ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲೆ ಜಿಲ್ಲಾಸ್ಪತ್ರೆ ನಿರ್ಮಾಣ – ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲೆ ನಿರ್ಮಾಣ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ಜಿಲ್ಲಾ  ಉಸ್ತುವಾರಿ ಸಚಿವರ ಗೃಹ ಕಛೇರಿಯಲ್ಲಿ   ಜಿಲ್ಲಾ ಆಸ್ಪತ್ರೆ ಹೋರಾಟ ಸಮಿತಿಯವರು ಆಸ್ಪತ್ರೆ ನಿರ್ಮಾಣಕ್ಕೆ    ಶಂಕುಸ್ಥಾಪನೆ ನೆರವೇರಿಸಿದರೂ ಕಾಮಗಾರಿ ವಿಳಂಬವಾಗುತ್ತಿದೆ. ಶೀಘ್ರ ಕಾಮಗಾರಿ ಪ್ರಾರಂಭ ಪೂರ್ಣಗೊಳಿಸಬೇಕೆಂದು  ನೀಡಿದ ಮನವಿಯನ್ನು ಸ್ವೀಕರಿಸಿ ಮಾತನಾಡಿದರು. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಜಿಲ್ಲಾ ಆಸ್ಪತ್ರೆ ನಿರ್ಮಾಣ ಕುರಿತು ಸಂಬಂಧಿಸಿದ ಸಚಿವರು ಮತ್ತು ಅಧಿಕಾರಗಳ ಜೊತೆ ಮಾತನಾಡಿದ್ದೇನೆ. ಆಸ್ಪತ್ರೆ ಕಾಮಗಾರಿ ಪೂರ್ಣಗೊಳ್ಳಲು ಎಲ್ಲಾ ರೀತಿಯ ಸಹಕಾರವನ್ನು ಸರ್ಕಾರದಿಂದ ಪಡೆಯಲಾಗುವುದು ಎಂದರು.

ಜಿಲ್ಲಾ  ಆಸ್ಪತ್ರೆ  ಹೋರಾಟ ಸಮಿತಿ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ, 250 ಹಾಸಿಗೆಗಳ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆಸ್ಪತ್ರೆಯನ್ನು ದೊಡ್ಡಬಳ್ಳಾಪುರ ನಗರದ ಸಿದ್ಧೇನಾಯಕನಹಳ್ಳಿ ಗ್ರಾಮದ ಸರ್ವೆ ನಂ.20ರಲ್ಲಿ ಒಟ್ಟು 9.38 ಎಕರೆ ಜಾಗದಲ್ಲಿ ನಿರ್ಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಿದ್ದಾರೆ. ಜಿಲ್ಲಾ ಆಸ್ಪತ್ರೆಗೆ 6.8 ಎಕರೆ ಜಾಗ ಹೆಚ್ಚುವರಿ ಸೇರ್ಪಡೆ ಮಾಡಿ ಒಟ್ಟು 16 ಎಕರೆ ಜಮೀನಿನಲ್ಲಿ ಸುಸಜ್ಜಿತ ಜಿಲ್ಲಾ ಆಸ್ಪತ್ರೆ ಯೋಜನೆಗೆ ಒಟ್ಟು ₹192ಕೋಟಿ ಅನುದಾನ ನಿಗದಿಪಡಿಸಿದೆ. ಆದರೆ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗದೆ ವಿಳಂಬವಾಗುತ್ತಿದೆ. ಮತ್ತೊಂದೆಡೆ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ಇಎಸ್‍ಐ ಆಸ್ಪತ್ರೆ ನಿರ್ಮಾಣ ಆಗಿ ವರ್ಷಗಳೇ ಕಳೆದಿವೆ. ಆದರೆ ಉದ್ಘಾಟನೆ ಮಾತ್ರ ಆಗಿಲ್ಲ. ಜಿಲ್ಲಾ ಆಸ್ಪತ್ರೆ ಕಾಮಗಾರಿ ಪ್ರಾರಂಭಿಸಬೇಕು ಮತ್ತು ಇಎಸ್ಐ ಆಸ್ಪತ್ರೆ ಉದ್ಘಾಟನೆ ಆಗಬೇಕು. ‌ ಈ ಆಸ್ಪತ್ರೆಗಳಿಂದ ದೊಡ್ಡಬಳ್ಳಾಪುರ ಮಾತ್ರವಲ್ಲದೇ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ಗೌರಿಬಿದನೂರು ಸೇರಿದಂತೆ ತಾಲ್ಲೂಕಿನ ಜನರಿಗೆ ಉತ್ತಮ ಆರೋಗ್ಯ ಸೇವೆ ಲಭ್ಯವಾಗುತ್ತದೆ. ಅ.19 ರಂದು ಭಾನುವಾರ ದೊಡ್ಡಬಳ್ಳಾಪುರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಆಸ್ಪತ್ರೆಗೆ ಅನುದಾನ ಬಿಡುಗಡೆ ಮತ್ತು ಇಎಸ್ಐ ಆಸ್ಪತ್ರೆ ಉದ್ಘಾಟನೆ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಬೇಕೆಂದರು.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡುವ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆ ಹೋರಾಟ ಸಮಿತಿಯ
ಮುಖಂಡರಾದ ಸಂಜೀವ್ ನಾಯಕ್, ಆರ್‌.ಚಂದ್ರತೇಜಸ್ವಿ, ಪಿ.ಗೋವಿಂದರಾಜು, ಪಿ.ಎ.ವೆಂಕಟೇಶ್, ಮುನಿಪಾಪಣ್ಣ, ಚಿದಾನಂದ್, ಡಿ.ವೆಂಕಟೇಶ್, ನವೀನ್, ಪಿ.ಕೆ.ವೆಂಕಟೇಶ್, ಸುಬ್ಬಣ್ಣ ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!