ಎಲ್ಲಾ ಪೊಲೀಸ್ ಠಾಣೆಗಳು ವಿದ್ಯಾರ್ಥಿಗಳಿಗೆ ತೆರೆದ ಮನೆಯಂತಾಗಿ, ಪೊಲೀಸ್ ಇಲಾಖೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಬಾಂಧವ್ಯ ಧನಾತ್ಮಕವಾಗಿ ವೃದ್ಧಿಯಾಗಬೇಕು. ಕಾನೂನಿನ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಮುಖೇನ ಉತ್ತಮ ನಾಗರಿಕರನ್ನಾಗಿ ರೂಪಿಸಲು ತೆರೆದ ಮನೆ ಕಾರ್ಯಕ್ರವವನ್ನು ಆಯೋಜನೆ ಮಾಡಲಾಗಿದೆ.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ಕಾನೂನು ಅರಿವು, ಮಾನವೀಯ ಮೌಲ್ಯಗಳ ಅಳವಡಿಕೆ ಅತ್ಯಗತ್ಯ. ತಾನು ತಪ್ಪು ಮಾಡದೇ, ಇನ್ನೊಬ್ಬರು ತಪ್ಪು ಮಾಡದಂತೆ ಕಾನೂನು ಚೌಕಟ್ಟಿನಲ್ಲಿ ಇರುವುದು ಎಲ್ಲರ ಜವಾಬ್ದಾರಿ. ಸಮಾಜವನ್ನು ಶಾಂತ ರೀತಿಯಿಂದ ಇಡಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡವಂತಾಗಬೇಕು. ಈ ನಿಟ್ಟಿನಲ್ಲಿ ಜನ ಸ್ನೇಹಿ ಪೊಲೀಸ್ ವ್ಯವಸ್ಥೆ ಇರುವ ನಿಟ್ಟಿನಲ್ಲಿ ತೆರೆದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆ, ಲೈಂಗಿಕ ದೌರ್ಜನ್ಯ ತಡೆಯುವುದು, ಬಾಲ್ಯ ವಿವಾಹ ನಿರ್ಮೂಲನೆ, ಕಿರುಕುಳ, ಬಾಲಕಾರ್ಮಿಕತೆಯ ನಿರ್ಮೂಲನೆ, ಅತ್ಯಾಚಾರ, ಕಿಡ್ನ್ಯಾಪ್, ಸರಗಳತನ, ಜೇಬುಗಳ್ಳತನದ ಬಗ್ಗೆ ಎಚ್ಚರಿಕೆ, ಸೈಬರ್ ಅಪರಾಧಗಳ ಬಗ್ಗೆ ಮುನ್ನೆಚ್ಚರಿಕೆ, ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಅದೇರೀತಿ ತಪ್ಪಿತಸ್ಥರ ಮೇಲೆ ಕಾನೂನು ಯಾವ ರೀತಿ ಕ್ರಮ ಕೈಗೊಳ್ಳುತ್ತದೆ. ಪೊಲೀಸ್ ಇಲಾಖೆಯ ಕರ್ತವ್ಯ, ಜವಾಬ್ದಾರಿ ಸೇರಿದಂತೆ ಇನ್ನಿತರೆ ವಿಚಾರಗಳ ಬಗ್ಗೆ ನಗರದ ವಿದ್ಯಾನಿಧಿ ಕಾಲೇಜು ವಿದ್ಯಾರ್ಥಿಗಳಿಗೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅರ್.ದಯಾನಂದ ಅವರು ತಿಳಿಸಿಕೊಟ್ಟರು.
ಮನೆಯಿಂದ ಕಾಲೇಜಿಗೆ ಬಂದಾಗ ವಿದ್ಯಾರ್ಥಿಗಳು ತಮ್ಮನ್ನು ತಾವು ಯಾವರೀತಿ ರಕ್ಷಣೆ ಮಾಡಿಕೊಳ್ಳಬೇಕು. ದುಷ್ಟರು, ಪುಂಡರ ಹಾವಳಿಗಳಿಂದ ಯಾವ ರೀತಿ ಪಾರಾಗಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ಪೊಲೀಸ್ ಠಾಣೆ ಮತ್ತು ಪೊಲೀಸ್ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಪರಿಚಯ ಮಾಡಿಕೊಡಲಾಯಿತು.
ಪೊಲೀಸ್ ಕರ್ತವ್ಯ ನಿರ್ವಹಣಾ ಸೆಕ್ಷನ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ, ಅಪರಾಧ ವಿಭಾಗ, ತನಿಖಾಧಿಕಾರಿ ವಿಭಾಗ, ಕಂಪ್ಯೂಟರ್ ಸೆಕ್ಷನ್, ಠಾಣಾ ಬರಹಗಾರರ ವಿಭಾಗ, ಠಾಣಾ ದಿನಚರಿ, ಅರ್ಜಿಗಳ ಬಗ್ಗೆಯೂ ಪರಿಚಯ ಮಾಡಿಕೊಡಲಾಯಿತು.
ಸಮನ್ಸ್ ನೋಂದಣಿ, ವಾರಂಟ್ ನೋಂದಣಿ, ಎಂಒಬಿ ಪುಸ್ತಕ, ರೌಡಿ ರಿಜಿಸ್ಟರ್, ಪೂರ್ವ ಸಜಾ ಅಪರಾಧಿ ನೋಂದಣಿ, ಬಂದೂಕು ನೋಂದಣಿ, ಸಣ್ಣ ಅಪರಾಧ ಪುಸ್ತಕ, ಮೋಟಾರು ವಾಹನ ಅಪರಾಧ ಪುಸ್ತಕ ಹಾಗೂ ಅಪರಾಧಿ ದಾಖಲಾತಿ ಪುಸ್ತಕ, ಕಾನೂನು ತಿಳಿವಳಿಕೆ, ಮಕ್ಕಳ ಸುರಕ್ಷತೆ, ರಸ್ತೆ ಸಂಚಾರ ನಿಯಮ ಸೇರಿದಂತೆ ಉಪಯುಕ್ತವಾಗಿರುವ ಕಾನೂನುಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಲಾಯಿತು.