ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ನವೀಕರಣ ಕಾಮಗಾರಿ ಕೈಗೊಳ್ಳುವುದರಿಂದ ಮಾರ್ಚ್ 24 ರಿಂದ ಏಪ್ರಿಲ್ 25 ರವರೆಗೆ ಒಂದು ತಿಂಗಳ ಕಾಲ ವಾರಾಂತ್ಯದ ದಿನಗಳಲ್ಲಿ ಅಂದರೆ ಶುಕ್ರವಾರ ಸಂಜೆ 6:30 ರಿಂದ ಸೋಮವಾರ ಬೆಳಿಗ್ಗೆ 8:00 ಗಂಟೆಯವರೆವಿಗಿನ ಅವಧಿಯನ್ನು ಹೊರತುಪಡಿಸಿ ಉಳಿದ ದಿನ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದ್ದಾರೆ.
ವಾರಾಂತ್ಯದ ದಿನಗಳಲ್ಲಿ ಶುಕ್ರವಾರ ಸಂಜೆ 6:30ರಿಂದ ಸೋಮವಾರ ಬೆಳಿಗ್ಗೆ 08 ಗಂಟೆ ವರೆಗೆ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಉಳಿದಂತೆ ವಾರದ ಐದೂ ದಿನಗಳು ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ ಎಂದರು.
ನಂದಿಬೆಟ್ಟದ ತಪ್ಪಲಿನಿಂದ ಬೆಟ್ಟದವರೆಗೂ 7.70 ಕಿಲೋಮೀಟರ್ ದೂರದ ರಸ್ತೆ ಕಾಮಗಾರಿ ನಡೆಯಲಿದೆ. ಅಂಕುಡೊಂಕಿನ ಕಿರಿದಾದ ರಸ್ತೆ ಕಾರಣ ರಸ್ತೆ ಕಾಮಗಾರಿಗೆ ಆಡಚಣೆ ಆಗಲಿದ್ದು, ಮುಂಜಾಗ್ರತಾ ಕ್ರಮವಾಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದರು.