ನಂದಿ ಬೆಟ್ಟದ ಸೊಬಗನ್ನು ಒಮ್ಮೆ ನೋಡ ಬನ್ನಿ…….

2022ರ ಕಾಲಘಟ್ಟ ಮುಗಿಯುವ ಹಂತದಲ್ಲಿದ್ದು, ಇದೀಗ ಎಲ್ಲರ ಚಿತ್ತ 2023ರ ಹೊಸವರ್ಷದ ಕಡೆಗೆ ನೆಟ್ಟಿದೆ. ಹೊಸವರ್ಷ ಸಂಭ್ರಮಾಚರಣೆಗೆ ಇನ್ನು ಕೆಲವೇ ದಿನ ಬಾಕಿ ಇದೆ. ಆದರೆ ಪ್ರಕೃತಿ ಪ್ರೇಮಿಗಳು, ಪ್ರವಾಸಿಗರು ಈಗಿನಿಂದಲೇ ಪ್ರವಾಸ ಕೈಗೊಳ್ಳಲು ತಯಾರಿ ನಡೆಸುತ್ತಿದ್ದಾರೆ.

ಈ ವರ್ಷದ ಅಂತ್ಯದಲ್ಲಿ ಸಾಲು ರಜೆಗಳಿರುವ ಕಾರಣ ತಮ್ಮ ಕುಟುಂಬಗಳ ಜೊತೆಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ಲಾನ್‌ ಹಾಕಿಕೊಂಡಿರುತ್ತಾರೆ. ಅಲ್ಲದೇ ಪ್ರವಾಸಿ ತಾಣಗಳಲ್ಲಿ ಹೊಸವರ್ಷ ಆಚರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಖಾಸಗಿ ಕಂಪನಿಗಳ ಸಿಬ್ಬಂದಿಗಳಿಗೆ ಸಾಲು ರಜೆಗಳಿರುವುದರಿಂದ ಅವರು ಹೊಸವರ್ಷಕ್ಕೆ ಯಾವ ಪ್ರವಾಸಿ ತಾಣಗಳಿಗೆ ಹೋಗುವುದು ಎನ್ನುವ ಗೊಂದಲದಲ್ಲಿ ಇರುತ್ತಾರೆ. ಮತ್ತೊಂದೆಡೆ ಇನ್ನು ಕೆಲವರು ಒಂದು ದಿನದ ಮಟ್ಟಿಗೆ ಪ್ರವಾಸ ಮಾಡಲು ಯಾವ ತಾಣಗಳು ಸೂಕ್ತ ಎನ್ನುವ ಗೊಂದಲದಲ್ಲಿದ್ದಾರೆ.

ಬೆಂಗಳೂರಿನ ಸುತ್ತಮುತ್ತ ಅತ್ಯುತ್ತಮ ಪ್ರವಾಸಿ ತಾಣಗಳು ಇವೆ. ವಾರಾಂತ್ಯದಲ್ಲಿ ಪ್ರವಾಸ ಕೈಗೊಳ್ಳಲು ಉತ್ತಮವಾದ ಪ್ರವಾಸಿ ತಾಣಗಳನ್ನು ನೋಡಬಹುದಾಗಿದೆ. ಅದರಲ್ಲೂ ಈಗ ಚಳಿ ವಾತಾವರಣ ಇರುವುದರಿಂದ, ಈ ಕಾಲಕ್ಕೆ ಸೂಕ್ತವಾಸ ತಾಣಗಳನ್ನು ಕೂಡ ಬೆಂಗಳೂರಿನ ಸಮೀಪದಲ್ಲಿಯೇ ಕಾಣಬಹುದಾಗಿದೆ.

