Categories: ಲೇಖನ

ದೌರ್ಬಲ್ಯ – ಶೋಷಣೆ – ಸ್ವಾಭಿಮಾನ……

ಈ ಸಮಾಜ ಯಾವಾಗಲೂ ಬಹುತೇಕ ದುರ್ಬಲರ ಮೇಲೆ ಸವಾರಿ ಮಾಡುತ್ತದೆ. ಅದರಲ್ಲೂ ಈ ಹಣ ಕೇಂದ್ರೀಕೃತ ಆಧುನಿಕ ಸಮಾಜದಲ್ಲಿ ದುರ್ಬಲರೇ ಈ ಸಮಾಜದ ಬಹುಮುಖ್ಯ ಟಾರ್ಗೆಟ್. ದುರ್ಬಲರನ್ನು ಶೋಷಿಸುತ್ತಲೇ ತಾನು ಪ್ರಬಲವಾಗುತ್ತಾ ಸಾಗುತ್ತದೆ. ಅದನ್ನೇ ಕಾರ್ಪೊರೇಟ್ ಸಂಸ್ಕೃತಿ ಎಂದು ಕರೆಯಲಾಗುತ್ತದೆ. ಹಿಂದೆ ಇದು ಬೇರೆ ರೂಪದಲ್ಲಿ ಇತ್ತು. ಇದು ಕೇವಲ ವ್ಯಾವಹಾರಿಕತೆಗೆ ಮಾತ್ರ ಸೀಮಿತವಾಗಿಲ್ಲ. ದುರ್ಬಲರ ಮೇಲಿನ ಸವಾರಿ ಎಲ್ಲ ಕ್ಷೇತ್ರಗಳಲ್ಲೂ ಹರಡಿಕೊಂಡಿದೆ. ಹಿಂದೆ ಇದ್ದ ಸಾಮರ್ಥ್ಯ, ಪ್ರತಿಭೆ, ಶ್ರಮ, ಪ್ರಾಮಾಣಿಕತೆ, ದಕ್ಷತೆ, ನಂಬಿಕೆ, ಮಾನವೀಯತೆ ಮತ್ತು ಮೌಲ್ಯಗಳ ಪ್ರಾಮುಖ್ಯತೆ ಬಹುತೇಕ ನಶಿಸಿ ಹೋಗಿದೆ.

ಇಲ್ಲಿ ದುರ್ಬಲತೆ ಎಂದರೆ ಕೇವಲ ಆರ್ಥಿಕ ದುರ್ಬಲತೆ ಮಾತ್ರವಲ್ಲ, ದೈಹಿಕ, ಮಾನಸಿಕ, ಪ್ರಾದೇಶಿಕ, ಶೈಕ್ಷಣಿಕ ಮುಂತಾದ ಎಲ್ಲಾ ರೀತಿಯ ದೌರ್ಬಲ್ಯಗಳ ಮೇಲೆ ಸಮಾಜ ಸವಾರಿ ಮಾಡುತ್ತಲೇ ಹೋಗುತ್ತದೆ.

ಹಾಗಾದರೆ ನಾವು ಈ ದೌರ್ಬಲ್ಯಗಳನ್ನು ಅನುಭವಿಸಬೇಕೇ ? ಪ್ರತಿಭಟಿಸ ಬೇಕೆ ? ನಮ್ಮ ದೌರ್ಬಲ್ಯ ಮೆಟ್ಟಿನಿಂತು ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕೆ ?
ಈ ರೀತಿ ಅನೇಕ ಪ್ರಶ್ನೆಗಳು ಏಳುತ್ತವೆ. ಇದಕ್ಕೆ ಎಲ್ಲರಿಗೂ ಅನ್ವಯವಾಗುವ ಒಂದೇ ರೀತಿಯ ಸಾರ್ವತ್ರಿಕ ಉತ್ತರಗಳು ಸಿಗುವುದಿಲ್ಲ. ಇದು ವ್ಯಕ್ತಿಗತ ನೆಲೆಯಲ್ಲಿ ನಿರ್ಧರಿಸಬೇಕಾದ ವಿಷಯ. ಆದರೂ ನಮ್ಮ ದೌರ್ಬಲ್ಯಗಳನ್ನು ಮೀರಿ ನಿಲ್ಲಲು ಕೆಲವೊಂದು ಅಂಶಗಳು ನಮಗೆ ಸಹಾಯವಾಗಬಹುದು.

