ದೊಡ್ಡಬಳ್ಳಾಪುರ: ಸಾಲ ವಸೂಲಾತಿ ಮಾಡಿಕೊಡುವುದಾಗಿ ನಂಬಿಸಿದ ನಕಲಿ ಪತ್ರಕರ್ತನೊಬ್ಬ ಮಹಿಳೆಯೊಬ್ಬರಿಂದ 65 ಸಾವಿರ ಹಣ ಪಡೆದು ವಂಚಿಸಿದ್ದಲ್ಲದೇ ಆ ಮಹಿಳೆಯನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸಾಸಲು ಹೋಬಳಿ ಭೋವಿಪಾಳ್ಯ ನಿವಾಸಿ ಕೆಂಪರಾಜು(ರಾಜು) ಎಂಬಾತನೇ ಹಣ ಪಡೆದು ವಂಚಿಸಿರುವ ರೋಲ್‌ಕಾಲ್ ಪತ್ರಕರ್ತ.
ಮಧುಗಿರಿ ಮೂಲದ ಸದ್ಯ ಗೌರಿಬಿದನೂರಿನಲ್ಲಿ ವಾಸವಿರುವ ಸಾವಿತ್ರಮ್ಮ ಎಂಬುವರೇ ನಕಲಿ ಪತ್ರಕರ್ತನಿಂದ ಮೋಸ ಹೋದವವರು.
ಸಾವಿತ್ರಮ್ಮ ಅವರು ಮಧುಗಿರಿ ಮೂಲದ ಶಿವಪ್ಪನಾಯಕ ಎಂಬುವರಿಗೆ ಕೋಳಿಫಾರಂ ಗಾಗಿ 4,50000 ಸಾಲ ನೀಡಿದ್ದರು. ಆದರೆ, ಶಿವಪ್ಪನಾಯಕ ಸಾಲ ವಾಪಸ್ ಕೊಟ್ಟಿರಲಿಲ್ಲ. ಈ ಸಂಬಂಧ ಮಧುಗಿರಿ ಕೊಡಿಗೇನಹಳ್ಳಿ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದರು.
ಇದರ ಮಧ್ಯೆ ಮಧುಗಿರಿಯ ಕೆಇಬಿ ನಾಗರಾಜು ಎಂಬುವರು ನಕಲಿ ಪತ್ರಕರ್ತ ಕೆಂಪರಾಜುನನ್ನು ಮಹಿಳೆಗೆ ಪರಿಚಯ ಮಾಡಿಕೊಟ್ಟಿದ್ದರು. ಆಗ ಕೆಂಪರಾಜು ನಾನು ಪತ್ರಕರ್ತ. ನಿಮ್ಮ ಸಾಲ ವಸೂಲಿ ಮಾಡಿಕೊಡುತ್ತೇನೆ. ನನಗೆ ಒಂದು ಲಕ್ಷ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದ. ಸಾಲ ವಸೂಲಿ ಆಗಬಹುದು ಎಂಬ ಭರವಸೆಯಿಂದ ಆ ಮಹಿಳೆ 65 ಸಾವಿರ ಹಣವನ್ನು ಕೆಂಪರಾಜು ಬ್ಯಾಂಕ್ ಖಾತೆಗೆ 2024 ಫೆಬ್ರುವರಿ ತಿಂಗಳಲ್ಲಿ ಜಮೆ ಮಾಡಿದ್ದರು.
ಹಣ ಪಡೆದುಕೊಂಡ ನಂತರ ನಕಲಿ ಪತ್ರಕರ್ತ ಕೆಂಪರಾಜು ಯಾವುದೇ ಸಾಲ ವಸೂಲಿ ಮಾಡಿಕೊಟ್ಟಿರಲಿಲ್ಲ. ಈ ಬಗ್ಗೆ ಸಾವಿತ್ರಮ್ಮ ದೂರವಾಣಿ ಮೂಲಕ ವಿಚಾರಿಸಿದಾಗ ಸರಿಯಾಗಿ ಸ್ಪಂದಿಸಿರಲಿಲ್ಲ. ಕರೆ ಕಡಿತಗೊಳಿಸುವುದು, ಅವಾಚ್ಯ ಶಬ್ದಗಳಿಂದ ಬಯ್ಯುತ್ತಿದ್ದ.ಇದರಿಂದ ರೋಸಿದ ಮಹಿಳೆ ಭೋವಿಪಾಳ್ಯದ ಕೆಂಪರಾಜು ಮನೆಯ ಬಳಿ ಹೋದಾಗ ಅವರ ತಾಯಿ ಸ್ವಲ್ಪ ಸಮಯ ಕೊಡಿ. ನಾನೇ ನೀವು ಕೊಟ್ಟಿರುವ ಹಣವನ್ನು ವಾಪಸ್ ಕೊಡಿಸುತ್ತೇನೆ ಎಂದೇಳಿದ್ದರು. ಆ ಬಳಿಕ ಸಾವಿತ್ರಮ್ಮ ವಾಪಸ್ ಬಂದಿದ್ದರು.
