ನಗರದ ಮೂರು ಕಾಲೇಜುಗಳ ಅಭಿವೃದ್ಧಿಗೆ 30 ಕೋಟಿ ಅನುದಾನ ಬಿಡುಗಡೆ- ಕೊತ್ತೂರು ಮಂಜುನಾಥ್

ಕೋಲಾರ: ನಗರದ ಮೂರು ಕಾಲೇಜುಗಳ ಅಭಿವೃದ್ಧಿಗೆ 30 ಕೋಟಿ ರೂ.ಗಳನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಬಿಡುಗಡೆ ಮಾಡಿದ್ದಾರೆ. ಹಂತ ಹಂತವಾಗಿ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇಲ್ಲದಂತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನ ಅಭಿವೃದ್ಧಿಗಾಗಿ ಮಂಜೂರಾಗಿದ್ದ 6.85 ಕೋಟಿ ರೂ.ಗಳ ವೆಚ್ಚದಲ್ಲಿ 15 ನೂತನ ಕೊಠಡಿಗಳಿಗೆ ಹಾಗೂ ಒಂದು ಗ್ರಂಥಾಲಯ ನಿರ್ಮಾಣಕ್ಕೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರಿ ಮಹಿಳಾ ಕಾಲೇಜಿನಲ್ಲಿ 3500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಇದು 2ನೇ ಕಾಲೇಜು ಇದಾಗಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಕೊಠಡಿಗಳ ಸಂಖ್ಯೆ ಕಡಿಮೆ ಇದ್ದ ಕಾರಣ 15 ಕೊಠಡಿಗಳ ನಿರ್ಮಾಣಕ್ಕೆ ಒಂದು ಗ್ರಂಥಾಲಯ ನಿರ್ಮಾಣಕ್ಕೆ 6.82 ಕೋಟಿ ರೂ.ಗಳು ಬಿಡುಗಡೆ ಆಗಿದೆ. ಕಾಮಗಾರಿಗೆ ಗುದ್ದಲಿಪೂಜೆ ಮಾಡಲಾಗಿದೆ. ಇನ್ನು 10 ಕೋಟಿ ರೂ.ಗಳನ್ನು ಕಾಲೇಜಿಗೆ ಬಿಡುಗಡೆ ಆಗಲಿದೆ. ಸರ್ಕಾರಿ ಜೂನಿಯರ್ ಕಾಲೇಜಿಗೆ ೫ ಕೋಟಿ, ಬಾಲಕರ ಕಾಲೇಜಿಗೆ 5 ಕೋಟಿ, ಸೇರಿ ಕಾಲೇಜುಗಳ ಅಭಿವೃದ್ದಿಗೆ 30 ಕೋಟಿ ರೂ.ಗಳನ್ನು ಉನ್ನತ ಶಿಕ್ಷಣ ಸಚಿವರು ಬಿಡುಗಡೆ ಮಾಡಿದ್ದಾರೆ ಎಂದರು.

ಕೋಲಾರಕ್ಕೆ ಹೆಚ್ಚುವರಿಯಾಗಿ 3 ಇಂದಿರಾ ಕ್ಯಾಂಟೀನನ್ನು ಪಡೆಯಲಾಗಿದೆ. ಈಗಾಗಲೇ ಹಳೆಯ ಬಸ್ ನಿಲ್ದಾಣ ಬಳಿ 1 ಕಾರ್ಯನಿರ್ವಹಿಸುತ್ತದೆ. ವೇಮಗಲ್ ಬಳಿ ಒಂದು, ಎಪಿಎಂಸಿ. ಬಳಿ ಒಂದು ಹೊಸದಾಗಿ ನಿರ್ಮಿಸಲಾಗುತ್ತಿದೆ. ಮತ್ತೊಂದನ್ನು ಮಹಿಳಾ ಕಾಲೇಜಿನ ಬಳಿ ನಿರ್ಮಿಸಲಾಗುವುದು. ಇಲ್ಲಿ ವಸತಿ ನಿಲಯ, ಕೋಲಾರಮ್ಮ ದೇವಸ್ಥಾನ ಮತ್ತು ಸೋಮೇಶ್ವರಸ್ವಾಮಿ ದೇವಸ್ಥಾನ ಇರುವುದರಿಂದ ಇಲ್ಲಿ ಇಂದಿರಾ ಕ್ಯಾಂಟೀನ್ ಅವಶ್ಯಕತೆ ಇದೆ. ಮಾಜಿ ಸಚಿವ ಶ್ರೀನಿವಾಸಗೌಡರು ಈಗಾಗಲೇ 5 ಲಕ್ಷ ರೂ.ಗಳನ್ನು ನೀಡಿದ್ದಾರೆ. ನನ್ನ ಅನುದಾನದಲ್ಲಿ ೫ ಲಕ್ಷ, ಎಂ.ಎಲ್.ಸಿ.ಗಳಾದ ನಸೀರ್ ಅಹ್ಮದ್ ಮತ್ತು ಅನಿಲ್ ಕುಮಾರ್ ರವರ ಅನುದಾನ ಸೇರಿ 20 ಲಕ್ಷ ರೂ.ಗಳ ವೆಚ್ಚದಲ್ಲಿ ಸುಸಜ್ಜಿತವಾದ ಇಂದಿರಾ ಕ್ಯಾಂಟೀನನ್ನು ಈ ಭಾಗದಲ್ಲಿ ನಿರ್ಮಾಣ ಮಾಡುವುದಾಗಿ ತಿಳಿಸಿದರು.