ಇಲ್ಲಿ ದುರ್ಬಲತೆಯನ್ನು ಉಪಯೋಗಿಸಿಕೊಳ್ಳುವ ವ್ಯವಸ್ಥೆ ಪ್ರಜ್ಞಾಪೂರ್ವಕವಾಗಿರಬಹುದು ಅಥವಾ ಅರಿವಿಲ್ಲದೆ ಇರಬಹುದು ಅಥವಾ ಮಾನವ ಸಹಜ ಗುಣವೂ ಆಗಿರಬಹುದು ಅಥವಾ ವ್ಯಾವಹಾರಿಕವೂ ಆಗಿರಬಹುದು ಅಥವಾ ಬೇರೆ ರೀತಿಯ ಕಾರಣಗಳು ಇರಬಹುದು.

ಮೊದಲಿಗೆ ದೈಹಿಕ ನ್ಯೂನ್ಯತೆಗಳ ಬಗ್ಗೆ ನೋಡೋಣ. ಹಾಗೆಂದು ಈ ದೈಹಿಕ ನ್ಯೂನ್ಯತೆಗಳು ಕೇವಲ ವಿಶೇಷ ಚೇತನ ಅಂಶಗಳು ಮಾತ್ರವಲ್ಲ, ಸಾಮಾನ್ಯವಾಗಿ ಸಹಜವಾಗಿದ್ದೂ ಸಹ ಅನೇಕ ದೈಹಿಕ ನ್ಯೂನ್ಯತೆಗಳು ನಮ್ಮನ್ನು ಸದಾ ಕಾಡುತ್ತಿರುತ್ತದೆ. ಆ ದೈಹಿಕ ನ್ಯೂನ್ಯತೆಗಳನ್ನು ಕೆಲವೊಮ್ಮೆ ವಿವರಿಸಲು ಸಾಧ್ಯವಾಗುವುದಿಲ್ಲ. ವಿಶೇಷ ಚೇತನಕ್ಕೆ ಕಾರಣವಾದ ಅಂಶಗಳು ನೇರವಾಗಿ ಗೋಚರಿಸಬಹುದು. ಆದರೆ ಸಹಜವಾದ ಸಾಮಾನ್ಯ ವ್ಯಕ್ತಿಗಳಲ್ಲಿ ನೋಡಲು ಸಹಜವಾಗಿದ್ದರೂ ಅನೇಕ ರೀತಿಯ ದೈಹಿಕ ಕೊರತೆಗಳು ಕಾಡುತ್ತಿರುತ್ತವೆ. ಅಂತಹ ಸಂದರ್ಭದಲ್ಲಿ ಆ ದೈಹಿಕ ನೂನ್ಯತೆಗಳ ಮೇಲೆಯೇ ಸಮಾಜ ಸವಾರಿ ಮಾಡುವುದರಿಂದ ದೈಹಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ದೇಹವನ್ನು ಸದೃಢಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಮೊದಲು ಆದ್ಯತೆ ನೀಡಬೇಕು. ಹುಟ್ಟಿನಿಂದ ಅಥವಾ ಸರಿಪಡಿಸಲಾಗದ ವಿಶೇಷ ಚೇತನರಾಗಿದ್ದರೆ ಸ್ವಲ್ಪಮಟ್ಟಿಗೆ ಕಷ್ಟವಾಗಬಹುದು. ಆದರೆ ಸಹಜ ವ್ಯಕ್ತಿಗಳು ತಮ್ಮ ದೈಹಿಕ ನ್ಯೂನ್ಯತೆಯನ್ನು ಸರಿಪಡಿಸಿಕೊಳ್ಳಲು ಸಾಕಷ್ಟು ಅವಕಾಶಗಳು ಇದ್ದೇ ಇರುತ್ತದೆ.

ಇದರ ನಂತರ ಮಾನಸಿಕ ಸದೃಢತೆ ಬಹಳ ಮುಖ್ಯವಾದದ್ದು. ವ್ಯಕ್ತಿಗಳು ನೋಡಲು ಆಕಾರ, ರೂಪ ಹೇಗೇ ಇರಬಹುದು. ಆದರೆ ಅವರ ಒಳಗಿರುವ ಮಾನಸಿಕ ದೌರ್ಬಲ್ಯವನ್ನು ಗುರುತಿಸುವುದು ಕಷ್ಟ. ಅದನ್ನು ಅರಿವಿನ ಮೂಲಕ ಸ್ವತಃ ನಾವೇ ಅರ್ಥ ಮಾಡಿಕೊಳ್ಳಬೇಕು. ಆ ಮಟ್ಟಿಗಿನ ಸಾಮಾನ್ಯ ಜ್ಞಾನವನ್ನು ಅಳವಡಿಸಿಕೊಳ್ಳಲೇಬೇಕು. ಇಲ್ಲದಿದ್ದರೆ ಶೋಷಣೆಗೆ ನಿರಂತರವಾಗಿ ಒಳಗಾಗಬೇಕಾಗುತ್ತದೆ. ಮಾನಸಿಕ ಸದೃಢತೆಯಲ್ಲಿ ಓದು, ಪ್ರವಾಸ, ಅಧ್ಯಯನ, ಸಂಪರ್ಕಗಳು ಇದೆಲ್ಲವೂ ವ್ಯವಹಾರಿಕವಾದರೂ ಮುಖ್ಯವಾಗಿ ಸಾವು ಮತ್ತು ಸೋಲಿನ ಭಯವನ್ನು ಗೆಲ್ಲುವುದೇ ಬಹುದೊಡ್ಡ ಯಶಸ್ಸಾಗುತ್ತದೆ. ಸಾವು ಮತ್ತು ಸೋಲನ್ನು ಗೆಲ್ಲಲು ಬಡತನದಿಂದ ಪ್ರಾರಂಭವಾಗುವ ಜೀವನ ಮತ್ತೆ ಫುಟ್ಪಾತಿನಲ್ಲಿ ಮುಗಿದರೂ ಚಿಂತೆ ಇಲ್ಲ ಅಥವಾ ಬೀದಿ ಹೆಣವಾದರೂ ಚಿಂತೆ ಇಲ್ಲ, ನಾನು ಯಾವುದೇ ವಿಷಯದಲ್ಲಿ ಶೋಷಣೆಗೆ, ದೌರ್ಜನ್ಯಕ್ಕೆ ಒಳಗಾಗುವುದಿಲ್ಲ. ಆ ಸಂದರ್ಭದಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಎಂತದೇ ತ್ಯಾಗಕ್ಕೂ ಸಿದ್ಧ ಎನ್ನುವ ಮನೋಭಾವವೇ ಪ್ರಬಲರು ನಮ್ಮ ಮೇಲೆ ಸವಾರಿ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಂದರೆ ಇಲ್ಲಿ ಹೆಚ್ಚು ನಿರೀಕ್ಷೆಗಳು, ಕನಸುಗಳು ಇರಬಾರದು. ಇದ್ದರೂ ಅದು ದೌರ್ಜನ್ಯಕ್ಕೆ ಒಳಗಾಗುವ ವೀಕ್ನೆಸ್ ಹೊಂದಿರಬಾರದು.

ಮೂರನೆಯದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಾಗದಿದ್ದರೆ ಅದನ್ನು ಅನುಭವಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಎಲ್ಲವೂ ಇದ್ದಾಗ, ಎಲ್ಲರೂ ಇದ್ದಾಗ ಹೇಗೋ ಇದನ್ನು ಗೆಲ್ಲಬಹುದು. ಆದರೆ ಏನು ಇಲ್ಲದಿದ್ದಾಗ, ಯಾರು ಇಲ್ಲದಿದ್ದಾಗ ಏನೇ ಬಂದರೂ ಸಾವಿನ ಕೊನೆಯವರೆಗೂ ನಾನು ಧೈರ್ಯದಿಂದಲೇ, ಸ್ವಾಭಿಮಾನದಿಂದಲೇ ಎದುರಿಸುತ್ತೇನೆ. ಅಂತಿಮವಾಗಿ ಸಾವೇ ಬರುವುದಾದರೂ ಬರಲಿ. ಅದೊಂದು ಸಹಜಕ್ರಿಯೆ. ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು. ಆಯಸ್ಸಿಗಿಂತ ಸ್ವಲ್ಪ ಬೇಗ ಸಾಯಬಹುದಷ್ಟೇ. ಆದರೆ ನಾನು ಮಾತ್ರ ದೌರ್ಜನ್ಯ, ಶೋಷಣೆಗೆ ಒಳಗಾಗುವುದಿಲ್ಲ ಎನ್ನುವ ದೃಢಸಂಕಲ್ಪ ನಮ್ಮ ಸಾಮರ್ಥ್ಯ ವೃದ್ಧಿಗೊಳ್ಳಲು ಕಾರಣವಾಗುತ್ತದೆ.

ಗುಂಪಿನಲ್ಲಿ ಕೆಟ್ಟ ವಾಸನೆಯವರು ಯಾರೆಂದರೆ ಹಳೆಯ ಬಟ್ಟೆಯವರು ಎಂದೇ ಅವರ ಕಡೆ ಬೊಟ್ಟು ಮಾಡಿ ತೋರಿಸಲಾಗುತ್ತದೆ. ಅಂದರೆ ಸೂಟು ಬೂಟಿಗೆ ಇರುವ ಗೌರವ, ಕಾರುಗಳಿಗೆ ಇರುವ ಗೌರವ ಸಾಮಾನ್ಯ ಜನರಿಗೆ ಸಿಗುವುದಿಲ್ಲ. ಆದರೆ ಕೆಲವು ವ್ಯಕ್ತಿಗಳು ಪ್ರಾಮುಖ್ಯತೆ ಪಡೆಯುತ್ತಿರುವುದೇ ಇದರ ಆಧಾರದ ಮೇಲೆ. ಆದರೆ ಆ ಹಳೆಯ ಬಟ್ಟೆಯವರು ಮೇಲೆ ಹೇಳಿದ ದೃಢತೆಯಿಂದ ತಮ್ಮ ಸಾಮರ್ಥ್ಯ ವೃದ್ಧಿಸಿಕೊಂಡಲ್ಲಿ, ಆ ಕ್ಷಣಕ್ಕೆ ಪ್ರಬಲರನ್ನು ನಿರ್ಲಕ್ಷಿಸಿದರೂ ಮುಂದೆ ಅವರ ಮೇಲೆ ಸವಾರಿ ಮಾಡುವ ಅವಕಾಶ ಕಡಿಮೆಯಾಗುತ್ತದೆ.