ಕೆಲ ದಿನಗಳ ಬಳಿಕ ಕರೆ ಮಾಡಿ ಹಣ ಕೇಳಿದಾಗ ಕೆಂಪರಾಜು ತಾಯಿ ಉಲ್ಟಾ ಹೊಡೆದಿದ್ದರು. ಅಲ್ಲದೇ ಹಣ ಕಳೆದುಕೊಂಡ ಮಹಿಳೆಯನ್ನೇ ನಿಂದಿಸಿದ್ದರು. ಇದಾದ ನಂತರ ದೂರವಾಣಿಯಲ್ಲಿ ನಕಲಿ ಪತ್ರಕರ್ತ ಕೆಂಪರಾಜು, ಆತನ ಸ್ನೇಹಿತ ನರಸಿಂಹರಾಜು ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಮಹಿಳೆ ಮೇಲೆಯೇ ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ಕೊಟ್ಟರೂ ಸ್ಪಂದಿಸದ ಪೊಲೀಸರು
ನಕಲಿ ಪತ್ರಕರ್ತ ಕೆಂಪರಾಜು ವಿರುದ್ಧ ಸಾವಿತ್ರಮ್ಮ ದೂರು ನೀಡಿದರೂ ದೊಡ್ಡಬೆಳವಂಗಲ ಪೊಲೀಸರು ಆತನ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಕಾಲಹರಣ ಮಾಡುತ್ತಿದ್ದಾರೆ. ಠಾಣೆಯ ಕೆಲ ಸಿಬ್ಬಂದಿಯೇ ನಕಲಿ ಪತ್ರಕರ್ತನಿಗೆ ಸಾಥ್ ನೀಡುತ್ತಿರುವ ಆರೋಪವೂ ಕೇಳಿಬಂದಿದೆ.
ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವಾಗ ಪೊಲೀಸರ ಬಗ್ಗೆಯೂ ಲಘುವಾಗಿ ಮಾತನಾಡಿರುವ ಆಡಿಯೋ ತುಣುಕು ಮಾಧ್ಯಮಗಳಿಗೆ ಲಭ್ಯವಾಗಿದೆ. ಮಹಿಳೆಗೆ ಬೈದು, ಪ್ರಾಣ ಬೆದರಿಕೆ ಹಾಕಿರುವ ಕುರಿತು ಆಡಿಯೋ ಇದ್ದರೂ ಪೊಲೀಸರು ಮಾತ್ರ ಆತನ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಇರುವುದು ಪ್ರಶ್ನಾರ್ಥಕವಾಗಿದೆ.
ನಕಲಿ ಪತ್ರಕರ್ತನ ಆಟಾಟೋಪಕ್ಕೆ ಕಡಿವಾಣ ಯಾವಾಗ..?
ನಕಲಿ ಪತ್ರಕರ್ತ ಕೆಂಪರಾಜು ಸಾವಿತ್ರಮ್ಮ ಅವರಿಂದ ಹಣ ಪಡೆದು ವಂಚಿಸಿರುವುದಷ್ಟೇ ಅಲ್ಲದೇ ಹಲವು ಕಡೆ ಇತನ ಆಟಾಟೋಪ, ವಂಚನೆಯ ದೂರುಗಳು ಕೇಳಿಬಂದಿದೆ.
ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ಹೋಬಳಿಗಳಲ್ಲಿ ಅಂಗಡಿ, ಕ್ಲಿನಿಕ್ ಗಳಿಂದಲೂ ಹಣ ಪೀಕಿರುವ ಆರೋಪ ಕೇಳಿಬಂದಿದೆ. ನಗರದ ಸ್ವೀಟ್ ಸ್ಟಾಲ್ ಮಾಲೀಕರೊಬ್ಬರಿಂದ ಇದೇ ಕೆಂಪರಾಜು, ನರಸಿಂಹರಾಜು ಹೆದರಿಸಿ ಹಣ ವಸೂಲಿ ಮಾಡಿರುವ ಘಟನೆಯೂ ವರದಿಯಾಗಿದೆ. ಕುಣಿಗಲ್, ಕೊರಟಗೆರೆ, ಹೊಸಕೋಟೆಯಲ್ಲೂ ಹಲವರನ್ನು ಹೆದರಿಸಿ ಹಣ ಪೀಕಿದ್ದಾನೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.