ದೊಡ್ಡಬೆಳವಂಗಲ ಹೋಬಳಿಯ ಗ್ರಾಮಗಳಲ್ಲಿ ಕರ್ನಾಟಕ ರಾಜ್ಯ ಗೃಹ ಮಂಡಳಿ ಭೂಸ್ವಾಧೀನ ವಿಚಾರ: ಭೂಸ್ವಾಧೀನಕ್ಕೆ ವಿರೋಧಿಸಿ ಅ.28ಕ್ಕೆ ತಾಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ

 

ದೊಡ್ಡಬೆಳವಂಗಲ ಹೋಬಳಿಯ ಗ್ರಾಮಗಳಲ್ಲಿ ಕರ್ನಾಟಕ ರಾಜ್ಯ ಗೃಹ ಮಂಡಳಿಯು ಭೂಸ್ವಾಧೀನ ಮಾಡುವ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕು. ಇಲ್ಲಿನ ರೈತರು ಪ್ರಾಣ ಕೊಟ್ಟೇವು ಭೂಮಿ ನೀಡೆವು ಎನ್ನುವ ಘೋಷದೊಂದಿಗೆ ಭೂಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಅ.28 ರಂದು ತಾಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಗೃಹ ಮಂಡಳಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಉಗ್ರಪ್ಪ , ಕಾರ್ಯಾಧ್ಯಕ್ಷ ಸಿ.ಎಚ್‌.ರಾಮಕೃಷ್ಣಯ್ಯ ತಿಳಿಸಿದ್ದಾರೆ.

ಈ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ನಡೆದ  ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೊಡ್ಡಬೆಳವಂಗಳ ಹೋಬಳಿಯ ಕಸಾಘಟ್ಟ ದೊಡ್ಡಹೆಜ್ಜಾಜಿ, ವೆಂಕಟೇಶಪುರ, ಕಾರೇಪುರ, ಐಯ್ಯನಹಳ್ಳಿ ಗ್ರಾಮಗಳ 2,760 ಎಕರೆ ಫಲವತ್ತಾದ ಕೃಷಿ ಭೂಸ್ವಾಧೀನಕ್ಕೆ ಕರ್ನಾಟಕ ರಾಜ್ಯ ಗೃಹ ಮಂಡಳಿ ಮುಂದಾಗಿದೆ. ತಾಲ್ಲೂಕಿನಲ್ಲೇ ಅತ್ಯಂತ ಹೆಚ್ಚು ಕೃಷಿ ಚಟುವಟಿಕೆಗಳು ನಡೆಯುತ್ತಿರುವ ಫಲವತ್ತಾದ ಜಮೀನುಗಳು ಇರುವ ಸ್ಥಳದಲ್ಲಿ ಗೃಹ ಮಂಡಳಿ ಭೂಸ್ವಾಧಿನಕ್ಕೆ ಮುಂದಾಗಿರುವುದು ಅತ್ಯಂತ ಅವೈಜ್ಞಾನಿಕ ಕ್ರಮವಾಗಿದೆ. ಈಗಾಗಲೇ ದೊಡ್ಡಬೆಳವಂಗಲ ಹೋಬಳಿಯಲ್ಲಿ ಕ್ವಿನ್ ಸಿಟಿಗೆ 5100 ಎಕರೆ, ಹೈಟೆಕ್ ಲಾಜಿಸ್ಟಿಕ್ ಪಾರ್ಕ್, ಬಿಬಿಎಂಪಿ ಕಸವಿಲೇವಾರಿ ಘಟಕ ಸೇರಿದಂತೆ ಹತ್ತಾರು ಯೋಜನೆಗಳ ನೆಪದಲ್ಲಿ ಸಾವಿರಾರು ಎಕರೆ ರೈತರ ಫಲವತ್ತಾದ ಕೃಷಿ ಜಮೀನನ್ನು ಸ್ವಾಧಿನಪಡಿಸಿಕೊಳ್ಳಲಾಗುತ್ತಿದೆ. ಕೃಷಿ ಭೂಮಿಯನ್ನು ಕೈಗಾರಿಕೆಗಳಿಗೆ ನೀಡಿದರೆ ರೈತರು ಬೀದಿ ಪಾಲಾಗುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದರು.