ಇದು ವ್ಯಕ್ತಿಗತ ನೆಲೆಯಲ್ಲಿ ನಾವು ಮಾಡಿಕೊಳ್ಳಬೇಕಾದ ಪೂರ್ವ ಸಿದ್ಧತೆಗಳು. ಇದು ಸಮೂಹ ಪ್ರಜ್ಞೆಯಾಗಿ ಬೆಳೆದರೆ ಖಂಡಿತವಾಗಿ ಪ್ರಬಲರು ಇತರರನ್ನು ಶೋಷಿಸಲು ಸಾಧ್ಯವಿಲ್ಲ. ಆದರೆ ಆಧುನಿಕ ಕಾಲದ ಕಾರ್ಪೊರೇಟ್ ಸಂಸ್ಕೃತಿ, ರಾಜಕೀಯ ಮತ್ತು ಅಧಿಕಾರಿ ಶಾಹಿ ಈ ಸ್ವಾಭಿಮಾನ, ಈ ಜಾಗೃತ ಮನಸ್ಥಿತಿ ಅರ್ಥವಾಗಲು ಸಾಧ್ಯವೇ ಇಲ್ಲದಂತ ಪರಿಸ್ಥಿತಿ ನಿರ್ಮಾಣ ಮಾಡಿದೆ. ಕಾರ್ಪೊರೇಷಟ್ ಸಂಸ್ಕೃತಿ ಬೆಳೆದಂತೆಲ್ಲಾ ಗುಲಾಮಿ ಸಂಸ್ಕೃತಿಯೂ ಬೆಳೆಯುತ್ತಿದೆ. ಎಲ್ಲೋ ಕೆಲವರು ಇದನ್ನು ಅರಿತಿದ್ದರೂ, ಅಂತಹವರಿಂದಲೂ ವ್ಯವಸ್ಥೆಯಲ್ಲಿ ಏನು ಮಾಡಲು ಸಾಧ್ಯವಾಗುತ್ತಿಲ್ಲ.

ಇಲ್ಲಿ ಮತ್ತೊಂದು ಸವಾಲು ಇದೆ. ನಾವು ದುರ್ಬಲತೆಯನ್ನು ಮೆಟ್ಟಿ ನಿಲ್ಲುವಾಗ ಹತ್ತಿರದವರ, ಗೆಳೆಯರ, ಸಮಾಜದ ಸಹಕಾರ ಮತ್ತು ಸಹಾಯವನ್ನು ನಿರೀಕ್ಷಿಸುತ್ತೇವೆ. ಅದು ಮತ್ತೊಂದು ದೊಡ್ಡ ದೌರ್ಬಲ್ಯ. ಈ ಸಮಾಜದಲ್ಲಿ ಹತ್ತಿರದವರು, ಗೆಳೆಯರು ಮತ್ತು ಇಡೀ ಸಮಾಜವೇ ದುರ್ಬಲ ಮೇಲೆ ಸವಾರಿ ಮಾಡುವ ಮನಸ್ಥಿತಿ ಇರುವುದರಿಂದ ಹತ್ತಿರದವರು, ಗೆಳೆಯರು ಕೂಡ ಸಮಾಜದ ಭಾಗವೇ ಆಗಿರುವುದರಿಂದ, ಆ ಭಾವನೆಯನ್ನು ಇಟ್ಟುಕೊಳ್ಳದೆ ನಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು. ಆಗ ಮಾತ್ರ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗುತ್ತದೆ. ಅದಕ್ಕೆ ಅಪಾರವಾದ ತಾಳ್ಮೆ ಬೇಕಾಗುತ್ತದೆ. ಸಾಧನೆ ಮಾಡಬೇಕಾಗಿರುತ್ತದೆ. ಎಲ್ಲರನ್ನು, ಎಲ್ಲವನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬೇಕಾಗುತ್ತದೆ.