ಕೆಲಸದ ಒತ್ತಡದ ಜಂಜಾಟದ ನಡುವೆ ನೊಂದು-ಬೆಂದು ಸಿಬ್ಬಂದಿಗಳು ಸಾಕಾಗಿ ಹೋಗಿರುತ್ತಾರೆ. ಈ ಒತ್ತಡವನ್ನು ನಿವಾರಿಸಲು ಇದು ಒಂದು ಉತ್ತಮ ಅವಕಾಶವಾಗಿದೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಹೊಸವರ್ಷ ಆಚರಿಸಲು ಕಾತರದಿಂದ ಕಾಯುತ್ತಿದ್ದಾರೆ. ಹಾಗೆಯೇ ಬೆಂಗಳೂರಿನ ಸಮೀಪವಿರುವ ಪ್ರಮುಖ ಪ್ರವಾಸಿ ತಾಣಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರಿನ ಸಮೀಪದಲ್ಲಿ ಪ್ರಸಿದ್ಧ ಗಿರಿಧಾಮಗಳು, ಐತಿಹಾಸಿಕ ಮತ್ತು ಪಾರಂಪರಿಕ ತಾಣಗಳು, ವನ್ಯಜೀವಿ ಅಭಯಾರಣ್ಯಗಳು ಪ್ರವಾಸಿಗರನ್ನು ತನ್ನತ್ತ ಕೈಬಿಸಿ ಕರೆಯುತ್ತಲೇ ಇರುತ್ತವೆ. ಇಲ್ಲಿ ಪ್ರವಾಸಿಗರು ವಾರಾಂತ್ಯದ ವಿಹಾರಕ್ಕೆ, ಸುದೀರ್ಘ ರಜೆಗೆ ಸೂಕ್ತವಾದ ಪ್ರವಾಸಿ ತಾಣಗಳನ್ನು ಕಾಣಬಹುದಾಗಿದೆ.
ಪ್ರವಾಸಿಗರು ಭೇಟಿ ನೀಡಬಹುದಾದ ನಗರದ ಸಮೀಪದಲ್ಲಿರುವ ಸ್ಥಳಗಳ ಪಟ್ಟಿ ಇಲ್ಲಿದೆ.

ನಂದಿ ಗಿರಿಧಾಮದ ವೈಶಿಷ್ಟ್ಯವೇನು…?

ಬೆಂಗಳೂರಿನಿಂದ 61 ಕಿಲೋ ಮೀಟರ್‌ ದೂರದಲ್ಲಿರುವ ನಂದಿ ಬೆಟ್ಟ ವಾರಾಂತ್ಯದ ಜನಪ್ರಿಯ ತಾಣವಾಗಿದೆ. ನಂದಿದುರ್ಗ ಎಂದು ಕರೆಯಲ್ಪಡುವ ನಂದಿ ಬೆಟ್ಟವು ಸಮುದ್ರ ಮಟ್ಟದಿಂದ 1,478 ಮೀಟರ್ ಅಂದರೆ 4,850 ಅಡಿಗಳಷ್ಟು ಎತ್ತರದಲ್ಲಿದೆ. ಬೆಂಗಳೂರಿನ ಸಮೀಪದಲ್ಲಿರುವ ಈ ಬೆಟ್ಟವು ಪ್ರವಾಸಿಗರನ್ನು ತನ್ನತ್ತ ಕೈಬಿಸಿ ಕರೆಯುತ್ತಲೇ ಇರುತ್ತದೆ. ಯೋಗ ನಂದೀಶ್ವರ ದೇವಾಲಯದ ಹೊರಭಾಗವನ್ನು ಕಾವಲು ಕಾಯುತ್ತಿರುವ ಗೂಳಿ ನಂದಿಯ ಅದ್ಭುತ ಪ್ರತಿಮೆಯಿದೆ. ಆದ್ದರಿಂದ ಈ ಸ್ಥಳಕ್ಕೆ ನಂದಿ ಬೆಟ್ಟ ಎಂದು ಹೆಸರಿಸಲಾಗಿದೆ. ಯೋಗ ನಂದೀಶ್ವರ ದೇವಾಲಯವು ಬೆಟ್ಟಗಳ ಮೇಲೆ ನೆಲೆಗೊಂಡಿದೆ ಮತ್ತು ಶಿವನ ವಾಸಸ್ಥಾನವಾಗಿದೆ.

