
ದೊಡ್ಡಬಳ್ಳಾಪುರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಇಂದು ಒಂದೇ ದಿನ ನಗರದ ಹಲವು ಕಡೆ ಐದಕ್ಕೂ ಹೆಚ್ಚು ಮಂದಿಗೆ ನಾಯಿಗಳು ಕಚ್ಚಿವೆ. ಒಬ್ಬರಿಗೆ ಬೆಕ್ಕು ಕಚ್ಚಿ ಗಾಯಪಡಿಸಿದೆ.
ದೊಡ್ಡಬಳ್ಳಾಪುರದ ತೊಗರಿಘಟ್ಟ ಗ್ರಾಮದಲ್ಲಿ 24 ವರ್ಷದ ವ್ಯಕ್ತಿಗೆ, ಪಾಲನಜೋಗಿಹಳ್ಳಿಯ 7 ವರ್ಷದ ಇಬ್ಬರು ಮಕ್ಕಳಿಗೆ, ಶಾಂತಿನಗರ 6 ವರ್ಷದ ಬಾಲಕಿಗೆ ನಾಯಿಗಳು ಕಚ್ಚಿದ್ದು, ಒಬ್ಬರಿಗೆ ಬೆಕ್ಕು ಕಡಿತದಿಂದ ತೀವ್ರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ…
ನಾಯಿ ಹಾಗೂ ಬೆಕ್ಕು ಕಡಿತದಿಂದ ಗಾಯಗೊಂಡಿರುವವರು, ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ..

ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳು, ಸೈಕಲ್ ಮತ್ತು ಬೈಕ್ ಸಂಚರಿಸುವ ವೇಳೆ ಹಿಂಬಾಲಿಸಿಕೊಂಡು ಬಂದು ದಾಳಿ ನಡೆಸುತ್ತವೆ. ಬೀದಿ, ರಸ್ತೆಗಳಲ್ಲಿ ನಡೆದುಕೊಂಡು ಹೋಗುವ ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿವೆ.
ರೇಬಿಸ್ ರೋಗ ಮತ್ತು ಪ್ರಾಣಾಪಾಯದ ಭೀತಿ ಜನರಲ್ಲಿ ಹೆಚ್ಚಾಗಿದೆ. ಸಾರ್ವಜನಿಕರು, ಮಕ್ಕಳು ಮತ್ತು ಬೈಕ್ ಸವಾರರು ಓಡಾಡಲು ಭಯಪಡುವಂತಾಗಿದೆ.
ಎಲ್ಲೆಂದರಲ್ಲಿ ಹಾಕಲಾಗುತ್ತಿರುವ ಮಾಂಸ ತ್ಯಾಜ್ಯ, ಕಸದ ರಾಶಿ ನಾಯಿಗಳ ಮತ್ತೊಂದು ಅಡ್ಡೆಯಾಗಿದ್ದು, ತ್ಯಾಜ್ಯದಲ್ಲಿನ ಆಹಾರ ತಿನ್ನಲು ಶ್ವಾನಗಳ ಗುಂಪುಗಳ ನಡುವೆ ಕಾದಾಟ ನಡೆಯುತ್ತಲೆ ಇರುತ್ತದೆ. ಈ ವೇಳೆ ಚಲಿಸುವ ವಾಹನಗಳಿಗೆ ಅಡ್ಡ ಬಂದು ವಾಹನ ಸವಾರರು ಬೀಳುವುದು ಸಾಮಾನ್ಯವಾಗಿದೆ.
ಕೂಡಲೇ ಬೀದಿ ನಾಯಿಗಳ ಹಾವಳಿಯನ್ನು ಕಡಿಮೆಗೊಳಿಸಿ ಸಾರ್ವಜನಿಕರ ನೆಮ್ಮದಿ ಜೀವನಕ್ಕೆ ಅನುವು ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ….