದರು.

Leave a Reply

Your email address will not be published. Required fields are marked *