ಪೊಲೀಸ್ ಠಾಣೆ, ಪೊಲೀಸ್ ಎಂದರೆ ಮಕ್ಕಳು ಸಾಮಾನ್ಯವಾಗಿ ಭಯಪಡುವುದು ಸರ್ವೇಸಾಮಾನ್ಯ. ಈ ಭಯವನ್ನು ಹೋಗಲಾಡಿಸಿ, ಮಕ್ಕಳು ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ಮತ್ತು ರಕ್ಷಣೆ ಬೇಕೆಂದೆನಿಸಿದಾಗ ಪೊಲೀಸ್ ಸಹಾಯ ಪಡೆಯಲು ಮಕ್ಕಳ ಸ್ನೇಹಿ ವಾತಾವರಣ ಸೃಷ್ಟಿ ಮಾಡಲು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ‘ತೆರೆದ ಮನೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾನೂನು ಮತ್ತು ಸುವ್ಯವಸ್ಥೆ, ಲೈಂಗಿಕ ದೌರ್ಜನ್ಯ ತಡೆಯುವುದು, ಬಾಲ್ಯ ವಿವಾಹ ನಿರ್ಮೂಲನೆ, ಕಿರುಕುಳ, ಬಾಲಕಾರ್ಮಿಕತೆಯ ನಿರ್ಮೂಲನೆ, ಅತ್ಯಾಚಾರ, ಕಿಡ್ನ್ಯಾಪ್, ಸರಗಳತನ, ಜೇಬುಗಳ್ಳತನದ ಬಗ್ಗೆ ಎಚ್ಚರಿಕೆ, ಸೈಬರ್ ಅಪರಾಧಗಳ ಬಗ್ಗೆ ಮುನ್ನೆಚ್ಚರಿಕೆ, ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಅದೇರೀತಿ ತಪ್ಪಿತಸ್ಥರ ಮೇಲೆ ಕಾನೂನು ಯಾವ ರೀತಿ ಕ್ರಮ ಕೈಗೊಳ್ಳುತ್ತದೆ. ಪೊಲೀಸ್ ಇಲಾಖೆಯ ಕರ್ತವ್ಯ, ಜವಾಬ್ದಾರಿ ಸೇರಿದಂತೆ ಇನ್ನಿತರೆ ವಿಚಾರಗಳ ಬಗ್ಗೆ ಮಕ್ಕಳಿಗೆ ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ನವೀನ್ ಕುಮಾರ್ ಅವರು ತಿಳಿಸಿಕೊಟ್ಟರು.
ಕಳ್ಳರಿಗೆ ಬೇಡಿ ಏಕೆ ಹಾಕುತ್ತಾರೆ..? ಮಕ್ಕಳು ತಪ್ಪು ಮಾಡಿದರೆ ಶಿಕ್ಷೆ ನೀಡುವುದಿಲ್ಲವೇ..? ಕಳ್ಳರನ್ನು ಹಿಡಿದು ಏನು ಮಾಡುತ್ತೀರಾ..? ಆರೋಪಿಗಳನ್ನು ಹೇಗೆ ಪತ್ತೆ ಹಚ್ಚುತ್ತೀರಾ..? ಹೀಗೆ ಕುತೂಹಲದ ಪ್ರಶ್ನೆಗಳನ್ನು ಠಾಣಾಧಿಕಾರಿಗೆ ಕೇಳಿ ಗೊಂದಲ ನಿವಾರಿಸಿಕೊಂಡರು.