ಸರ್ಕಾರ ಕೈಗಾರಿಕೆಗಳ ಸ್ಥಾಪನೆ ನೆಪದಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದೆ. ಕೃಷಿ ಜಮೀನು ಸ್ವಾಧೀನಕ್ಕೂ ಒಂದು ಮಿತಿ ಇರಬೇಕು. ಈ ಪ್ರದೇಶ ಎಲ್ಲದಕ್ಕೂ ಬೆಂಗಳೂರಿಗೆ ಸಮೀಪವಾಗಿ ಕೇಂದ್ರವಾಗಿರುವುದರಿಂದ ಎಲ್ಲಾ ಯೋಜನೆಗಳನ್ನು ದೊಡ್ಡಬೆಳವಂಗಲ ಹೋಬಳಿಯಲ್ಲೇ ಜಾರಿಗೊಳಿಸಲಾಗುತ್ತಿದೆ. ಬದಲಿಗೆ ರಾಜ್ಯ ಇತರೆ ಜಿಲ್ಲೆಗಳಲ್ಲೂ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಬೇಕು ಎಂದರು.

ಪ್ರಾಂತ ರೈತ ಸಂಘದ ರಾಜ್ಯ ಸಂಚಾಲಕರಾದ ಪ್ರಭಾ ಬೆಳವಂಗಲ ಮಾತನಾಡಿ, ಗೃಹ ಮಂಡಳಿ ವಸತಿ ನಿರ್ಮಾಣ ನೆಪದಲ್ಲಿ ಸಾವಿರಾರು ಎಕರೆ ಕೃಷಿ ಜಮೀನು ಕಬಳಿಸಲು ಮುಂದಾಗಿರುವುದು ಖಂಡನೀಯ. ದೊಡ್ಡಬೆಳವಂಗಲ ಹೋಬಳಿಯ ರೈತರನ್ನು ಸಂಪೂರ್ಣವಾಗಿ ಒಕ್ಕಲೆಬ್ಬಿಸುವ ವ್ಯವಸ್ಥಿತಿ ಸಂಚು ನಡೆಯುತ್ತಿದೆ. ರೈತರ ಜಮೀನು ಪಡೆಯುವ ಸರ್ಕಾರಗಳು ರೈತರ ಹಿತದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಕೃಷಿ ಭೂಮಿ ಹೋದರೆ ಆಹಾರಕ್ಕೆ ಹಾಹಾಕಾರವಾಗುತ್ತದೆ. ಇಲ್ಲಿನ ಮಕ್ಕಳ ಶಿಕ್ಷಣ ಹಾಗೂ ಅಭಿವೃದ್ದಿ ಹೇಗೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.ಈಗಾಗಲೇ ಭೂಸ್ವಾಧೀನ ಮಾಡಿ ಸ್ಥಾಪಿಸಿರುವ ಕೈಗಾರಿಕೆಗಳಲ್ಲಿ ಎಷ್ಟು ಆಭಿವೃದ್ದಿಯಾಗಿದೆ. ಇಲ್ಲಿನ ಜನರಿಗೆ ಸಿಕ್ಕ ಪ್ರತಿಫಲವೆಷ್ಟು ಎನ್ನುವುದನ್ನು ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದರು.

ಅ.28 ರಂದು ಬೃಹತ್ ಪ್ರತಿಭಟನೆ :

ಕರ್ನಾಟಕ ರಾಜ್ಯ ಗೃಹ ಮಂಡಳಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಭೂಸ್ವಾಧೀನ ಮಾಡುವ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿ ಅ.28 ರಂದು ತಾಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ನಗರದ ನೆಲದಾಂಜಸ್ವಾಮಿ ದೇವಾಲಯದ ಬಳಿಯಿಂದ ಮೆರವಣಿಗೆಯಲ್ಲಿ ತೆರಳಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮುಖಂಡರು ತಿಳಿಸಿದರು.

ಈ ವೇಳೆ ಕರ್ನಾಟಕ ರಾಜ್ಯ ಗೃಹ ಮಂಡಳಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಗೌ. ಅಧ್ಯಕ್ಷ ಸಿ.ರಾಮಕೃಷ್ಣಯ್ಯ, ಕಾರ್ಯಾಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಡಿ.ಎ.ಸತೀಶ್‌, ಖಜಾಂಚಿ ಸಿ.ರಾಮೇಗೌಡ, ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ, ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ರುದ್ರಾರಾಧ್ಯ, ಸಿಐಟಿಯು ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ಕನ್ನಡ ಪಕ್ಷದ ಮುಖಂಡ ಸಂಜೀವ್‌ ನಾಯಕ್‌ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!