ರಾಜಕೀಯವಾಗಿ ಮಾತನಾಡಿ ಮುಡಾ ಹಗರಣ ಆಗಿದೆ. ಆಗಿಲ್ಲ ಎಂದು ಹೇಳಲು ಬರುವುದಿಲ್ಲ. ಅದು ತನಿಖಾ ಹಂತದಲ್ಲಿದೆ. ಯಾರೇ ಮಾಡಿದ್ದರೂ ಅದು ತಪ್ಪೇ ಆಗಿರುತ್ತದೆ. ವಿಧಾನಸಭೆಯಲ್ಲಿ ಈ ಬಗ್ಗೆ ಬಿಜೆಪಿಯವರು ಗಲಾಟೆ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಉತ್ತರ ನೀಡಲು ಸಿದ್ಧರಿದ್ದರು. ಅವರು ಕೇಳಲು ಸಿದ್ಧರಿರಲಿಲ್ಲ. ಅವರು ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಬಿಜೆಪಿಯವರಿಗೆ ಅಭಿವೃದ್ದಿ ಕುಂಟಿತಗೊಳಿಸುವ ಉದ್ದೇಶ ಅವರದ್ದಾಗಿದೆ. ಪಾದಯಾತ್ರೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕಿದೆ. ತನಿಖೆ ನಡೆಯುತ್ತಿದೆ. ಕಾನೂನು ಪ್ರಕಾರ ತಪ್ಪು ಮಾಡಿರುವವರ ವಿರುದ್ಧ ಕ್ರಮ ಜರುಗುತ್ತದೆ ಎಂದರು.

ಮೈಸೂರು ಮುಡಾದಲ್ಲಿ ಎಲ್ಲರೂ ಸಾಚಾಗಳೇನು ಅಲ್ಲ. ಮೊದಲಿನಿಂದಲೂ ಎಲ್ಲಾ ರೀತಿಯ ಹಗರಣಗಳು ನಡೆದುಹೋಗಿವೆ. ಆಗಂತ ಯಾರೂ ಹಗರಣ ಮಾಡಲು ಹೋಗಬಾರದು. ತನಿಖೆ ನಡೆಯುತ್ತಿದೆ. ಸದ್ಯದಲ್ಲಿಯೇ ವಾಸ್ತವಾಂಶ ಹೊರಬೀಳಲಿದೆ ಎಂದರು.

ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳಿಂದ ಉತ್ತರವನ್ನೇ ವಿರೋಧಪಕ್ಷದವರು ಬಯಸಲಿಲ್ಲ. ಅನಗತ್ಯವಾಗಿ ಗಲಾಟೆ ಮಾಡಿ ಕಲಾಪವನ್ನು ಹಾಳು ಮಾಡಿದರು. ಒಂದು ಸಂಸ್ಥೆಗೆ ವಹಿಸಿ ತನಿಖೆ ನಡೆಯುತ್ತಿರುವ ಹಂತದಲ್ಲಿ ಅದರ ಬಗ್ಗೆ ಗಲಾಟೆ ಮಾಡುವ ಅವಶ್ಯಕತೆ ಇಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗ ಅದರ ಬಗ್ಗೆ ಚರ್ಚೆ ಅವಶ್ಯಕತೆ ಇದೆಯೇ ಅದೇ ರೀತಿ ತನಿಖೆ ನಡೆಯುವ ಹಂತದಲ್ಲಿ ಕಲಾಪ ನಡೆಯುವ ಸಂದರ್ಭದಲ್ಲಿ ಚರ್ಚೆ ಬೇಕಿಲ್ಲ ಎಂದು ಸಭಾಧ್ಯಕ್ಷರು ಅದನ್ನು ತಿರಸ್ಕರಿಸಿದ್ದಾರೆ ಎಂದರು.

ತನಿಖೆ ಕಾನೂನು ಚೌಕಟ್ಟಿನಲ್ಲಿ ನಡೆಯುತ್ತದೆ. ಸರ್ಕಾರ ಇದೆ ಎಂದು ಸರ್ಕಾರ ಪರ ತೀರ್ಪು ನೀಡಲು ಸಾಧ್ಯವಿರುವುದಿಲ್ಲ. ಸರ್ಕಾರ ಭಾಗಿಯಾಗಿದ್ದರೆ ಸರ್ಕಾರದ ವಿರುದ್ಧವೇ ತೀರ್ಪು ಬರುತ್ತದೆ. ಒಂದು ಸಂಸ್ಥೆಗೆ ನಂಬಿ ಪ್ರಕರಣವನ್ನು ವಹಿಸಿದ್ದೇವೆ. ನಿಶ್ಪಕ್ಷಪಾತವಾದ ತನಿಖೆಯನ್ನು ನಡೆಸಲಿದ್ದಾರೆ ಎಂದರು.

ಮುಡಾದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ, ಜಿ.ಟಿ.ದೇವೇಗೌಡ ಇವರು ಸಹ ನಿವೇಶನಗಳನ್ನು ಪಡೆದಿರುವ ಬಗ್ಗೆ ಮುಖ್ಯಮಂತ್ರಿಗಳೇ ತಿಳಿಸಿದ್ದಾರೆ. ಅಕ್ರಮ ನಡೆದಿದ್ದರೆ ಅವು ಅಕ್ರಮವೇ ಅಗಿರುತ್ತದೆ. ಎಲ್ಲವೂ ತನಿಖೆಯಿಂದ ಗೊತ್ತಾಗುತ್ತದೆ ಎಂದರು.

ಡಿ.ಸಿ.ಸಿ.ಬ್ಯಾಂಕಿಗೆ ಚುನಾವಣೆ ಆಗಬೇಕು. ಆಗಬಾರದೆಂದು ಯಾರೂ ಒತ್ತಡ ಹಾಕುತ್ತಿಲ್ಲ. ನ್ಯಾಯಾಲಯದ ಆದೇಶದಂತೆ ಚುನಾವಣೆ ನಡೆಯುತ್ತದೆ. ಕೆಲವು ಅಡೆತಡೆಗಳು ಇರಬಹುದು. ಎಲ್ಲವೂ ಸರಿಹೋಗುತ್ತದೆ. ಅದರ ಹೆಚ್ಚಿನ ಮಾಹಿತಿ ನನ್ನಲಿಲ್ಲ ಕೋಚಿಮುಲ್‌ನ್ನು ವಿಂಗಡಣೆ ಮಾಡುವ ಹಿನ್ನಲೆಯಲ್ಲಿ ಚುನಾವಣೆ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಅದು ಚುನಾವಣೆ ನಡೆಯುತ್ತದೆ ಎಂದರು.

ನಗರದ ವರ್ತುಲ ರಸ್ತೆಗೆ 100 ಕೋಟಿ ರೂ.ಗಳು ಬಿಡುಗಡೆಯಾಗಿದೆ. ಇನ್ನು 170 ಕೋಟಿ ರೂ.ಗಳು ಬಿಡುಗಡೆಯಾಗಬೇಕಾಗಿದೆ. ಮಂತ್ರಿ ಮಂಡಲದಲ್ಲಿ ಅನುಮೋದನೆ ಪಡೆಯಬೇಕಾಗಿದೆ. ಒಂದು ವಾರದಲ್ಲಿ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲಾಗುವುದು. 100 ರೂ.ಗಳಿಗೆ ಡಿ.ಪಿ.ಆರ್. ಆಗಿದೆ. ಅದು ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಗಂಗಾಧರ್ ರಾವ್, ಕೂಡಾ ಅಧ್ಯಕ್ಷ ಮೊಹಮ್ಮದ್ ಅನೀಫ್, ಕೋಚಿಮುಲ್ ನಿರ್ದೇಶಕ ಷಂಷೀರ್, ಕೆ.ಪಿ.ಸಿ.ಸಿ. ವಕ್ತಾರ ದಯಾನಂದ, ಬಂಗಾರಪೇಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಕುರಿಗಳ ರಮೇಶ್, ರಾಮು, ವಿಜಯನಗರ ಮಂಜುನಾಥ, ಉಮಾಶಂಕರ್, ರಾಮಯ್ಯ, ಚೌಡರೆಡ್ಡಿ, ಚಂದ್ರಶೇಖರ್ ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!