ನಂದಿ ಬೆಟ್ಟ ಬಳಿ ಯಾವಾಗಲೂ ತಂಪು ಗಾಳಿ ಮತ್ತು ಶಾಂತವಾದ ವಾತವರಣದಿಂದ ಕೂಡಿರುತ್ತದೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಪ್ರತಿನಿತ್ಯ ಪ್ರವಾಸಿಗರು ಕಿಕ್ಕಿರಿದು ಆಗಮಿಸುತ್ತಲೇ ಇರುತ್ತಾರೆ. ನಂದಿ ಬೆಟ್ಟದಲ್ಲಿನ ಹವಾಮಾನವು ವರ್ಷದುದ್ದಕ್ಕೂ ಮನಸಿಗೆ ನೆಮ್ಮದಿ ನೀಡುವಂತಿರುತ್ತದೆ. ಬೆಳಗ್ಗೆ 5ರಿಂದ 9 ಗಂಟೆಯವರೆಗೂ ಮಂಜು ಮುಸುಕಿದ ವಾತಾವರಣದಿಂದ ಕೂಡಿರುತ್ತದೆ.

ಪ್ರತಿನಿತ್ಯ ಸಾವಿರಾರು ಮಂದಿ ಭೇಟಿಕೊಡುವ ಸ್ಥಳ ಇದಾಗಿದೆ

ಈ ದೃಶ್ಯವನ್ನು ಸವಿಯಲು ಪ್ರತಿನಿತ್ಯ ಸಾವಿರಾರು ಜನ ಭೇಟಿ ನೀಡುತ್ತಲೇ ಇರುತ್ತಾರೆ. ಅದರಲ್ಲೂ ಇಲ್ಲಿಗೆ ದೊಡ್ಡ ವಾಹನಗಳಲ್ಲಿ ಬರುವ ಬದಲಾಗಿ, ದ್ವೀಚಕ್ರ ವಾಹನಗಳಲ್ಲಿ ಪ್ರಯಾಣ ಬೆಳೆಸಿದರೆ ಇನ್ನು ಉತ್ತಮವಾದ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ನಂದಿ ಬೆಟ್ಟದ ವಾಯುವ್ಯದಲ್ಲಿ 4762 ಅಡಿ ಎತ್ತರದ ಚನ್ನಕೇಶವ ಬೆಟ್ಟ, ನೈರುತ್ಯದಲ್ಲಿ 4657 ಅಡಿ ಎತ್ತರದ ಬ್ರಹ್ಮಗಿರಿ, ಉತ್ತರದಲ್ಲಿ 4749 ಅಡಿ ಎತ್ತರದ ಸ್ಕಂದಗಿರಿ ಹೊಸವರ್ಷ ಆಚರಣೆ ಮಾಡಲು ಪ್ರಮುಖ ತಾಣಗಳಾಗಿವೆ.

ಚೋಳರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿರುವ ಯೋಗನಂದೀಶ್ವರ

ನಂದಿ ಬೆಟ್ಟದ ಮೇಲಿರುವ ಯೋಗನಂದೀಶ್ವರ ದೇವಸ್ಥಾನವು ಚೋಳರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಈ ದೇವಾಲಯದ ಗರ್ಭಗೃಹ ಪ್ರವೇಶದ್ವಾರದಲ್ಲಿ ಅಲಂಕಾರಿಕ ಹಿತ್ತಾಳೆಯಿಂದ ಆವೃತವಾದ ಬಾಗಿಲುಗಳು ಮತ್ತು ದ್ವಾರಪಾಲಕರ ಮೂರ್ತಿಗಳು ಎರಡೂ ಬದಿಯಲ್ಲಿವೆ. ಇನ್ನು ಭೋಗನಂದೀಶ್ವರ ದೇವಸ್ಥಾನ ನಂದಿ ಬೆಟ್ಟದ ಸಮೀಪವಿರುವ ನಂದಿ ಗ್ರಾಮ ಎಂಬ ಗ್ರಾಮದಲ್ಲಿದೆ. ಹಾಗೆಯೇ ಟಿಪ್ಪು ಸುಲ್ತಾನ್ ಬಳಸಿದ ಎರಡು ಅಂತಸ್ತಿನ ಸಣ್ಣ ಕಟ್ಟಡದ ಅವಶೇಷಗಳನ್ನು ನಂದಿ ಬೆಟ್ಟದ ಮೇಲೆ ಕಾಣಬಹುದಾಗಿದೆ. ಒಂದು ಕೊಳ ಮತ್ತು ಉದ್ಯಾನವು ಇದ್ದು, ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಕಾತರದಿಂದ ಕಾಯುತ್ತಿರುತ್ತಾರೆ.

