ದೊಡ್ಡಬಳ್ಳಾಪುರದಲ್ಲಿ ಮೂರು ‘ನಮ್ಮ ಕ್ಲಿನಿಕ್’ ಲೋಕಾರ್ಪಣೆ

ಪ್ರಾಥಮಿಕ ಆರೋಗ್ಯ ವ್ಯವಸ್ಥೆ ಬಲಪಡಿಸುವ ಸಲುವಾಗಿ ನಮ್ಮ ಕ್ಲಿನಿಕ್ ಗಳಿಗೆ ಬುಧವಾರ ಚಾಲನೆ ನೀಡಲಾಯಿತು. ನಗರದ ಹಳೆಯ ನಗರಸಭೆ ಕಟ್ಟಡ, ವಿದ್ಯಾನಗರ ಹಾಗೂ ಬಾಶೆಟ್ಟಿಹಳ್ಳಿಯಲ್ಲಿ ‘ನಮ್ಮ ಕ್ಲಿನಿಕ್‘ಗಳನ್ನು ಶಾಸಕ ಟಿ.ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಆರ್.ಲತಾ ಉದ್ಘಾಟಿಸಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ನೀಡಬೇಕು. ನಗರ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರನ್ನು ಗುರಿಯಾಗಿಸಿಕೊಂಡು ನಮ್ಮ ಕ್ಲಿನಿಕ್ ಸ್ಥಾಪಿಸಲಾಗಿದೆ. ಒಂದೇ ದಿನ ರಾಜ್ಯಾದ್ಯಂತ 114 ಕ್ಲಿನಿಕ್ ಗಳು ಉದ್ಘಾಟನೆಗೊಂಡಿವೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.

ಜಿಲ್ಲೆಯಲ್ಲಿ ಇಂದು ಒಟ್ಟು ಆರು ನಮ್ಮ ಕ್ಲಿನಿಕ್ ಆರಂಭಿಸಲಾಗಿದೆ. ಹೊಸಕೋಟೆ ,ದೇವನಹಳ್ಳಿ ಹಾಗೂ ನೆಲಮಂಗಲದಲ್ಲಿ ತಲಾ ಒಂದರಂತೆ ಇನ್ನೂ ಮೂರು ಕ್ಲಿನಿಕ್ ಪ್ರಾರಂಭವಾಗಲಿವೆ ಎಂದರು. ಒಂದೇ ಸೂರಿನಡಿ 12 ವಿವಿಧ ಆರೋಗ್ಯ ಸೇವೆಗಳನ್ನು ಒದಗಿಸಲಿರುವ ನಮ್ಮ ಕ್ಲಿನಿಕ್ ಗಳು ಇಡೀ ದೇಶದಲ್ಲೇ ವಿನೂತನ ಯೋಜನೆಯಾಗಿದೆ ಎಂದು ಹೇಳಿದರು.

ಶಾಸಕ ವೆಂಕಟರಮಣಯ್ಯ ಮಾತನಾಡಿ ಜನರ ಆರೋಗ್ಯ ದೃಷ್ಠಿಯಿಂದ ಕ್ಲಿನಿಕ್‌ಗಳನ್ನು ತೆರೆದಿರುವುದು ಸಂತೋಷದ ಸಂಗತಿ, ಆದರೆ ಪ್ರತಿ ಕ್ಲಿನಿಕ್‌ಗಳಲ್ಲಿ ಕಡ್ಡಾಯವಾಗಿ ನುರಿತ ವೈದ್ಯರು ಸೇರಿದಂತೆ ಅಗತ್ಯ ಸಿಬ್ಬಂದಿ ಮತ್ತು ಸಲಕರಣೆಗಳು ಇರುವಂತೆ ನೋಡಿಕೊಳ್ಳಬೇಕಿದೆ ಎಂದರು.

ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ, ಉಪಾಧ್ಯಕ್ಷೆ ಫರ್ಹಾನ ತಾಜ್, ಸ್ಥಾಯಿ ಸಮಿತಿ ಅಧ್ಯಕ್ಷೆ ಆದಿಲಕ್ಷ್ಮಿ, ತಾಲೂಕು ವೈದ್ಯಾಧಿಕಾರಿ ಡಾ.ಪರಮೇಶ್ವರ್, ನಗರಸಭೆ ಪೌರಾಯುಕ್ತ ಶಿವಶಂಕರ್, ನಗರಸಭೆ ಸದಸ್ಯರು ಸೇರಿ ಆರೋಗ್ಯ ಇಲಾಖೆಯ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *