ತಾಲ್ಲೂಕಿನ ದೊಡ್ಡಬೆಳವಂಗಲ ಜೋಡಿ ಕೊಲೆಯಿಂದಾಗಿ ಶಾಂತಿಯುತವಾಗಿದ್ದ ತಾಲ್ಲೂಕಿನಲ್ಲಿ ಶಾಂತಿ ಕದಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಇದಕ್ಕೆ ಪೊಲೀಸರು ಹಾಗೂ ರಾಜಕಾರಣಿಗಳೇ ನೇರ ಹೊಣೆ ಎಂದು ದಲಿತ ವಿಮೋಚನಾ ಸೇನೆ ರಾಜ್ಯಾಧ್ಯಕ್ಷ ಮಾ.ಮುನಿರಾಜು ಅಭಿಪ್ರಾಯಪಟ್ಟರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರ್ವತ್ರಿಕ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಿಂದೆಂದು ಕೇಳರಿಯದ ಘಟನೆಗಳು ತಾಲ್ಲೂಕಿನಲ್ಲಿ ಸಂಭವಿಸುತ್ತಿದೆ, ತಾಲ್ಲೂಕಿನ ರಾಜಕೀಯ ಇತಿಹಾಸದಲ್ಲಿ ಟಿ.ಸಿದ್ದದ್ದಲಿಂಗಯ್ಯ, ಮುಗವಾಳಪ್ಪ, ಕೊಂಗಾಡಿಯಪ್ಪ ರಂತ ಮಹನೀಯರು ದೊಡ್ಡಬಳ್ಳಾಪುರ ನಿರ್ಮಾಣಕ್ಕೆ ಶ್ರಮಿಸಿದ್ದಾರೆ, ಗಣ್ಯರು ಉತ್ತಮ ಆಡಳಿತ ನೀಡಿ ರಾಜಕೀಯ ಮಾಡಿದ್ದಾರೆ ಅವರ ಕಾಲಘಟ್ಟದಲ್ಲಿ ಈ ರೀತಿಯ ಯಾವುದೇ ಅಹಿತಕರ ಘಟನೆಗಳು ನಡೆದಿರಲಿಲ್ಲ ಎಂದರು.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಇತ್ತೀಚೆಗೆ ಬೇರೆ ಕಡೆಯಿಂದ ವಲಸೆ ಬಂದಿರುವವರು ತಾಲ್ಲೂಕಿನ ಇತಿಹಾಸ ಗೊತ್ತಿಲ್ಲದವರು, ಜನತೆಯ ಸ್ವಾಭಿಮಾನವನ್ನು ಹಾಳು ಮಾಡುತ್ತಿದ್ದಾರೆ, ಆಡಂಬರದ ಬದುಕು ನಡೆಸಿ ಯುವಕರಿಗೆ ನಿತ್ಯ ಕ್ರೀಡಾಕೂಟ, ಔತಣಕೂಟ, ಓಂಶಕ್ತಿ , ಧರ್ಮಸ್ಥಳ ಯಾತ್ರೆಗಳಿಗೆ ಕಳಿಸಿ ಎಲ್ಲರನ್ನು ಭಿಕ್ಷುಕರನ್ನು ಮಾಡುತ್ತಿದ್ದಾರೆ ಎಂದು ಗುಡುಗಿದರು.
ಆಡಂಬರದ ಬದುಕು ನಿಲ್ಲಬೇಕು, ಈ ಆಡಂಬರಕ್ಕೆ ಹಣ ಎಲ್ಲಿಂದ ಬರುತ್ತಿದೆ, ಇದರ ಬಗ್ಗೆ ಅಧಿಕಾರಿಗಳು, ಪೊಲೀಸರು ನಿಗಾ ವಹಿಸಬೇಕು ಎಂದು ಒತ್ತಾಯಿಸಿದರು.
ರಾಜಕಾರಣ ಮಾಡುವುದಾದರೇ ತಾತ್ವಿಕ, ಸಾಮಾಜಿಕ ಚಿಂತನೆಗಳಿಂದ ರಾಜಕಾರಣ ಮಾಡಬೇಕು ಅದನ್ನು ಬಿಟ್ಟು ಸಮಾಜದ ಸ್ವಾಸ್ಥ್ಯ ಹಾಳುಮಾಡುವ, ಗೂಂಡಾವರ್ತನೆ ಪ್ರಭಾವ ಬೀರುವ, ಗೂಂಡಾ ಸಂಸ್ಕೃತಿ ರಾಜಕಾರಣ ಮಾಡಬಾರದು ಸಾಮಾಜಿಕ ಜವಾಬ್ಧಾರಿಗಳನ್ನು ಅರ್ಥ ಮಾಡಿಕೊಂಡು ರಾಜಕಾರಣ ಮಾಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೀದಿಗಳಿದು ಹೋರಾಟದ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪೊಲೀಸರ ಕರ್ತವ್ಯ ಲೋಪಕ್ಕೆ ಎರಡು ಜೀವ ಬಲಿ:
ದೊಡ್ಡಬೆಳವಂಗಲದಲ್ಲಿ ಫೆಬ್ರವರಿ 17 ರಂದು ಕ್ರಿಕೆಟ್ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಜಗಳ ನಡೆದ ಬಗ್ಗೆ ಮಾಹಿತಿ ಪೊಲೀಸರ ಗಮನಕ್ಕೆ ಬಂದಾಗ ಕ್ರಮ ಕೈಗೊಂಡಿದಿದ್ದರೆ ಈ ಜೋಡಿ ಕೊಲೆಗಳು ಆಗುತ್ತಿರಲಿಲ್ಲ, ಸ್ವಲ್ಪ ಅಜಾಗರೂಕರಾಗಿದ್ದರಿಂದ ಎರಡು ಅಮಾಯಕ ಜೀವಗಳು ಬಲಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾಳವ ನಾರಾಯಣ್, ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷ ರಮೇಶ್, ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಇದ್ದರು.