ದೊಡ್ಡಬಳ್ಳಾಪುರದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳದ ವತಿಯಿಂದ ಭಾನುವಾರ ಸಂಜೆ ನಡೆದ ಬಹತ್ ಶೋಭಾಯಾತ್ರೆಯಲ್ಲಿ ಶ್ರೀರಾಮ, ಶಿವ, ಆಂಜನೇಯ ಬೃಹತ್ ಪ್ರತಿಮೆಗಳ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು.
ಭಾರತ ಮಾತೆ, ಶ್ರೀರಾಮ, ಹನುಮ, ಶಿವ, ಭುವನೇಶ್ವರಿ, ಡಾ.ಬಿ.ಆರ್.ಅಂಬೇಡ್ಕರ್, ಶಿವಾಜಿ ಪ್ರತಿಮೆಗಳೊಂದಿಗೆ ವಿವಿಧ ಕಲಾತಂಡಗಳು ಶೋಭಾಯಾತ್ರೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಶ್ರೀರಾಮನ ಚಿತ್ರವುಳ್ಳ ಕೇಸರಿ ಧ್ವಜ ಹಿಡಿದು ‘ಜೈ ಶ್ರೀರಾಮ್’ ಘೋಷಣೆಯೊಂದಿಗೆ ಸಾವಿರಾರು ಜನ ಭಾಗವಹಿಸಿದ್ದರು. ಶೋಭಾ ಯಾತ್ರೆ ಸಾಗುವ ರಸ್ತೆಯ ಎರಡೂ ಬದಿಯಲ್ಲೂ ಜನರು ಸಾಲುಗಟ್ಟಿ ನಿಂತು ಬೃಹ್ ಮೆರವಣಿಗೆ ವೀಕ್ಷಣೆ ಮಾಡಿದರು.
ಶೋಭಾ ಯಾತ್ರೆಯಲ್ಲಿ ಸಾವಿರಾರು ಯುವಕರು ಶ್ರೀರಾಮನ ಭಕ್ತಿಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರೆ, ಯುವತಿಯರು ತಮಟೆ ನಾದಕ್ಕೆ ಕುಣಿಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಶೋಭಾಯಾತ್ರೆ ಸಂದರ್ಭದಲ್ಲಿ ಯಾವುದೇ ಗಲಾಟೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ನಾಗರಾಜ್, ಡಿವೈಎಸ್ಪಿ ರವಿ, ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಮರೇಶಗೌಡ, ಗ್ರಾಮಾಂತರ ಪೊಲೀಸ್ ಠಾಣೆಯ ಸಾಧಿಕ್ ಪಾಷಾ, ಮಹಿಳಾ ಪೊಲೀಸ್ ಠಾಣೆಯ ಎಂ.ಬಿ.ನವೀನ್ ಕುಮಾರ್, ಹೊಸಹಳ್ಳಿ ಪೊಲೀಸ್ ಠಾಣೆ ರಾವ್ ಗಣೇಶ್ ಜನಾರ್ಧನ್ ಸೇರಿದಂತೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.