ಹಳೇ ವಿದ್ಯಾರ್ಥಿಗಳು ಒಟ್ಟಿಗೆ ಸೇರಿ ಅರ್ಥಪೂರ್ಣವಾಗಿ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ನಡೆಸಲಾಯಿತು.
2006 -2007ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು 18 ವರ್ಷಗಳ ಬಳಿಕ ತಾವು ಓದಿದ ಶಾಲೆಯಲ್ಲಿ ಸೇರಿ ತಮ್ಮ ಶಿಕ್ಷಕರಿಗೆ ಗೌರವವನ್ನ ಸಲ್ಲಿಸಿದ್ದಾರೆ.
ಕಾರ್ಯಕ್ರಮದಲ್ಲಿ ಗುರುಗಳಿಗೆ ಸಕಲ ಗೌರವಗಳನ್ನು ಸಲ್ಲಿಸುತ್ತ ಗುರುಗಳ ಪಾದಪೂಜೆ ಮಾಡಿ, ಶಿಕ್ಷಕರನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ವೇದಿಕೆಗೆ ಕರೆತರಲಾಯಿತು.
ಇನ್ನು ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹಳೇ ವಿದ್ಯಾರ್ಥಿಗಳು ಒಂದೇ ಕಡೆ ಸೇರಿರುವದರಿಂದ ಅತೀವ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ…
ಬಾಲ್ಯದಲ್ಲಿ ತುಂಟತನ, ಅಜ್ಞಾನ, ಅಶಿಸ್ತಿನಿಂದ ಇರುವ ಮಕ್ಕಳನ್ನು ಒಂದು ಹತೋಟಿಗೆ ತಂದು ವಿದ್ಯೆ ಕಲಿಸಿದ ಎಲ್ಲ ಗುರುಗಳಿಗೂ ನಮನಗಳನ್ನು ಸಲ್ಲಿಸಿದರು.
ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ತೆರಳಿದ್ದಾರೆ. ಆದರೆ, ಎಲ್ಲಾ ವಿದ್ಯಾರ್ಥಿಗಳು ಸುಸಂಸ್ಕೃತ ವಿದ್ಯಾರ್ಥಿಗಳಾಗಿರುವುದು ಶಿಕ್ಷಕರಾದ ನಮಗೆ ಹೆಮ್ಮೆ ವಿಷಯವಾಗಿದೆ. ಎಲ್ಲಿಯಾದರೂ ಸಿಕ್ಕಾಗ ನಮ್ಮ ಶಿಷ್ಯರ ಪಡೆ ಅಂತ ಹೆಮ್ಮೆಯಿಂದ ಹೇಳಬಹುದಾಗಿದೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಇದೇ ಅವರು ಓದಿದ ಶಾಲೆಗೆ ನೀಡುವ ಗೌರವವಾಗಿದೆ ಎಂದು ಶಿಕ್ಷಕರು ಹೇಳಿದರು.
ತಾಯಿ ತಂದೆ ನಂತರ ಗುರುವೇ ಮುಖ್ಯ ಎಂಬ ಶ್ರದ್ಧಾಪೂರ್ವಕ ನಂಬಿಕೆ ವಿದ್ಯಾರ್ಥಿಗಳಲ್ಲಿ ಇದೆ. ಜೀವನದಲ್ಲಿ ಎಷ್ಟೇ ಮುಂದುವರಿದರೂ ಅದರ ಹಿಂದೆ ಗುರುವಿನ ಪಾತ್ರ ಇದ್ದೇ ಇರುತ್ತದೆ. ಗುರುಗಳಿಂದ ಬೆತ್ತದ ಏಟು ಬಿದ್ದಿದ್ದರಿಂದ ಇವತ್ತು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ರೂಪಗೊಂಡಿದ್ದೇವೆ. ಪಾಠ ಕಲಿಸಿ ಜೀವನದ ಮೌಲ್ಯ ಕಲಿಸಿಕೊಟ್ಟ ಗುರುಗಳನ್ನು ಸ್ಮರಿಸಿ ಗುರುವಂದನೆ ಸಲ್ಲಿಸುವುದು ನಮ್ಮ ಎಲ್ಲರ ಜವಾಬ್ದಾರಿಯಾಗಿದೆ ಎಂದು ಹಳೆಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
2006 -2007ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಇತರರು ಉಪಸ್ಥಿತರಿದ್ದರು