ನಕಲಿ ದಾಖಲೆ ಸೃಷ್ಟಿಸಿ ದಲಿತರ ಜಾಗ ಕಬಳಿಕೆ ಆರೋಪ ವಿಚಾರ: ಪೂರ್ವಯೋಜಿತವಾಗಿ ಮಾಡಿದ ಆರೋಪ: ಆರೋಪದಲ್ಲಿ ನಿಜಾಂಶ ಕೊರತೆ ಇದೆ- ಕಾಂಗ್ರೆಸ್ ಮುಖಂಡ ರುದ್ರಮೂರ್ತಿ

ನನ್ನ ವಿರುದ್ಧ ಪ್ರತಿಭಟನೆ ಮಾಡುವುದಕ್ಕಿಂತ ಮೊದಲು ರಾತ್ರಿ 10:30 ರ ಸಮಯದಲ್ಲಿ ಸಕ್ಕರೆಗೊಲ್ಲಹಳ್ಳಿ‌ ಗ್ರಾಮದಲ್ಲಿ ಶಾಸಕರ ಸಂಬಂಧಿಕರಾದ ಕೇಶವ್, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಸೇರಿದಂತೆ ಹಾಲಿ ಅಧ್ಯಕ್ಷರು ಸೇರಿ ಸಭೆ ಮಾಡಿ ಮರುದಿನ ಪೂರ್ವಯೋಜಿತವಾಗಿ ಸಹೋದರರ ಸಮಾನರಾದ ದಲಿತರನ್ನು ಹಾಗೂ ಸಂಘಟನೆಗಳನ್ನ ಒಗ್ಗೂಡಿಸಿ ನನ್ನ ವಿರುದ್ಧ ಸುಖಾಸುಮ್ಮನೆ ಪ್ರತಿಭಟನೆ ಮಾಡಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ರುದ್ರಮೂರ್ತಿ ಹೇಳಿದರು.

ದೊಡ್ಡಬೆಳವಂಗಲ ಹೋಬಳಿಯ ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂಚನಹಳ್ಳಿ ದಲಿತ ಸಮುದಯಕ್ಕೆ ಸೇರಿದ ಗ್ರಾಮಠಾಣಾ ಜಾಗವನ್ನು ಮಾಜಿ ಅಧ್ಯಕ್ಷರ ಪತಿ ರುದ್ರಮೂರ್ತಿ ಎಂಬುವರು ಪಿಡಿಒ ಮುನಿರಾಜು ಅವರಿಗೆ ಹಣದ ಆಮಿಷ ಒಡ್ಡಿ ನಕಲಿ ದಾಖಲೆ ಸೃಷ್ಟಿ ಮಾಡಿರುತ್ತಾರೆ, ಹಾಗೂ ನಕಲಿ ದಾಖಲೆಯ ಮೇಲೆ ಸದರಿ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿರುತ್ತಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಬಸವರಾಜ್ ಅವರು ಆರೋಪ ಮಾಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಪಂಚಾಯಿತಿ ಎದುರು ಧರಣಿ ನಡೆಸಿದ್ದರು‌. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆ ಜಮೀನಿಗೆ ಸಂಬಂಧಿಸಿದಂತೆ ನನ್ನ ಹೆಸರಿನಲ್ಲಿ ಯಾವ ದಾಖಲೆಗಳು ಇಲ್ಲ, ಲಿಂಗಯ್ಯ, ಮುನಿಮುತ್ತಯ್ಯ ಎಂಬ ಸಹೋದರರ ಹೆಸರಿನಲ್ಲಿದೆ. ದಲಿತರ ಭೂಮಿ ಎಂಬುದಕ್ಕೆ ಅವರಲ್ಲಿ ಯಾವ ಸೂಕ್ತ ದಾಖಲೆಗಳು ಏನಿದೆ? ಅವರ ಬಳಿ ಯಾವ ನಿಖರವಾದ ದಾಖಲೆ ಇಲ್ಲದೆ ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದಾರೆ ಎಂದು ಕಿಡಿಕಾರಿದರು.

ಚಿಕ್ಕಕಾಳೇನಹಳ್ಳಿ ಕೆರೆಯಿಂದ ರೈತರು ತಮ್ಮ ಜಮೀ‌ನುಗಳಿಗೆ ಮಣ್ಣುನ್ನ ತುಂಬಿಕೊಂಡು ಹೋಗಿದ್ದಾರೆ. ನಾನು ಯಾರಿಂದಲೂ ನಾಯಾಪೈಸೆ ಹಣ ತೆಗೆದುಕೊಂಡಿಲ್ಲ, ಅವರ ಬಳಿ ಈ ಕುರಿತು ಸಾಕ್ಷ್ಯಾಧಾರಗಳು ಇದ್ದರೆ ನೀಡಲಿ ಎಂದರು.

ಗ್ರಾಮ ಪಂಚಾಯತಿ ಅಭಿವೃದ್ಧಿಗೆ ಬಿಬಿಎಂಪಿಯಿಂದ ಬಿಡುಗಡೆಯಾಗಿದ್ದ ಅನುದಾನದಲ್ಲಿ 17ಲಕ್ಷ ಗ್ರಾಮ ಪಂಚಾಯಿತಿ ಖಾತೆಯಲ್ಲಿ ಇತ್ತು. ಅದು ಈಗ ಏನಾಗಿದೆ. ಯಾವ ಅಭಿವೃದ್ಧಿಗೆ ಅನುದಾನ ಬಳಸಿಕೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದರು.

ಕೋನೇನಹಳ್ಳಿಯ ಗಾಣಗಪ್ಪನಕಟ್ಟೆ ದುರಸ್ತಿಗೆ 15ನೇ ಹಣಕಾಸು ಆಯೋಗದಿಂದ ಮಂಜೂರಾಗಿದ್ದ 10 ಲಕ್ಷ ರೂ. ಹಣ ಗುಳುಂ ಮಾಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನೀಲಿ ನಕಾಶೆಯಲ್ಲಿ ಕೇವಲ‌ 50‌ಸಾವಿರ ಮಾತ್ರ ಇದೆ. ಆದರೆ ಆರೋಪ ಮಾಡಿರುವುದು 10ಲಕ್ಷ, ಇಲ್ಲೇ ಗೊತ್ತಾಗುತ್ತದೆ ಸುಖಾಸುಮ್ಮನೆ ಮಾಡಲಾದ ಸುಳ್ಳು ಆರೋಪ ಎಂದು ಹೇಳಿದರು.

Leave a Reply

Your email address will not be published. Required fields are marked *