ಆದ್ದರಿಂದ……

ಪ್ರವೇಶಿಸಲು ಬಿಡಿ ಎಲ್ಲಾ ವಿಷಯಗಳು ನಿಮ್ಮ ಮನಸ್ಸಿನಾಳಕ್ಕೆ,

ಒಳ್ಳೆಯದೋ, ಕೆಟ್ಟದ್ದೋ, ಇಷ್ಟದ್ದೋ, ಕಷ್ಟದ್ದೋ ಎಲ್ಲವೂ,

ಒಡಲಾಳದಲ್ಲಿ ನಡೆಯಲಿ ಚಿಂತನ ಮಂಥನ,

ಹೇಗಿದ್ದರೂ ನಮ್ಮ ಮೇಲೆ ನಮಗೆ ನಿಯಂತ್ರಣ ಇದ್ದೇ ಇದೆ,

ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವೂ ಇದೆ,

ಪರಿಸ್ಥಿತಿಯ ಆಳ ಅಗಲಗಳನ್ನು ಅವಲೋಕಿಸಿ,

ಮನದಾಳದ ಭಾವಕ್ಕೆ ಮಾತುಗಳ, ಅಕ್ಷರಗಳ ರೂಪ ನೀಡಿ,

ಕಲ್ಪನೆ, ಆದರ್ಶ, ವಾಸ್ತವಗಳ ಸಮ್ಮಿಲನಗೊಳಿಸಿ,

ಆಗ ನಮ್ಮ ಅರಿವಿನ ಮಿತಿಯಲ್ಲಿಯೇ ಮೂಡುತ್ತದೆ ಸಮಷ್ಟಿ ಪ್ರಜ್ಞೆ,

ಅದೇ ಬಹುಶಃ ಪ್ರಬುದ್ಧತೆಯೆಡಗಿನ ಪಯಣ,

ಎಚ್ಚರಿಕೆ,
ಎಲ್ಲಿಯೂ ಸಭ್ಯತೆಯ ಗೆರೆಯನ್ನು ದಾಟದಿರಿ,

ಕ್ರಿಯೆ, ಪ್ರಕ್ರಿಯೆಗಳು ಅದರೊಳಗೆ ಇರಲಿ,

ಆತ್ಮ ವಂಚನೆ, ಆತ್ಮಸಾಕ್ಷಿ, ಆತ್ಮಾವಲೋಕನದ ಅರಿವು ಸದಾ ಇರಲಿ,

ಆಗ,
ಮೂಡುವ ಭಾವವೇ ಶಾಂತಿ, ನೆಮ್ಮದಿ, ಆತ್ಮವಿಶ್ವಾಸ,

ಅದೇ ಬಹುತೇಕರ ಆಶಯದ ಪ್ರಬುದ್ಧ ಮನಸ್ಸು,

ಆ ಮನಸ್ಸುಗಳೇ ಪ್ರಬುದ್ಧ ಸಮಾಜದ ಆಸ್ತಿಗಳು,

ಆ ಆಸ್ತಿಗಳೇ ಭವ್ಯ ಭಾರತದ ಪ್ರಗತಿಯ ಮೆಟ್ಟಿಲುಗಳು,

ಆ ಮೆಟ್ಡಿಲುಗಳೇ ವಿಶ್ವ ಮಾನವ ಪ್ರಜ್ಞೆಯ ಗೋಪುರಗಳು,

ಆ ನಿಟ್ಟಿನಲ್ಲಿ ನಾವೆಲ್ಲಾ ಪ್ರಯತ್ನಿಸೋಣ,

ಶೋಷಣೆಗೆ ಒಳಗಾಗುವ ದೌರ್ಬಲ್ಯಗಳನ್ನು ಮೀರಿ ನಿಂತು ಸ್ವಾಭಿಮಾನಿಗಳಾಗೋಣ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಶಾಸಕ ಧೀರಜ್ ವಿರುದ್ಧ ವೈಯಕ್ತಿಕ ಟೀಕೆ ಸಲ್ಲದು: ಮಾಜಿ ಶಾಸಕರು ಹಾಗೂ ಬೆಂಬಲಿಗರ ಹೇಳಿಕೆಗಳಿಗೆ ಬಿಜೆಪಿ ಜಿಲ್ಲಾ ವಕ್ತಾರೆ ಪುಷ್ಪಾಶಿವಶಂಕರ್ ಆಕ್ಷೇಪ

