
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಸಾಧಾರಣ ಸೇವೆ ಹಾಗೂ ದಕ್ಷತೆ ತೋರಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ 2025ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ಪ್ರಕಟ ಮಾಡಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆಯ ಎಎಸ್‌ಐ ಕೃಷ್ಣ ಸಿ.ಎನ್ ಅವರು 2025ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ತಂದೆ ನಂಜಪ್ಪ ಗೌಡ, ತಾಯಿ ಲಕ್ಷ್ಮಮ್ಮ ಅವರ ಮಗನಾದ ಇವರು ಕಳೆದ 29 ವರ್ಷದಿಂದ ಪೊಲೀಸ್ ಇಲಾಖೆಯ ವಿವಿಧ ಠಾಣೆಗಳಲ್ಲಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ದರೋಡೆ, ಕೊಲೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ತನಿಖಾಧಿಕಾರಿ ಸೇವೆ ಸಲ್ಲಿಸಿದ್ದಾರೆ. ಇಲಾಖೆಯಲ್ಲಿ ‘ತನಿಖಾಧಿಕಾರಿ’ ಎಂದೇ ಖ್ಯಾತಿ ಪಡೆದಿದ್ದಾರೆ.
ದೊಡ್ಡಬಳ್ಳಾಪುರದ ದೊಡ್ಡಬೆಳವಂಗಲ ಠಾಣೆಯಲ್ಲಿ ಕಳೆದ 3 ವರ್ಷಗಳಿಂದ ಎಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದು, ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ತಂಡದಲ್ಲಿ ತನಿಖಾ ಅಧಿಕಾರಿಯಾಗಿಯೂ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ.
ದಕ್ಷ ಅಧಿಕಾರಿಯಾಗಿರುವ ಇವರು ಸಾಕಷ್ಟು ಪ್ರಕರಣಗಳ ತನಿಖೆಯಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ. ತನಿಖೆ ಪ್ರಕರಣಗಳಲ್ಲಿನ ಸೇವೆಯನ್ನು ಗುರುತಿಸಿ ಇದೀಗ ಸಿಎಂ ಪ್ರಶಸ್ತಿಯನ್ನು ನೀಡಲಾಗಿದೆ.