ದೊಡ್ಡಬಳ್ಳಾಪುರ: ಮುಸ್ಲಿಂ ಸಮುದಾಯದಿಂದ ಪವಿತ್ರ ಈದ್ ಮಿಲಾದ್ ನ್ನು ಸೋಮವಾರ ತಾಲ್ಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಶಾಂತಿದೂತ ಮಾನವತಾವಾದಿ ವಿಶ್ವ ಪ್ರವಾದಿ ಮಹಮದ್ ಪೈಗಂಬರ್ ಜನ್ಮ ದಿನಾಚರಣೆ ಅಂಗವಾಗಿ ನಡೆದ ಈದ್ ಮಿಲಾದ್ ಆಚರಣೆಯಲ್ಲಿ ಮುಸ್ಲಿಂ ಬಾಂಧವರು ಪರಸ್ಪರ ಈದ್ ಶುಭಾಶಯಗಳನ್ನು ಕೋರುವ ಮೂಲಕ ಸಂಭ್ರಮಿಸಿದರು. ಮಸೀದಿಗಳಲ್ಲಿ ಮೌಲೀದ್ ಹಾಗೂ ಕುರಾನ್ ಪಾರಾಯಣ ಆಚರಣೆ ನಡೆಯಿತು.
ಮಸೀದಿಗಳ ಸಮೀಪದ ರಸ್ತೆಯುದ್ದಕ್ಕೂ ಹಸಿರುಮಯ ಬ್ಯಾನರ್,ಬಾವುಟಗಳು ರಾರಾಜಿಸುತ್ತಿದ್ದವು. ಮಸೀದಿಗಳಲ್ಲಿ ಅನ್ನಸಂತರ್ಪಣೆ ನಡೆಯಿತು.
ಮಧ್ಯಾಹ್ನ ನಗರದ ಇಸ್ಲಾಂಪುರ ಜಾಮಿಯಾ ದರ್ಗಾದಿಂದ ಪೈಗಂಬರ್ ಮೆಕ್ಕಾದ ಸ್ಥಬ್ದ ಚಿತ್ರಗಳು, ಪ್ರವಾದಿ ಮಹಮದ್ ಪೈಗಂಬರ್ ಅವರ ಮಾನವೀಯ ಸಂದೇಶಗಳನ್ನು ಸಾರುವ ಬಿತ್ತಿಪತ್ರಗಳು, ಮೌಲೀದ್ ಪಾರಾಯಣದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ನೂರಾರು ಜನ ಭಾಗವಹಿಸಿದ್ದರು.
ಮೆರವಣಿಗೆ ಸಾಗುವ ರಸ್ತೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು.