ಧರಣಿ ಪೋರ್ಟಲ್‌ಗೆ ಸಂಬಂಧಿಸಿದ ತಮ್ಮ ಕುಟುಂಬದ ದೀರ್ಘಾವಧಿಯ ಭೂಮಿ ಸಮಸ್ಯೆಯ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ 26 ವರ್ಷದ ಯು.ಜೀವನ್ ಎಂಬ ವ್ಯಕ್ತಿಯೊಬ್ಬರು ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣ ಮಂಡಲದ ಕಚೇರಿಯಲ್ಲಿ 30 ನಿಮಿಷಗಳ ಕಾಲ ತಲೆ ಕೆಳಗೆ ಹಾಕಿ ಕಾಲು ಮೇಲೆ ಎತ್ತಿ(ಹೆಡ್‌ಸ್ಟ್ಯಾಂಡ್) ವಿಶಿಷ್ಚವಾಗಿ ಪ್ರತಿಭಟಿಸಿದರು.
ಐಐಐಟಿ ಹೈದರಾಬಾದ್‌ನ ಪದವೀಧರ ಮತ್ತು ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನಿಂದ ಸ್ನಾತಕೋತ್ತರ ಪದವೀಧರರಾಗಿರುವ ಜೀವನ್, ಕಂದಾಯ ಅಧಿಕಾರಿಗಳಿಂದ ತ್ವರಿತವಾಗಿ ಸಮಸ್ಯೆ ಬಗೆಹರಿಯದ ಕಾರಣ ಹಾಗೂ ವಿಳಂಬ, ನಿರ್ಲಕ್ಷ್ಯ ಧೋರಣೆ ಖಂಡಿಸಿ ಹೊಸ ವಿಧಾನದಿಂದ ಪ್ರತಿಭಟಿಸಿದರು.
ಜೀವನ್ ಅವರ ತಾಯಿ ಉಳಿಂತಲ ಜಯಸುಧಾ ಅವರು ಮೂರು ವರ್ಷಗಳಿಂದ ಮಂಗಲ್ಪಲ್ಲಿ ಗ್ರಾಮದ ತಮ್ಮ 1.32 ಎಕರೆ ಜಮೀನನ್ನು ನಿಷೇಧ ಪಟ್ಟಿಯಿಂದ ತೆಗೆದುಹಾಕುವಂತೆ ಒತ್ತಾಯಿಸುತ್ತಿದ್ದಾರೆ. 2020ರ ಸೆಪ್ಟಂಬರ್‌ನಲ್ಲಿ ಧರಣಿ ಪೋರ್ಟಲ್ ಕಾರ್ಯಾಚರಣೆಗೆ ಬಂದಾಗ ಸರ್ವೆ ಸಂಖ್ಯೆ 374 ರ ಅಡಿಯಲ್ಲಿ ಪಟ್ಟಿ ಮಾಡಲಾದ ಭೂಮಿಯನ್ನು “ಸೀಲಿಂಗ್ ಲ್ಯಾಂಡ್” ಎಂದು ಫ್ಲ್ಯಾಗ್ ಮಾಡಲಾಗಿತ್ತು. ಈ ನಡೆ ಯಾರೂ ಆ ಭೂಮಿಯನ್ನು ಬಳಸಂದತೆ ಸೂಚನೆ ನೀಡಲಾಗಿರುತ್ತದೆ.
15 ವರ್ಷಗಳ ಹಿಂದೆ ಮೆಟ್ಟು ಸೈದರೆಡ್ಡಿ ಎಂಬುವವರಿಂದ ಜಮೀನು ಖರೀದಿಸಿರುವುದಾಗಿ ಜಯಸುಧಾ ಹೇಳಿಕೊಂಡಿದ್ದಾರೆ.
ಹಲವು ಕುಂದುಕೊರತೆ ನಿವಾರಣಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸೇರಿದಂತೆ ಇಬ್ರಾಹಿಂಪಟ್ಟಣ ಮಂಡಲ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಹಲವು ಬಾರಿ ಭೇಟಿ ನೀಡಿದರೂ ಕುಟುಂಬದವರು ಪರಿಹಾರ ಕಂಡಿಲ್ಲ. ಅವರು ಸೇಲ್ ಡೀಡ್, ಆರ್‌ಡಿಒ ಕಚೇರಿಯಿಂದ “ಟ್ರೇಸ್ ಆಗದ” ದಾಖಲೆ ಮತ್ತು ವಕೀಲರ ಹುಡುಕಾಟ ವರದಿ ಸೇರಿದಂತೆ ಎಲ್ಲಾ ಅಗತ್ಯ ದಾಖಲೆಗಳನ್ನು ಒದಗಿಸಿದ್ದಾರೆ, ಆದರೆ, ಭೂಮಿ ನಿಷೇಧದ ಪಟ್ಟಿಯಲ್ಲಿ ಉಳಿದಿದೆ.
ಸೀಲಿಂಗ್ ಜಮೀನಿನ ಸ್ಥಿತಿಯನ್ನು ಸ್ಪಷ್ಟಪಡಿಸಲು ತಹಶೀಲ್ದಾರ್ ಆರಂಭದಲ್ಲಿ ಕಂದಾಯ ವಿಭಾಗೀಯ ಅಧಿಕಾರಿ (ಆರ್‌ಡಿಒ) ಅವರಿಂದ ದಾಖಲೆಗಳನ್ನು ಕೇಳಿದ್ದರು ಎಂದು ಜೀವನ್ ವಿವರಿಸಿದರು.
ಆದಾಗ್ಯೂ, ಇಷ್ಟೆಲ್ಲಾ ಪ್ರಯತ್ನಗಳು ನಡೆದರೂ ಸಮಸ್ಯೆ ಪರಿಹಾರಕ್ಕೆ ಇನ್ನೂ ಒಂದು ತಿಂಗಳು ಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. ಧರಣಿ ಪೋರ್ಟಲ್ ಸಮಸ್ಯೆಗಳನ್ನು 10 ದಿನಗಳಲ್ಲಿ ಪರಿಹರಿಸುವಂತೆ ರಾಜ್ಯ ಸರ್ಕಾರವು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ, ಆದರೆ ಇನ್ನೂ ಒಂದು ತಿಂಗಳು ಕಾಯುವಂತೆ ನಮ್ಮನ್ನು ಕೇಳಲಾಗುತ್ತಿದೆ ಎಂದು ಜೀವನ್ ಅವರ ಸಹೋದರ ಜಯಪ್ರಕಾಶ್ ಹೇಳಿದರು.
ರಂಗಾ ರೆಡ್ಡಿ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಧರಣಿ ಕುಂದುಕೊರತೆಗಳು ಬಗೆಹರಿಯದಿದ್ದು, ತೆಲಂಗಾಣದಲ್ಲಿ ಭೂ ದಾಖಲೆಗಳ ನಿರ್ವಹಣೆಯನ್ನು ಸುವ್ಯವಸ್ಥಿತಗೊಳಿಸಲು ಪರಿಚಯಿಸಲಾದ ಧರಣಿ ವ್ಯವಸ್ಥೆಯಡಿ ಭೂ ಸಮಸ್ಯೆಗಳನ್ನು ಪರಿಹರಿಸುವ ನಿಧಾನಗತಿಯ ಬಗ್ಗೆ ಜೀವನ್ ಅವರ ಪ್ರತಿಭಟನೆಯು ಗಮನ ಸೆಳೆದಿದೆ.