ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ- ಸಿಎಂ ಸಿದ್ದರಾಮಯ್ಯ

ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ನನ್ನ ಅಭಿಪ್ರಾಯವೇ ನಮ್ಮ ಸರ್ಕಾರದ ಅಭಿಪ್ರಾಯವನ್ನಾಗಿಸುವ ದಿಕ್ಕಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕುವೆಂಪು ಅವರ ಪ್ರಖರ ವೈಚಾರಿಕತೆ ಸಮಾಜದಲ್ಲಿ ಜಾತಿ ಅಸಮಾನತೆ ಇರುವವರೆಗೂ ಪ್ರಸ್ತುತವಾಗಿರುತ್ತದೆ.
ವೈಚಾರಿಕತೆ, ವೈಜ್ಞಾನಿಕತೆಯ ಬಗ್ಗೆ ಕುವೆಂಪು ಅವರಿಗೆ ಸ್ಪಷ್ಟ ದೃಷ್ಟಿಕೋನ ಇತ್ತು. ಜಾತಿ ತಾರತಮ್ಯ ಇಲ್ಲದ ಸಮಾಜ ಕುವೆಂಪು ಅವರ ಆಶಯವಾಗಿತ್ತು. ಆದರೆ, ಇಂದು ಶಿಕ್ಷಣ ಹೆಚ್ಚಾದಷ್ಟೂ ಮೌಡ್ಯ, ಕಂದಾಚಾರ ಹೆಚ್ಚಾಗಿ ವೈಜ್ಞಾನಿಕ ಪ್ರಜ್ಞೆ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.

ನಮ್ಮ ಸಂವಿಧಾನದಲ್ಲಿ ಕುವೆಂಪು, ಬಸವಣ್ಣ ಅವರ ಆಶಯಗಳೂ ಅಡಕವಾಗಿವೆ. ಸಂವಿಧಾನದ ಮೌಲ್ಯ ಮತ್ತು ಮಹತ್ವ ಅರಿಯುವ ಕೆಲಸ ಹೆಚ್ಚಾಗಬೇಕು. ಈ ಉದ್ದೇಶದಿಂದಲೇ ಸಂವಿಧಾನ ಓದು, ಸಂವಿಧಾನ ಪೀಠಿಕೆ ಅಭಿಯಾನವನ್ನು ನಾವು ನಡೆಸುತ್ತಿದ್ದೇವೆ ಎಂದರು.

ರಾಜಕಾರಣಿಯಾಗಿ ನನಗೆ ಕೆಲವು ಮಿತಿಗಳು ಇರುತ್ತವೆ. ಸಮಾಜದ ನಂಬಿಕೆಗಳ ಜೊತೆಗೂ ನಾವು ಕೆಲವೊಮ್ಮೆ ನಡೆಯಬೇಕಾಗುತ್ತದೆ. ನಾನು ದೇವಸ್ಥಾನಕ್ಕೆ ಹೋದಾಗ ಕುಂಕಮ ಇಡುತ್ತಾರೆ. ಕುಂಕುಮ ಇಟ್ಟಿದ್ದಕ್ಕೂ ಕತೆ ಕಟ್ಟುತ್ತಾರೆ. ನಾವು ಗ್ರಾಮೀಣ ಭಾಗಕ್ಕೆ ಹೋದಾಗ ದೇವಸ್ಥಾನಗಳಿಗೆ ಹೋಗದಿದ್ದರೆ ನಮ್ಮ ಬಗ್ಗೆ ಬೇರೆಯದೇ ರೀತಿಯ ಕತೆ ಕಟ್ಟುತ್ತಾರೆ ಎಂದು ಹೇಳಿದರು.

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದೇ ಹೋದರೆ ಕೇವಲ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ. ಈ ಕಾರಣಕ್ಕೇ ಮೌಢ್ಯ ನಿಷೇಧ ಕಾಯ್ದೆ ಪರಿಣಾಮಕಾರಿ ಆಗುವುದಿಲ್ಲ. ನಾವು ಏನೇ ಕಾನೂನು, ನಿಯಮ ಮಾಡಿದರೂ ಸಂವಿಧಾನದ ಚೌಕಟ್ಟಿಗೇ ಒಳಪಟ್ಟಿರಬೇಕು ಎಂದು ತಿಳಿಸಿದರು.

“ಗುಡಿ, ಚರ್ಚು, ಮಸೀದಿಗಳನ್ನು ಬಿಟ್ಟು ಹೊರ ಬನ್ನಿ, ಬಡತನದ ಬೇರುಗಳ ಬುಡ ಸಮೇತ ಕಿತ್ತು ಹಾಕಲು ಬನ್ನಿ” ಎಂದು ಕುವೆಂಪು ಅವರು ಕರೆ ನೀಡಿದ್ದರು. ಈ ಕರೆಯನ್ನು ಸಮಾಜ ಪಾಲಿಸಿದರೆ ಅಸಮಾನತೆಯ ಸಮಾಜ ಸಮಾನತೆಯ ಕಡೆ ಚಲಿಸುತ್ತದೆ. ಕುವೆಂಪು ಅವರ ಆಶಯ ಮತ್ತು ಮೌಲ್ಯಗಳು ಇಡೀ ವಿಶ್ವಕ್ಕೇ ಅನ್ವಯ ಆಗುವುದರಿಂದ ಜಗತ್ತಿನ ಇತರೆ ಭಾಷೆಗಳಿಗೂ ಈ ಕೃತಿ ಅನುವಾದವಾಗಲಿ ಎಂಬುದು ನನ್ನ ಇಂಗಿತ ಎಂದರು.

Leave a Reply

Your email address will not be published. Required fields are marked *

error: Content is protected !!