ಸುವರ್ಣ ಸಂಭ್ರಮ ಪ್ರಯುಕ್ತ ತಾಲೂಕಿನ ಜನತೆಯಲ್ಲಿ ಶಾಶ್ವತವಾಗಿ ಉಳಿಯುವಂತೆ ಟಿಬಿ ವೃತ್ತದ ಬಳಿ ಗಡಿಯಾರ ಸ್ತಂಭ ನಿರ್ಮಾಣ ಮಾಡಲಿದ್ದೇವೆ ಎಂದು ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಸಿ.ಎನ್.ರಾಜಶೇಖರ್ ತಿಳಿಸಿದರು.
ನಗರದ ಹೊರವಲಯದ ನವೋದಯ ಶಾಲೆ ಸಮೀಪದ ಖಾಸಗಿ ಹೋಟೆಲ್ ನಲ್ಲಿ ನಡೆದ ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಡಿಯಾರ ಸ್ತಂಭದ ಜೊತೆ ತಾಲೂಕಿನ ಜನತೆಗೆ ಉಪಯುಕ್ತವಾಗುವಂತೆ ಕಣ್ಣಿನ ಆಪರೇಷನ್ ಥಿಯೇಟರ್, ರಕ್ತದಾನ ಬ್ಯಾಂಕ್ ಕಟ್ಟಡವನ್ನೂ ಸಹ ಸ್ಥಾಪನೆ ಮಾಡಲಿದ್ದೇವೆ ಎಂದರು.
50 ವರ್ಷದಿಂದಲೂ ನಡೆದುಕೊಂಡುಬಂದಂತಹ ಉಚಿತ ಕಣ್ಣು ತಪಾಸಣೆ, ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ, ಆರೋಗ್ಯ ಶಿಬಿರ, ಶೈಕ್ಷಣಿಕ ಶಿಬಿರ, ಪರಿಸರ ಸಂರಕ್ಷಣೆ, ಉಚಿತ ಕಂಪ್ಯೂಟರ್ ಶಿಕ್ಷಣ, ರೈತರ ಸಮಾವೇಶ, ರಾಸುಗಳ ಶಿಬಿರ ಸೇರಿದಂತೆ ಇತರೆ ಸಮಾಜ ಸೇವೆಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.
2023-24ನೇ ಸಾಲಿನಲ್ಲಿ 12 ಕಣ್ಣಿನ ತಪಾಸಣೆ, 12 ಡಯಾಬಿಟಿಸ್ ತಪಾಸಣೆ, 2 ಪಶು ಆರೋಗ್ಯ ತಪಾಸಣೆ, 2 ಆರೋಗ್ಯ ತಪಾಸಣೆ ಶಿಬಿರ, ಮಕ್ಕಳು, ಸಾರ್ವಜನಿಕರಿಗೆ ಆಪ್ತ ಸಮಾಲೋಚನಾ ಶಿಬಿರ, ಕನ್ನಡ ಕಲರವ ಕಾರ್ಯಕ್ರಮ ಸೇರಿದಂತೆ ಇನ್ನಿತರೆ ಸಾಮಾಜಿಕ ಸೇವಾಕಾರ್ಯಗಳನ್ನು ನೆರವೇರಿಸಲಿದ್ದೇವೆ ಎಂದರು.
ಈ ವೇಳೆ ಮಾಜಿ ಅಧ್ಯಕ್ಷ ಎಸ್.ಪ್ರಕಾಶ್, ಕಾರ್ಯದರ್ಶಿ ರಮಾಕಾಂತ್, ಹುಲಿಕಲ್ ನಟರಾಜ್, ಆರ್.ಎಸ್.ಮಂಜುನಾಥ್ ಸೇರಿದಂತೆ 18 ಮಂದಿ ನಿರ್ದೇಶಕರು ಉಪಸ್ಥಿತರಿದ್ದರು.