ವಿಶ್ರಾಂತಿ ಪಡೆಯಲು ಮತ್ತು ಮಕ್ಕಳು ಆಟವಾಡಲು ಉದ್ಯಾನದ ವ್ಯವಸ್ಥೆಯೂ ಇಲ್ಲಿವೆ. ನಂದಿ ಬೆಟ್ಟದ ಮೇಲೆ ಸೂರ್ಯೋದಯವು ಆಕರ್ಷಕವಾಗಿರುತ್ತದೆ. ಪ್ರವಾಸಿಗರು ಬೆಳಗ್ಗೆ 5 ಗಂಟೆ ಸಮಯಕ್ಕೆ ಬಂದರೆ ಸೂರ್ಯೋದಯದ ದೃಶ್ಯವನ್ನು ಸವಿಯಬಹುದಾಗಿದೆ. ನಂದಿ ಬೆಟ್ಟದ ಮೇಲೆ ತಿಂಡಿ ತಿನಿಸುಗಳು ಲಭ್ಯವಿದೆ. ಮತ್ತು ಪ್ರವಾಸಿಗರ ರುಚಿಯ ಅಗತ್ಯಗಳನ್ನು ಪೂರೈಸುತ್ತಾರೆ. ಪ್ರವಾಸಿಗರು ಬೆಟ್ಟದ ಕೆಳಗಡೆ ವಾಹನಗಳ ನಿಲುಗಡೆ ಮಾಡಬೇಕಾಗುತ್ತದೆ. ಕೆಳಗಿನಿಂದ ಬೆಟ್ಟವನ್ನು ತಲುಪಲು ಶಟಲ್ ಬಸ್ಸುಗಳನ್ನು ಪಡೆಯಬಹುದು. ಇಲ್ಲದಿದ್ದರೆ ಮೆಟ್ಟಿಲುಗಳನ್ನು ಏರಿ ಮೇಲಕ್ಕೆ ಸಾಗಬಹುದಾಗಿದೆ.

ನಂದಿಬೆಟ್ಟಕ್ಕೆ ಮಾರ್ಗ ವಿವರ ಇಲ್ಲಿದೆ..

ಬೆಂಗಳೂರಿನಿಂದ ಖಾಸಗಿ ವಾಹನ ಅಥವಾ ಟ್ಯಾಕ್ಸಿಯಲ್ಲಿ ತಲುಪಬಹುದಾಗಿದೆ. ಹಾಗೆಯೇ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ನಂದಿ ಬೆಟ್ಟದಿಂದ ಕೇವಲ 34 ಕಿಲೋ ಮೀಟರ್‌ ದೂರದಲ್ಲಿದೆ. ನಂದಿ ಬೆಟ್ಟದಿಂದ 20 ಕಿ.ಮೀ. ದೂರಲ್ಲಿ ಸರ್.ಎಂ.ವಿಶ್ವವೇಶ್ವರಯ್ಯ ಅವರ ಜನ್ಮಸ್ಥಳ ಮುದ್ದೇನಹಳ್ಳಿ, 25 ಕಿ.ಮೀ. ವ್ಯಾಪ್ತಿಯಲ್ಲಿ ದೇವನಹಳ್ಳಿ ಕೋಟೆ, 30 ಕಿ.ಮೀ. ದೂರಲ್ಲಿ ಘಾಟಿ ಸುಬ್ರಮಣ್ಯ ದೇವಸ್ಥಾನ, ಮತ್ತು 15 ಕಿ.ಮೀ. ದೂರದಲ್ಲಿ ಭೋಗನಂದೀಶ್ವರ ದೇವಸ್ಥಾನಕ್ಕೂ ಭೇಟಿ ನೀಡಬಹುದುದಾಗಿದೆ.

Leave a Reply

Your email address will not be published. Required fields are marked *