ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರೂ ಕಾಮಗಾರಿ ವಿಳಂಬವಾಗುತ್ತಿದ್ದು, ಶೀಘ್ರ ಕಾಮಗಾರಿ ಮುಗಿಸಿ ಆಸ್ಪತ್ರೆ ಆರಂಭಿಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಸ್ಪತ್ರೆ ಹೋರಾಟ ಸಮಿತಿಯ ವತಿಯಿಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.
ಬೆಂಗಳೂರಿನ ಸಚಿವರ ನಿವಾಸದಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಜಿಲ್ಲಾಸ್ಪತ್ರೆ ಹೋರಾಟ ಸಮಿತಿಯ ಮುಖಂಡರು, 250 ಹಾಸಿಗೆಗಳ ಕಾಮಗಾರಿಯನ್ನು ತುರ್ತಾಗಿ ಆರಂಭಿಸಬೇಕೆಂದು ಒತ್ತಾಯಿಸಿದರು.
ಸಚಿವರಿಗೆ ಮನವಿ ಸಲ್ಲಿಸಿದ ಮುಖಂಡರಾದ ಸಂಜೀವ್ ನಾಯಕ್, ಚಂದ್ರ ತೇಜಸ್ವಿ, ಚಿದಾನಂದ್, ತೂಬಗೆರೆ ಷರೀಫ್ ಬೆಂಗಳೂರು ಗ್ರಾಮಾಂತರ ಜಿಲ್ಲಾಸ್ಪತ್ರೆಯನ್ನು ದೊಡ್ಡಬಳ್ಳಾಪುರ ನಗರದ ಸಿದ್ಧೇನಾಯಕನಹಳ್ಳಿ ಗ್ರಾಮದ ಸರ್ವೇ ನಂ.20ರಲ್ಲಿ ಒಟ್ಟು 9.38 ಎಕರೆ ಜಾಗದಲ್ಲಿ ನಿರ್ಮಿಸಲು ಘನ ಸರ್ಕಾರ ನಿರ್ಧರಿಸಿತ್ತು. ಇದರೊಂದಿಗೆ ಜಿಲ್ಲಾಸ್ಪತ್ರೆಗೆ 6.8 ಎಕರೆ ಜಾಗವನ್ನು ಹೆಚ್ಚುವರಿ ಸೇರ್ಪಡೆ ಮಾಡಿ, ಒಟ್ಟು 16 ಎಕರೆ ಜಮೀನಿನಲ್ಲಿ ಸುಸಜ್ಜಿತ ಜಿಲ್ಲಾಸ್ಪತ್ರೆಗೆ ಶಂಕುಸ್ಥಾಪನೆಯಾಗಿ, ಯೋಜನೆಗೆ ಒಟ್ಟು 192 ಕೋಟಿ ಅನುದಾನವನ್ನು ನಿಗದಿಪಡಿಸಿತ್ತು. ಇದಲ್ಲದೇ, ಮಾರ್ಚ್ 2024ರಂದು ಜಿಲ್ಲಾಸ್ಪತ್ರೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಶಂಕುಸ್ಥಾಪನೆ ನೆರವೇರಿಸಿದ್ದರು.
ಜೊತೆಗೆ, ಅ.10, 2024ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್. ಮುನಿಯಪ್ಪನವರೊಂದಿಗೆ ಆರೋಗ್ಯ ಸಚಿವರು ಸಹ ಪಾಲ್ಗೊಂಡು ದೊಡ್ಡಬಳ್ಳಾಪುರದಲ್ಲಿ ಕ್ರಿಟಿಕಲ್ ಕೇರ್ ಯೂನಿಟ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ. ಈ ಆಸ್ಪತ್ರೆಯಿಂದಾಗಿ ದೊಡ್ಡಬಳ್ಳಾಪುರ ಮಾತ್ರವಲ್ಲದೇ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ಗೌರಿಬಿದನೂರು ಸೇರಿದಂತೆ ನಾನಾ ತಾಲೂಕಿನ ಜನರಿಗೆ ಉತ್ತಮ ಆರೋಗ್ಯ ಸೇವೆ ಲಭ್ಯವಾಗುವ ನಿರೀಕ್ಷೆಯಿತ್ತು. ಜೊತೆಗೆ, ಅತಿಮುಖ್ಯವಾಗಿ ಬೆಂಗಳೂರು ಅವಲಂಬನೆ ತಪ್ಪುತ್ತದೆ ಎನ್ನುವ ಸದಾಶಯ ನಮ್ಮಲ್ಲಿತ್ತು. ಆದರೆ, ಸದ್ಯ ಜಿಲ್ಲಾಸ್ಪತ್ರೆ ಮತ್ತು ಕ್ರಿಟಿಕಲ್ ಕೇರ್ ಯೂನಿಟ್ ಕಾಮಗಾರಿಗಳು ಸ್ಥಗಿತಗೊಂಡಿದ್ದು, ತುರ್ತಾಗಿ ಈ ಆಸ್ಪತ್ರೆಗಳ ನಿರ್ಮಾಣ ಕಾರ್ಯವಾಗಬೇಕು. ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಉನ್ನತ ಚಿಕಿತ್ಸೆಗಳು, ಅಗತ್ಯ ತಜ್ಞ ವೈದ್ಯರ ಅಲಭ್ಯದಿಂದಾಗಿ ತಾಯಿ ಮತ್ತು ಮಕ್ಕಳ ಸಾವುಗಳ ಸಂಖ್ಯೆ ಏರಿಕೆಯಾಗುತ್ತಿದೆ. ಹೀಗಾಗಿ, ದೊಡ್ಡಬಳ್ಳಾಪುರ ಆರೋಗ್ಯ ವಲಯಕ್ಕೆ ರಾಜ್ಯ ಸರ್ಕಾರದಿಂದ ಅನುಮೋದನೆಗೊಂಡಿರುವ 250 ಹಾಸಿಗೆಗಳ ಜಿಲ್ಲಾಸ್ಪತ್ರೆ ಕಾಮಗಾರಿಯನ್ನು ತುರ್ತಾಗಿ ಆರಂಭಿಸಬೇಕೆಂದು ಗ್ರಾಮಾಂತರ ಜಿಲ್ಲಾಸ್ಪತ್ರೆ ಹೋರಾಟ ಸಮಿತಿ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕು ಹಾಗೂ ಜಿಲ್ಲೆಯ ಜನತೆ ವತಿಯಿಂದ ಒತ್ತಾಯಿಸಲಾಗುತ್ತಿದೆ ಎಂದರು.
ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲಾಸ್ಪತ್ರೆಗೆ ಅನುಮೋದನೆ ನೀಡದೇ ಮುಂದೂಡಲಾಗಿತ್ತು. ನಂತರ ಬಂದ ಅನುದಾನ ಬೆಂಗಳೂರಿನ ಕೆ.ಸಿ ಆಸ್ಪತ್ರೆಗೆ ವಿನಿಯೋಗಿಸಲಾಗಿತ್ತು. ನಂತರ ಸಚಿವ ಸಂಪುಟದ ಅನುಮೋದನೆಯಾಗಿ ಈಗ ಶಂಕಸ್ಥಾಪನೆ ನೆರವೇರಿಸಲಾಗಿದೆ. ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶ ವಿಪರೀತ ಬೆಳೆಯುತ್ತಿದ್ದು, ಇಲ್ಲಿ ಜಿಲ್ಲಾಸ್ಪತ್ರೆ ಹಾಗೂ ಇಎಸ್‍ಐ ಆಸ್ಪತ್ರೆಗಳ ಅಗತ್ಯವಿದೆ. ಈಗಿರುವ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ತಿಂಗಳಿಗೆ 180 ಹೆರಿಗೆಗಳಾಗುತ್ತಿದ್ದು, ವೈದ್ಯರ ಕೊರತೆ ಇದೆ. ಸಚಿವರು