ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ 5ನೇ ವರ್ಷದ ಕಾರ್ಯಕ್ರಮಗಳು ಭಾನುವಾರದಿಂದ ಆರಂಭವಾಗಿ ಹನುಮಂತೋತ್ಸವ, ಗರುಡೋತ್ಸವ, ಸೋಮವಾರ ಗಜವಾಹನೋತ್ಸವ, ಅಶ್ವವಾಹನೋತ್ಸವ, ತಿರುಕಲ್ಯಾಣೋತ್ಸವ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಮಂಗಳವಾರ ಮದ್ಯಾಹ್ನ 12 ಗಂಟೆಗೆ ಬ್ರಹ್ಮ ರಥೋತ್ಸವಕ್ಕೆ ಗಣ್ಯರಿಂದ ಚಾಲನೆ ನೀಡಲಾಯಿತು. ಬ್ರಹ್ಮರಥೋತ್ಸವಕ್ಕೆ ನಗರ ಹಾಗೂ ಗ್ರಾಮಾಂತರ ಭಾಗದಿಂದ ಬಂದಿದ್ದ ಭಕ್ತರು ಶ್ರದ್ದೆ ಭಕ್ತಿಯಿಂದ ಸ್ವಾಮಿಯ ರಥಕ್ಕೆ ಹೂವು ಹಣ್ಣು ದವನ ಅರ್ಪಿಸಿ ಭಕ್ತಿ ಭಾವ ಮೆರೆದರು. ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಭಿಷೇಕ, ಸುಪ್ರಭಾತ ಸೇವೆ, ಹೂಮಾಲೆ ಸೇವೆ, ನವಗ್ರಹ ಪೂಜೆ, ರಥದ ಮುಂಭಾಗದಲ್ಲಿ ವಿಶೇಷ ಹೋಮಗಳನ್ನು ನಡೆಸಲಾಯಿತು.
ಲಕ್ಷೀ ನರಸಿಂಹಸ್ವಾಮಿಗೆ ವಿಶೇಷವಾಗಿ ವಿವಿದ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಕೆಲವು ಸಾಂಸ್ಕೃತಿಕ ಕಲಾ ತಂಡಗಳಿಂದ ಭಕ್ತಿಗೀತೆ ಗಾಯನ, ಭಜನೆ, ಆಗಮಿಕರ ಮಂತ್ರ ಪಠಣೆಗಳು, ಭಕ್ತಜನ ಸಾಗರದ ಜಯ ಘೋಷದೊಂದಿಗೆ ರಥೋತ್ಸವ ನಡೆಯಿತ್ತು. ಜಾತ್ರೆಯ ಪ್ರಯುಕ್ತ ದೇವಾಲಯದ ಟ್ರಸ್ಟ್ ವತಿಯಿಂದ ರಥೊತ್ಸವಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಮಜ್ಜಿಗೆ ಪಾನಕ ಕೋಸಂಬರಿ ವಿತರಿಸಲಾಯಿತು.
ಡಿ.ಕ್ರಾಸ್ ರೈಲ್ವೆ ಮೇಲ್ಸೇತುವೆ ಕೆಳಗೆ ಬ್ರಹ್ಮ ರಥೋತ್ಸವದ ಅಂಗವಾಗಿ ಅಂಗಡಿ ಮುಗ್ಗಟ್ಟುಗಳ ಜಾತ್ರೆಯ ಕಲರವ ಜೋರಾಗಿತ್ತು. ಬರುವ ಭಕ್ತರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತು.
ಬ್ರಹ್ಮರಥೋತ್ಸವದಲ್ಲಿ ತಾಲೂಕಿನ ಅನೇಕ ಗಣ್ಯರು, ದೇವಸ್ಥಾನದ ಟ್ರಸ್ಟ್ ನ ಸದಸ್ಯರು ಸೇರಿದಂತೆ ಸಂಘ ಸಂಸ್ಥೆಗಳ ಮುಖಂಡರು, ಸದಸ್ಯರು ಇದ್ದರು.