
ದೊಡ್ಡಬಳ್ಳಾಪುರ ನಗರಸಭಾ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ.

ನಗರಸಭಾ ಆಡಳಿತ ಕಚೇರಿ ಕೂಗಳತೆ ದೂರದಲ್ಲಿರುವ ಮಾರುತಿನಗರ ಸಮೀಪ ಹಾದುಹೋಗುವ ಕೋರ್ಟ್ ರಸ್ತೆಯಲ್ಲಿ ಗುಂಪುಗುಂಪಾಗಿ ನಾಯಿಗಳು ನಡು ರಸ್ತೆಯಲ್ಲಿ ನಿಂತು ಜನ ಓಡಾಡುವಾಗ ಮತ್ತು ವಾಹನ ಚಲಾಯಿಸುವ ವೇಳೆ ಹಿಂಬಾಲಿಸಿಕೊಂಡು ಬೊಗಳುತ್ತವೆ.

ಈ ರಸ್ತೆಯಲ್ಲಿ ಪ್ರತಿನಿತ್ಯ ನಾಯಿಗಳ ದಂಡು ಬೀಡು ಬಿಟ್ಟಿರುತ್ತದೆ. ಈ ಪ್ರದೇಶಗಳಲ್ಲಿ ಜನ ಓಡಾಡಲು ಭಯಪಡುತ್ತಾರೆ. ಸೈಕಲ್ ಮತ್ತು ಬೈಕ್ ಸಂಚರಿಸುವ ವೇಳೆ ಹಿಂಬಾಲಿಸಿಕೊಂಡು ಬಂದು ದಾಳಿ ನಡೆಸುತ್ತವೆ. ಈ ಘಟನೆಯಲ್ಲಿ ಹಲವು ಮಂದಿ ಬಿದ್ದು ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ರಾತ್ರಿ ವೇಳೆ ನಾಯಿಗಳ ಕೂಗಾಟ, ಚೀರಾಟದಿಂದ ನೆಮ್ಮದಿಯ ನಿದ್ದೆ ಮಾಡಿ ಹಲವು ತಿಂಗಳು ಕಳೆದಿದೆ. ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.