ದೊಡ್ಡಬಳ್ಳಾಪುರ: ಶಾಸಕ ಧೀರಜ್ ಮುನಿರಾಜ್ ವಿರುದ್ಧ ಮಾಜಿ ಶಾಸಕರು ಹಾಗೂ ಅವರ ಬೆಂಬಲಿಗರು ವೈಯಕ್ತಿಕ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು…

3 hours ago

ಅರ್ಧ ದಾರಿಯಲ್ಲೇ ಕೆಟ್ಟು ನಿಂತ ಸರ್ಕಾರಿ ಬಸ್: ದೊಡ್ಡಬಳ್ಳಾಪುರ–ಹೊಸಹಳ್ಳಿ–ಕೊಟ್ಟಿಗೆಮಾಚೇನಹಳ್ಳಿ ಮಾರ್ಗದಲ್ಲಿ ಸಮಸ್ಯೆ ಮುಂದುವರಿಕೆ | ಸುಸ್ಥಿತಿಯಲ್ಲಿರುವ ಬಸ್‌ಗಳ ಸಂಚಾರಕ್ಕೆ ಆಗ್ರಹ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ–ಹೊಸಹಳ್ಳಿ–ಕೊಟ್ಟಿಗೆಮಾಚೇನಹಳ್ಳಿ ಮಾರ್ಗದಲ್ಲಿ ಸಂಚರಿಸುವ ಸರ್ಕಾರಿ ಬಸ್‌ಗಳು ಪದೇಪದೇ ಮಾರ್ಗಮಧ್ಯದಲ್ಲೇ ಕೆಟ್ಟು ನಿಲ್ಲುವ ಸಮಸ್ಯೆ ಮುಂದುವರಿದಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಇಂದು…

6 hours ago

ಪಿಎಂ ಕಿಸಾನ್ ಕಂತಿಗೆ ಇ-ಕೆವೈಸಿ ಅಡ್ಡಿ: ಬೆಂಗಳೂರು ಗ್ರಾಮಾಂತರದಲ್ಲಿ 69,020 ರೈತರ ಇ-ಕೆವೈಸಿ ಬಾಕಿ: ಅಕ್ಟೋಬರ್ ಕಂತು ಪಡೆಯಲು ತಕ್ಷಣ ಪೂರ್ಣಗೊಳಿಸಲು ಸೂಚನೆ

ಬೆಂಗಳೂರು ಗ್ರಾಮಾಂತರ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯಡಿ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿರುವ 23ನೇ ಕಂತಿನ ಹಣ ಪಡೆಯಲು…

8 hours ago

ಅಂತರರಾಜ್ಯ ಗಾಂಜಾ ಮಾರಾಟ ಜಾಲ ಪತ್ತೆ: ಮೂವರ ಬಂಧನ: 7 ಲಕ್ಷ ರೂ. ಮೌಲ್ಯದ ಗಾಂಜಾ, ಬೈಕ್ ವಶ

ದೊಡ್ಡಬಳ್ಳಾಪುರ: ಖಾಸಗಿ ಕಾಲೇಜಿನ ಸಮೀಪದ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದರೆಂಬ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ…

22 hours ago

ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಬೇಟೆ: 28 ಕೋಟಿ ಗಾಂಜಾ, 1.75 ಕೋಟಿ ಚಿನ್ನ ಜಪ್ತಿ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಸರಣಿ ಕಾರ್ಯಾಚರಣೆಯಲ್ಲಿ 28 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ…

22 hours ago

ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ನಡತೆ ಕಲಿಸಬೇಕು ಎಂಬುದು ಆಧುನಿಕ ಕಾಲದ ಬಹುದೊಡ್ಡ ಆಶಯ….

ಪರಿವರ್ತನೆಯ ಹಾದಿಯಲ್ಲಿ........ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ನಡತೆ ಕಲಿಸಬೇಕು ಎಂಬುದು ಆಧುನಿಕ ಕಾಲದ ಬಹುದೊಡ್ಡ ಆಶಯ. ಮಾಧ್ಯಮಗಳಲ್ಲೂ, ಅನೇಕ…

1 day ago