ಈ ಬಗ್ಗೆ ಕ್ರಮ ವಹಿಸಬೇಕಿದೆ. ಜಿಲ್ಲಾಸ್ಪತ್ರೆಗೆ ನಾನು ಅಡ್ಡಗಾಲು ಹಾಕುತ್ತಿದ್ದೇನೆ ಎನ್ನುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ಜಿಲ್ಲಾಸ್ಪತ್ರೆ ದೊಡ್ಡಬಳ್ಳಾಪುರದಲ್ಲಿ ಆಗಬೇಕೆಂಬುದರಲ್ಲಿ ಎರಡು ಮಾತಿಲ್ಲ. ಕ್ರಿಟಿಕಲ್ ಕೇರ್ ಘಟಕಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಈಗಾಗಲೇ 100 ಹಾಸಿಗೆಗಳ ತಾಯಿ ಮತ್ತು ಮಗು ಆಸ್ಪತ್ರೆ ಇರುವುದರಿಂದ ಬೇರೆ ಕಡೆ ಮಾಡುವುದು ಬೇಡ. ಸಿಬ್ಬಂದಿ ಹಾಗೂ ವೈದ್ಯರ ಬಳಕೆಗೆ ಪೂರಕವಾಗಿ ಹೆಚ್ಚುವರಿ 100 ಹಾಸಿಗೆಗಳನ್ನು ಸೇರಿಸುವ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿ ಎಲ್ಲಾ ಒಂದೇ ಕಡೆ ಇರಬೇಕಿದೆ ಎಂದು ಕಾಮಗಾರಿ ಆರಂಭಿಸಲಾಗುತ್ತು. ಆದರೆ ಈಗ ಈ ಪ್ರಸ್ತಾವನೆ ಕೈ ಬಿಡಲಾಗಿದೆ. ಕ್ರಿಟಿಕಲ್ ಕೇರ್ ಯೂನಿಟ್ ನಿರ್ಮಾಣಕ್ಕೆ ಯಾವುದೇ ತೊಂದರೆಯಿಲ್ಲ. ಮತ್ತೊಮ್ಮೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಿಕೊಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ, ಕ್ರಮ ವಹಿಸಲಾಗುವುದು. ಮಾಜಿ ಶಾಸಕರು ಸಹ ಮುಖ್ಯಮಂತ್ರಿಗಳ ಗಮನಕ್ಕೆ ತನ್ನಿ ಎಂದು ತಿಳಿಸಿದರು.
ಈ ವೇಳೆ ನಗರಸಭಾ ಸದಸ್ಯ ಅಲ್ತಾಫ್, ಜಿಲ್ಲಾಸ್ಪತ್ರೆ ಹೋರಾಟ ಸಮಿತಿ ಸದಸ್ಯರಾದ ಪಿ.ಎ.ವೆಂಕಟೇಶ್ ರಾಜಘಟ್ಟ ರವಿ, ಹನುಮೇಗೌಡ, ತೂಬಗೆರೆ ಷರೀಫ್, ಚಿದಾನಂದ್, ಚಿಕ್ಕ ಮೂರ್ತಿ, ಹಮಾಮ್ ವೆಂಕಟೇಶ್, ಗುರುರಾಜಪ್ಪ, ನಾಗರಾಜ್ ನುನ್ನಾ, ಚೌಡರಾಜ್,ಎಚ್.ಎಸ್. ವೆಂಕಟೇಶ್, ರಾಜು ಸಣ್ಣಕ್ಕಿ, ಹೆಚ್.ಮುನಿಪಾಪಯ್ಯ , ಡಿ.ವೆಂಕಟೇಶ್, ಮುನಿರಾಜು, ಜನಪರ ಮಂಜು, ನರೇಂದ್ರ , ಪಿ.ಸಿ.ಮಂಜುನಾಥ್,ರಮೇಶ್ ಸಂಕ್ರಾಂತಿ ಮೊದಲಾದವರು ಹಾಜರಿದ್ದರು.
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…
ಟಿಎಪಿಎಂಸಿಎಸ್ ಚುನಾವಣೆ ಸೋಲಿಗೆ ನಾನೇ ನೇರ ಕಾರಣ. ಸೋಲಿನ ಸಂಪೂರ್ಣ ಜವಾಬ್ದಾರಿ ಶಾಸಕನಾಗಿ ನಾನೇ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಧೀರಜ್…
ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮದಿಂದ ಹೊಲಿಗೆ ಯಂತ್ರ ಪಡೆಯಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಪ್ರವರ್ಗ-3-ಬಿ…