ನಕಲಿ ದಾಖಲೆ ಸೃಷ್ಟಿಸಿ ಸುಮಾರು ₹40 ಕೋಟಿ ಮೌಲ್ಯದ ಜಮೀನು ಕಬಳಿಕೆ: ಸರ್ಕಾರದ ವಶಕ್ಕೆಪಡೆದ ಡಿಸಿ

ದೊಡ್ಡಬಳ್ಳಾಪುರ: ನಗರದ ಅಂಚಿನ ಅರೆಹಳ್ಳಿಗುಡ್ಡದಹಳ್ಳಿ ಗ್ರಾಮದ ಸರ್ವೆ ನಂಬರ್ 57ಕ್ಕೆ ಸೇರಿದ 6 ಎಕರೆ ಗೋಮಾಳ ಜಮೀನಿಗೆ ನಕಲಿ ದಾಖಲೆ ಸೃಷಿಸಿಕೊಂಡು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದ ಕೆ.ಬಿ.ಮುದ್ದಪ್ಪ, ಪುರುಷೋತ್ತಮಗೌಡ,ಕೆ.ಬಿ.ಹನುಮಂತರಾಯಪ್ಪ, ಎಂ.ಮುನಿರಾಜು ಅವರ ಹಪಣಿಯನ್ನು ವಜಾಕರಿಸುವ ಮೂಲಕ ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಸೆಪ್ಟೆಂಬರ್ 2 ರಂದು ಮಾಡಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಜಿಲ್ಲಾಧಿಕಾರಿಗಳು ಸರ್ಕಾರದ ವಶಕ್ಕೆ ಪಡೆದಿರುವ ಜಮೀನಿನ ಈಗಿನ ಮಾರುಕಟ್ಟೆ ಮೌಲ್ಯ ಸುಮಾರು ₹40 ಕೋಟಿ ಬೆಲೆ ಬಾಳಲಿದೆ. ಸರ್ಕಾರದ ವಶಕ್ಕೆ ಪಡೆದಿರುವ 6 ಎಕರೆ ಜಮೀನು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಅಂಚಿನಲ್ಲೆ ಇದೆ. ಅಲ್ಲದೆ ರಾಷ್ಟ್ರ ಮಟ್ಟದ ಭಾರತ್ ಸ್ಕೌಟ್ಸ್ ಮತ್ತು ಗೈಡ್ ತರಬೇತಿ ಕೇಂದ್ರದ ಪಕ್ಕದಲ್ಲೇ ಇದೆ.

ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಿರುವ ಮಾಹಿತಿಯಂತೆ ಗೋಮಾಳ ಜಮೀನು ಕಬಳಿಸಲು ಈ ಹಿಂದೆ ತಾಲ್ಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿರುವ ಕಂದಾಯ ಅಧಿಕಾರಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಚೇರಿಯಲ್ಲಿನ ದಾಖಲೆಗಳನ್ನು ಪರಿಶೀಲಿಸನೆ ಮಾಡದೆ ಆದೇಶ ಮಾಡುವ ಮೂಲಕ ಕೋಟ್ಯಾಂತರ ರೂಪಾಯಿ ಮೌಲ್ಯದ ಜಮೀನು ಕಬಳಿಸಲು ಸಹಕರಿಸಿದ್ದಾರೆ ಎಂದು ವಿವರಿಸಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿಕೊಂಡಿರುವ ಜಮೀನಿನಲ್ಲಿ 1998 ರಿಂದಲು ರಾಗಿ ಬೆಳೆ ಬೆಳೆಯುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಗೂಗಲ್ ನಕ್ಷೆ ಪರಿಶೀಲನೆಯಲ್ಲಿ 2024ರವರೆಗೂ ಸರ್ವೇ ನಂಬರ್ 57 ರಲ್ಲಿ ಯಾವುದೇ ಬೆಳೆಯನ್ನು ಬೆಳೆಯದೆ ಇರುವುದು ಕಂಡು ಬಂದಿದೆ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಸರ್ವೇ ನಂಬರ್ 57ರಲ್ಲಿನ ಗೋಮಾಳ ಜಮೀನು ಕಬಳಿಕೆ ವಿರುದ್ಧ ಹಲವಾರು ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರುಗಳನ್ನು ಸಲ್ಲಿಸಿದ್ದರು.

Leave a Reply

Your email address will not be published. Required fields are marked *

error: Content is protected !!