ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಜಿಲ್ಲೆಯಲ್ಲಿ ಸುವ್ಯವಸ್ಥಿತವಾಗಿ ನಡೆಯಲು ಅಗತ್ಯ ಕ್ರಮವಹಿಸಿ: ಡಾ.ನಾಗರಾಜ

ಮಾರ್ಚ್ 09 ರಿಂದ ಮಾರ್ಚ್ 29 ರವರೆಗೆ ನಡೆಯಲಿರುವ 2022-23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಜಿಲ್ಲೆಯಲ್ಲಿ ಸುವ್ಯವಸ್ಥಿತವಾಗಿ ನಡೆಯಲು ಅಗತ್ಯ ಕ್ರಮ ವಹಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಡಾ.ನಾಗರಾಜ ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಡೆದ 2022-23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ವ್ಯವ್ಯಸ್ಥಿತವಾಗಿ ನಡೆಸುವ ಕುರಿತ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2023ರ ಮಾರ್ಚ್ 09 ರಿಂದ ಮಾರ್ಚ್ 29 ರವರೆಗೆ, ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ 05, ಹೊಸಕೋಟೆ ತಾಲ್ಲೂಕಿನ 04, ದೊಡ್ಡಬಳ್ಳಾಪುರ ತಾಲ್ಲೂಕಿನ 03 ಹಾಗೂ ದೇವನಹಳ್ಳಿ ತಾಲ್ಲೂಕಿನ 03 ಪರೀಕ್ಷಾ ಕೇಂದ್ರಗಳು ಸೇರಿದಂತೆ ಒಟ್ಟಾರೆ 15 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ನಡೆಯಲಿದೆ.

ಪರೀಕ್ಷೆಗೆ ಹಾಜರಾಗುತ್ತಿರುವ ಒಟ್ಟಾರೆ ಜಿಲ್ಲೆಯ 10320 ವಿದ್ಯಾರ್ಥಿಗಳಲ್ಲಿ, 9013 ಹೊಸ ವಿದ್ಯಾರ್ಥಿಗಳು, 1045 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 262 ಖಾಸಗಿ ವಿದ್ಯಾರ್ಥಿಗಳಾಗಿದ್ದಾರೆ.

ಪರೀಕ್ಷೆಗೆ ಹಾಜರಾಗುತ್ತಿರುವ ಒಟ್ಟು 10,320 ವಿದ್ಯಾರ್ಥಿಗಳಲ್ಲಿ 4724 ಬಾಲಕರು, 5596 ಬಾಲಕಿಯರು ಇದ್ದಾರೆ. ಒಟ್ಟಾರೆ ವಿದ್ಯಾರ್ಥಿಗಳಲ್ಲಿ, ಕಲಾ ವಿಭಾಗದ 1590 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದ 5552 ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದ 3178 ವಿದ್ಯಾರ್ಥಿಗಳು ಇದ್ದಾರೆ ಎಂದು ಮಾಹಿತಿ ನೀಡಿದರು.

ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯೊಳಗೆ ಕಟ್ಟುನಿಟ್ಟಿನ ನಿಷೇಧಾಜ್ಞೆ ಹೊರಡಿಸಬೇಕು ಹಾಗೂ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕೆಂದು ಪೊಲೀಸ್ ಇಲಾಖೆಗೆ ಹಾಗೂ ಪರೀಕ್ಷಾ ಕೊಠಡಿಯೊಳಗೆ ಮೇಲ್ವಿಚಾರಕರು ಕಡ್ಡಾಯವಾಗಿ ಮೊಬೈಲ್ ಕೊಂಡೊಯ್ಯದಂತೆ ಕ್ರಮಕೈಗೊಳ್ಳಬೇಕೆಂದು ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗೆ ತಿಳಿಸಿದರಲ್ಲದೆ, ಸಿ.ಸಿ.ಟಿವಿ ಕಣ್ಗಾಗವಲಿನಲ್ಲಿ ಪರೀಕ್ಷೆ ನಡೆಯಲಿದೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಕಂಠಯ್ಯ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *