ನಗರದಲ್ಲಿ ಮುಂದುವರಿದ ಮಳೆ. ಮಂಗಳವಾರ ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನ ಹಲವು ಕಡೆ ಅವಾಂತರ ಸೃಷ್ಟಿ ಮಾಡಿದೆ. ಭಾರೀ ಮಳೆಯಿಂದಾಗಿ ನಗರದ ರೈಲ್ವೆ ನಿಲ್ದಾಣ ಸಮೀಪದ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ಮಳೆ ನೀರಿನ ಜೊತೆಗೆ ಚರಂಡಿ ನೀರು ನುಗ್ಗಿ ಜನರು ಪರದಾಡುವಂತೆ ಮಾಡಿದೆ.
ಮಳೆ ಬಂದರೆ ನೀರು ಸರಾಗವಾಗಿ ಹರಿದು ಹೋಗಲು ಯಾವುದೇ ವ್ಯವಸ್ಥೆ ಮಾಡದೆ ನಗರಸಭೆ ನಿರ್ಲಕ್ಷ್ಯ ಧೋರಣೆ ಮಾಡಲಾಗುತ್ತಿದೆ. ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಚಾರವಾಗಿ ಗಮನ ಸೆಳೆದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ. ಇಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿ ನಾಗರೀಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಸ್ಪಂದಿಸುತ್ತಿಲ್ಲ ಎಂದು ಮಂಜುನಾಥರೆಡ್ಡಿ ಆರೋಪಿಸಿದ್ದಾರೆ.
ತಾಲೂಕಿನ ಮಜರಹೊಸಹಳ್ಳಿ ಗ್ರಾಂ ಪಂ. ವ್ಯಾಪ್ತಿಯ ತಿಪ್ಪಾಪುರದ ದಲಿತರ ಕಾಲೋನಿಗೆ ನೀರು ನುಗ್ಗಿ ಅವಂತಾರ ಸೃಷ್ಟಿಸಿದೆ. ಅತಿಯಾದ ಮಳೆ ಸುರಿದ ಕಾರಣ ಚರಂಡಿಯ ಕೊಳಚೆ ನೀರು ರಸ್ತೆಯ ಮೇಲೆ ಹರಿದು ಕೆಲವು ಮನೆಗಳಿಗೂ ನುಗ್ಗಿದೆ, ಇದರಿಂದ ಜನರು ಓಡಾಡಲು ಪರದಾಡುವಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಭಿಶೇಕ್, ಪ್ರತಿಬಾರಿ ಮಳೆ ಬಂದಾಗಲೂ ಚರಂಡಿ ನೀರು ರಸ್ತೆಗೆ ನುಗ್ಗುತ್ತದೆ ಮನೆಗಳಿಗೂ ನುಗ್ಗುತ್ತದೆ, ಚರಂಡಿ ನೀರಿನ ಗಬ್ಬು ವಾಸನೆಯನ್ನು ಸಹಿಸಿಕೊಳ್ಳಲು ಸಾದ್ಯವಿಲ್ಲ, ಸೊಳ್ಳೆಗಳ ಹಾವಳಿ ಬೇರೆ ಮಳೆಯಿಂದಾಗಿ ಡೆಂಗ್ಯೂ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಚರಂಡಿ ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು, ಸದಸ್ಯರು ಗಮನ ಹರಿಸಿಲ್ಲ, ದಲಿತರ ಕಾಲೋನಿ ಎಂದು ತಾತ್ಸಾರದಿಂದ ಕಾಣುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.