ನಗರದಲ್ಲಿ ನಿಲ್ಲದ ಬೈಕ್ ಕಳ್ಳರ ಹಾವಳಿ: ಕೋರ್ಟ್, ತಾಲೂಕು ಕಚೇರಿ ಸರ್ಕಲ್ ಗಳೇ ಕಳ್ಳರ ಹಾಟ್ ಸ್ಪಾಟ್. ಕೋರ್ಟ್, ಕಚೇರಿಗೆ ಬರುವ ಸಾರ್ವಜನಿಕರಲ್ಲಿ ಆತಂಕ

ಕೋರ್ಟ್, ತಾಲ್ಲೂಕು ಕಚೇರಿಗೆ ಬರುವ ಸಾರ್ವಜನಿಕರನ್ನೇ ಟಾರ್ಗೆಟ್ ಮಾಡಿರುವ ಬೈಕ್ ಕಳ್ಳರು ಸದ್ದಿಲ್ಲದೆ ದಿನಕ್ಕೊಂದು ಬೈಕ್ ಕಳ್ಳತನ ಮಾಡುತ್ತಿದ್ದಾರೆ. ಜುಲೈ 27ರಂದು ನಗರದ ಕೋರ್ಟ್ ಮುಂಭಾಗ ನಿಲ್ಲಿಸಿದ್ದ ಬೈಕ್ ಕಳವು ಆಗಿದೆ. ಕೋರ್ಟ್ ಕೆಲಸದ ಮೇರೆಗೆ ವಕೀಲರನ್ನು ಕಾಣಲು ಗೋಪಾಲ ಎಂಬುವರು ಆಕ್ಟೀವ್ ಹೋಂಡಾ ಬೈಕ್ ನಲ್ಲಿ ಕೋರ್ಟ್ ಬಳಿ ಬಂದಿದ್ದು, ಮೋಟಾರ್ ಬೈಕ್ ನ್ನು ಬೆಳಗ್ಗೆ 11 ಗಂಟೆ ಸಮಯದಲ್ಲಿ ಕೋರ್ಟ್ ಮುಂಭಾಗದಲ್ಲಿ ನಿಲ್ಲಿಸಿ ಕೋರ್ಟ್ ಒಳಗಡೆ ಹೋಗಿದ್ದಾರೆ. ಕೆಲಸ ಮುಗಿಸಿ ವಾಪಸ್ ಬರುವಷ್ಟರಲ್ಲಿ ಅಂದರೆ 12.50 ಗಂಟೆಗೆ ಬಂದು ನೋಡಿದಾಗ ದ್ವಿಚಕ್ರ ವಾಹನ ನಾಪತ್ತೆ ಆಗಿದೆ.

ಅದೇ ರೀತಿ ಮರುದಿನ ಜುಲೈ 28 ರಂದು ತಾಲೂಕು ಕಚೇರಿ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಹೀರೊ ಹೋಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್ ನ್ನು ನಕಲಿ ಕೀ ಬಳಸಿ ಕದ್ದೊಯ್ದಿದ್ದಾರೆ. ಮಂಜುನಾಥ.ಬಿ ಎಂಬುವರು ಸರ್ವೇಯರ್ ಆಗಿ ಕೆಲಸ ಮಾಡುತ್ತಾರೆ. ಎಂದಿನಂತೆ ಬೆಳಗ್ಗೆ 10 ಗಂಟೆಯಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಪಾರ್ಕ್ ಮಾಡಿ ಕೆಲಸಕ್ಕೆ ಹೋಗಿದ್ದಾರೆ. ನಂತರ ಸಂಜೆ 4:45ಕ್ಕೆ ಕೆಲಸ ಮುಗಿದ ಬಳಿ ಬೆಳಗ್ಗೆ ನಿಲ್ಲಿಸಿದ್ದ ಜಾಗದಲ್ಲಿ ಬೈಕ್ ನಾಪತ್ತೆ ಆಗಿದೆ.

ಈ ಎರಡು ಪ್ರಕರಣಗಳು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಕಳವು ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿರುವುದರಿಂದ ಬೈಕ್ ಸವಾರರು ಬೆಚ್ಚಿಬಿದ್ದಿದ್ದಾರೆ.

ಜನ ಗಿಜಿಗುಡುವ, ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಕ್ ಮಾಡಿರೋ ಬೈಕ್ ಗಳನ್ನು ಹಾಡಹಗಲೇ ಕಳವು ಮಾಡುತ್ತಿರುವ‌ ಖದೀಮರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕಿದೆ. ನಗರದ ಪ್ರಮುಖ ಕಚೇರಿ, ವೃತ್ತ, ರಸ್ತೆ, ಸೇರಿದಂತೆ ವಿವಿಧೆಡೆ ಸಿಸಿಟಿವಿ ಅಳವಡಿಸಿ ಇಂತಹ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿ, ಕಳ್ಳರ ಹಾವಳಿಯನ್ನು ತಡೆಗಟ್ಟಬೇಕು ಎಂದು ಸಂಬಂಧಿಸಿದ ಇಲಾಖೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *