ನಕ್ಸಲಿಸಂ, ಶಸ್ತ್ರಾಸ್ತ್ರ ಹೋರಾಟಕ್ಕೆ ಸಂವಿಧಾನದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿಲ್ಲ- ಸಿಎಂ ಸಿದ್ದರಾಮಯ್ಯ

ಶಸ್ತ್ರ ತೊರೆದು, ಶರಣಾಗತರಾದ ಆರು ಮಂದಿ ನಕ್ಸಲರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯವಾಹಿನಿಗೆ ಬರಮಾಡಿಕೊಂಡು ಮಾಧ್ಯಮದವರೊಂದಿಗೆ ಮಾತನಾಡಿದರು.

ಅನ್ಯಾಯದ ವಿರುದ್ಧ, ಶೋಷಣೆ, ದೌರ್ಜನ್ಯದ ವಿರುದ್ಧ ನ್ಯಾಯಕ್ಕಾಗಿ ಹೋರಾಡುವುದು ತಪ್ಪಲ್ಲ. ವ್ಯವಸ್ಥೆಯ ಬದಲಾವಣೆಗೆ ಹೋರಾಟ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ. ಆದರೆ ಹೋರಾಟ ಶಾಂತಿಯುತವಾಗಿ, ನ್ಯಾಯಯುತವಾಗಿ ಮಾಡಬೇಕು ಎಂದರು.

ನಕ್ಸಲಿಸಂ, ಶಸ್ತ್ರಾಸ್ತ್ರ ಹೋರಾಟಕ್ಕೆ ಸಂವಿಧಾನದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ಈ ಹಿಂದೆಯೂ ಬಹಳ ನಕ್ಸಲೀಯರು ಶಸ್ತ್ರಾಸ್ತ ತ್ಯಜಿಸಿ ಮುಖ್ಯಧಾರೆಗೆ ಬಂದಿದ್ದಾರೆ. ಇವರ ಪುನರ್‌ ವಸತಿಗೆ ಸರ್ಕಾರ ನೆರವು ಒದಗಿಸಿದೆ ಎಂದು ಹೇಳಿದರು.

ಶಾಂತಿಗಾಗಿ ನಾಗರಿಕ ವೇದಿಕೆಯವರು ನನ್ನನ್ನು ಭೇಟಿ ಮಾಡಿ ನಕ್ಸಲಿಯರ ಮನವೊಲಿಸುವ ಬಗ್ಗೆ ತಿಳಿಸಿದ್ದರು. ಆ ಸಂದರ್ಭದಲ್ಲಿ ನಕ್ಸಲಿಸಂ ತ್ಯಜಿಸಿ ಮುಖ್ಯವಾಹಿನಿಗೆ ಬರಲು ಸರಕಾರ ಎಲ್ಲಾ ನೆರವು ನೀಡಲಿದೆ ಎಂದು ಹೇಳಿದ್ದೆ ಎಂದು ತಿಳಿಸಿದರು.

ನಾವು ಕರ್ನಾಟಕದಲ್ಲಿ ನಕ್ಸಲಿಸಂ ಕೊನೆಗಾಣಿಸಲು, ಅವರ ಬೇಡಿಕೆಗೆ ಸ್ಪಂದಿಸಲು ಏನೆಲ್ಲಾ ಕಾರ್ಯಕ್ರಮ ಬೇಕೋ ಅದನ್ನು ಕಾನೂನು ಚೌಕಟ್ಟಿನಲ್ಲಿ ಮಾಡುತ್ತೇವೆ. ಶಸ್ತ್ರಾಸ್ತ್ರದ ಮೂಲಕ ಹೋರಾಟ ಮಾಡಿ ನ್ಯಾಯ ಪಡೆಯಲು ಪ್ರಜಾಪ್ರಭುತ್ವದಲ್ಲಿ, ಸಂವಿಧಾನದಲ್ಲಿ‌ ಅವಕಾಶವಿಲ್ಲ. ಶಾಂತಿಯುತವಾಗಿ ಹೋರಾಟ ನಡೆಸಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಸರ್ಕಾರ ಇದನ್ನು ವಿರೋಧಿಸುವುದಿಲ್ಲ. ಆದರೆ ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ಸುಮ್ಮನಿರಲ್ಲ ಎಂದರು.

ಅನ್ಯಾಯ ಕಡಿಮೆ ಮಾಡಲು ನಮ್ಮ ಸರ್ಕಾರ ಬಹಳ ಪ್ರಯತ್ನ ಮಾಡುತ್ತಿದೆ. ಯಾರ ಮೇಲೆಯೂ ಅನ್ಯಾಯ ಆಗಬಾರದು ಎಂಬುವುದು ನಮ್ಮ ಧ್ಯೇಯ. ಬಡವರ ಹಕ್ಕುಗಳ ರಕ್ಷಣೆಗಾಗಿ, ಅವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಬರಲು ಅನೇಕ ಕಾರ್ಯಕ್ರಮ ಜಾರಿ ಮಾಡಿದೆ. ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ ಯೋಜನೆಗಳ ಉದ್ದೇಶವೂ ಇದೇ ಆಗಿದೆ. ಬಡವರು ಗೌರವಯುತವಾಗಿ ಬದುಕಲು ಅವಕಾಶ ಸಿಗಲಿದೆ. ಬಡವರಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಬದುಕಲು ಶಕ್ತಿ ಬಂದರೆ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಹೇಳಿದರು.

ನಕ್ಸಲಿಸಂ ಮುಕ್ತವಾದ ಸಮಾಜ ನಮ್ಮ ಗುರಿ. ಈ ಹಿನ್ನೆಲೆಯಲ್ಲಿ ಮುಖ್ಯವಾಹಿನಿಗೆ ಬರುವ ನಕ್ಸಲಿಯರಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಬಹಿರಂಗವಾಗಿ ಹೇಳಿದ್ದೆ. ಅವರನ್ನು ಕ್ರಿಮಿನಲ್‌ಗಳ ರೀತಿ ನೋಡದೆ, ಮಾನವರಂತೆ ನೋಡುವ ಭರವಸೆ ನೀಡಿದ್ದೆ ಎಂದರು.

ನಕ್ಸಲೀಯರ ಶರಣಾಗತಿಯಲ್ಲಿ ಸಮಿತಿಯ ಸದಸ್ಯರ ಪಾತ್ರ ಮುಖ್ಯವಾಗಿದ್ದು, ಅವರಿಗೆ ಹಾಗೂ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಬಯಸುತ್ತೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ಆರು ಮಂದಿ ನಕ್ಸಲೀಯರು ಶರಣಾಗುತ್ತಿರುವಾಗ ಬೆಚ್ಚಿಬಿದ್ದಿರುವ ರಾಜ್ಯ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಕಳೆದ ತಿಂಗಳು ಛತ್ತೀಸ್‌ಘಢದಲ್ಲಿ ಶರಣಾದ 30 ನಕ್ಸಲರನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಅವರೇ ಖುದ್ದಾಗಿ ಬರಮಾಡಿಕೊಂಡು ಆನಂದಬಾಷ್ಪ ಸುರಿಸಿದಾಗ ಯಾಕೆ ಬೆಚ್ಚಿ ಬಿದ್ದಿಲ್ಲ? ಶಾ ಅವರಿಗೆ ನಕ್ಸಲರ ಬಗ್ಗೆ ಯಾಕೆ ಇಷ್ಟೊಂದು ಪ್ರೀತಿ ಎಂದು ಕೇಳುವ ದಮ್ಮು ಸುನೀಲ್ ಕುಮಾರ್ ಅವರಿಗೆ ಇದೆಯೇ? ಎಂದು ಪ್ರಶ್ನೆ ಮಾಡಿದರು.

ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಶರಣಾದ ನಕ್ಸಲ್ ದಂಪತಿಗೆ ಅಲ್ಲಿನ ಬಿಜೆಪಿ ಸರ್ಕಾರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು 41 ಲಕ್ಷ ರೂಪಾಯಿಗಳ ನೆರವು ನೀಡಿರುವುದು ಶಾಸಕ ಸುನೀಲ್ ಕುಮಾರ್ ಅವರಿಗೆ ಗೊತ್ತಿರಲಿಲ್ಲವೇ? ಈ ನೆರವನ್ನು ಯಾವ ಮಾನದಂಡದಲ್ಲಿ ನೀಡಿದ್ದೀರಿ ಎಂದು ಕೇಳುವ ಧೈರ್ಯ ಸುನೀಲ್ ಕುಮಾರ್ ಅವರಿಗೆ ಇದೆಯೇ? ಎಂದು ಪ್ರಶ್ನಿಸಿದರು.

ಶರಣಾಗಿರುವ ಈ ನಕ್ಸಲೀಯರ ಅನುಸರಿಸಿದ ಹಿಂಸಾಮಾರ್ಗದ ಬಗ್ಗೆ ನಮಗೆಲ್ಲರಿಗೂ ವಿರೋಧವಿದೆ. ಆದರೆ ಇವರಲ್ಲಿ ಯಾರೂ ಜನರ ತೆರಿಗೆ ಹಣವನ್ನು ನುಂಗಿದ ಭ್ರಷ್ಟರೂ ಅಲ್ಲ, ರಾಮ-ಪರಶುರಾಮನ ಮೂರ್ತಿ ನಿರ್ಮಾಣದಲ್ಲಿಯೂ ಮೋಸ ಮಾಡಿ ಜೇಬು ತುಂಬಿಕೊಂಡವರೂ ಅಲ್ಲ ಎಂದರು‌.

ಲಾಠಿ-ದೊಣ್ಣೆ, ಕತ್ತಿ-ತ್ರಿಶೂಲಗಳನ್ನು ನೀಡಿ ಅಮಾಯಕರನ್ನು ಹಿಂಸಾಮಾರ್ಗಕ್ಕೆ ಇಳಿಸಿ, ರಾಜಕೀಯ ಲಾಭ ಗಳಿಸುವ ಕುತಂತ್ರದ ರಾಜಕಾರಣ ನಮ್ಮದ್ದಲ್ಲ. ದಾರಿ ತಪ್ಪಿ ಹಿಂಸೆಯ ಮಾರ್ಗ ಹಿಡಿದವರ ಮನವೊಲಿಸಿ, ಸಮಾಜದ ಮುಖ್ಯವಾಹಿನಿಗೆ ಸೇರಿಸಿ, ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಪರಿವರ್ತನೆ ಮಾಡುವುದು ಒಂದು ಸರ್ಕಾರದ ಕರ್ತವ್ಯವಾಗಿದೆ. ಇದೇ ಕರ್ತವ್ಯವನ್ನು ನಮ್ಮ ಸರ್ಕಾರ ಪಾಲಿಸುತ್ತಾ ಬಂದಿದೆ ಎಂದು ತಿಳಿಸಿದರು.

Ramesh Babu

Journalist

Recent Posts

ಏ.12ರಂದು ದೊಡ್ಡಬಳ್ಳಾಪುರ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ ನಗರದಲ್ಲಿ ಏ.12 ರಂದು 220/66/11ಕೆವಿ ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F02-Birla Super ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು…

8 hours ago

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರ ಸಾವು

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರವಾಗಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ನಡೆದಿದೆ.. 17 ವರ್ಷದ…

12 hours ago

ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ರಾಯಚೂರು ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುರೇಶ್ ಶೆಟ್ಟಿ ಲೋಕಾಯುಕ್ತರ ಬಲೆಗೆ ಬಿದ್ದ ಮುಖ್ಯಾಧಿಕಾರಿ. ರಾಘವೇಂದ್ರ…

12 hours ago

ಹುಚ್ಚನೊಬ್ಬನ ಕನಸು….

ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು. ಬ್ರಾಹ್ಮಣರ…

17 hours ago

PUC Result: ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ….ಈ ಕಥೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ

600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು…

1 day ago

ತೂಬಗೆರೆ ಸರ್ಕಾರಿ ಪಿಯು ಕಾಲೇಜಿಗೆ ಮತ್ತೊಮ್ಮೆ ಮೆರುಗು: ಶೇ.95.45 ಫಲಿತಾಂಶ

ದೊಡ್ಡಬಳ್ಳಾಪುರ (ತೂಬಗೆರೆ): ಗ್ರಾಮಾಂತರ ಭಾಗದಲ್ಲಿದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು…

1 day ago