ನಗರಕ್ಕೆ ಕುಡಿಯುವ ನೀರನ್ನ ಸರಬರಾಜು ಮಾಡುವ ಜಕ್ಕಲ ಮಡಗು ಜಲಾಶಯದಲ್ಲಿ ನೀರಿನ ಸಂಗ್ರಹ ಕುಸಿತ: ನೀರನ್ನು ನಿಯಮಿತವಾಗಿ ಬಳಸುವಂತೆ ನಗರಸಭೆ ಮನವಿ

ರಾಜ್ಯದಲ್ಲಿ ಮುಂಗಾರು ವಿಳಂಬ ಮತ್ತು ಪೂರ್ವ ಮಾನ್ಸೂನ್ ಮಳೆಯ ಕೊರತೆಯಿಂದಾಗಿ, ಹೆಚ್ಚಿನ ಅಣೆಕಟ್ಟುಗಳು ಮತ್ತು ಜಲಾಶಯಗಳಲ್ಲಿ ನೀರಿನ ಮಟ್ಟವು ತೀವ್ರವಾಗಿ ಕುಸಿದಿದೆ. ಅದರಂತೆ ನಗರಕ್ಕೆ ಕುಡಿಯುವ ನೀರನ್ನ ಸರಬರಾಜು ಮಾಡುವ ಜಕ್ಕಲ ಮಡಗು ಜಲಾಶಯದಲ್ಲಿ ಸಹ ನೀರಿನ ಸಂಗ್ರಹ ಕುಸಿತಗೊಂಡಿದೆ.

ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಎರಡು ನಗರಗಳಿಗೂ ಕುಡಿಯುವ ನೀರು ಸರಬರಾಜು ಮಾಡುವ ಜಕ್ಕಲಮಡಗು ಜಲಾಶಯ ಇರುವುದು ಚಿಕ್ಕಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ. ಆದರೆ ಅದರ ಸಂಪೂರ್ಣ ಜಲಾನಯನ ಪ್ರದೇಶ ಬರುವುದು ದೊಡ್ಡಬಳ್ಳಾಪುರ ತಾಲೂಕಿನಲ್ಲಿ. ಸುಮಾರು 64 ಅಡಿಯಷ್ಟು ಆಳ ನೀರು ನಿಲ್ಲುವ ಸಮರ್ಥ್ಯ ಹೊಂದಿರುವ ಜಕ್ಕಲ ಮಡಗು ಜಲಾಶಯ.

ಜಕ್ಕಲಮಡುಗು ಜಲಾಶಯದಲ್ಲಿ ಪ್ರಸ್ತುತ ನೀರಿನ ಸಂಗ್ರಹ ಕುಸಿತಗೊಂಡಿದೆ‌. ಗರಿಷ್ಠ 64 ಅಡಿಗಳ ಜಲಾಶಯದಲ್ಲಿ ಸದ್ಯದ ನೀರಿನ ಮಟ್ಟ 59 ಅಡಿಯಷ್ಟಿದೆ. ಪ್ರತಿದಿನ ದೊಡ್ಡಬಳ್ಳಾಪುರ ನಗರಕ್ಕೆ ಬೇಕಾಗಿರುವ ನೀರಿನ ಪ್ರಮಾಣ 14.17 MLD. ಆದರೆ ಪ್ರತಿದಿನ ದೊಡ್ಡಬಳ್ಳಾಪುರ ನಗರಕ್ಕೆ ಜಲಾಶಯದಿಂದ 2 MLD(ಕನಿಷ್ಠ ದ್ರವ್ಯ ವಿಸರ್ಜನೆ) ನೀರು ಸರಬರಾಜು ಆಗುತ್ತಿದೆ. 104 ಕೊಳವೆಬಾವಿಗಳಿಂದ 4 MLD ನೀರು ಮಾತ್ರ ಸರಬರಾಜು ಆಗುತ್ತದೆ.

ಸದ್ಯ ಜಕ್ಕಲ ಮಡಗು ಜಲಾಶಯ ಹಾಗೂ ಕೊಳವೆಬಾವಿಗಳಿಂದ ಸರಬರಾಜು ಆಗುತ್ತಿರುವ ಒಟ್ಟು ನೀರಿನ ಪ್ರಮಾಣ 6 MLD ಮಾತ್ರ. ಇನ್ನೂ 7.17 MLD ಕುಡಿಯುವ ನೀರನ ಅಗತ್ಯ ದೊಡ್ಡಬಳ್ಳಾಪುರ ನಗರಕ್ಕೆ ಇದೆ. ನಗರದ ಮನೆಗಳಿಗೆ 6 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಅದರಲ್ಲಿ ಪ್ರತಿ ಪ್ರಜೆಗೆ ಒಂದು ದಿನಕ್ಕೆ 75 ಲೀಟರ್ ನೀರು ಲಭ್ಯತೆ ಆಗುತ್ತಿದೆ.

ಸದ್ಯ ನಗರದ ಜನಕ್ಕೆ ಕುಡಿಯುವ ನೀರಿಗೆ ಯಾವ ಸಮಸ್ಯೆ ಆಗೋದಿಲ್ಲ, ಪ್ರತಿ ಕುಟುಬಂಕ್ಕೆ ಬೇಕಾಗುವ ನೀರು ಪ್ರಸ್ತುತ ಲಭ್ಯವಿದೆ. ಆದರೆ ಹಿತಮಿತವಾಗಿ ನೀರನ್ನು ಬಳಸಬೇಕು ಎಂದು ನಾಗರಿಕರಲ್ಲಿ ಮನವಿ ಮಾಡಿರುವ ನಗರಸಭೆ ಕಮಿಷನರ್ ಕೆ.ಜಿ.ಶಿವಶಂಕರ್.

Leave a Reply

Your email address will not be published. Required fields are marked *