ದೊಡ್ಡಬಳ್ಳಾಪುರದಲ್ಲಿ ಕೆಎಸ್ಆರ್ ಟಿಸಿ ಬಸ್ ಗಳಿಗೆ ಕೊರತೆ ಇಲ್ಲ: ಡ್ರೈವರ್, ಕಂಡಕ್ಟರ್ ಕೊರತೆಯಿಂದಾಗಿ ಸಮಸ್ಯೆ ಉಲ್ಬಣ- ದೊಡ್ಡಬಳ್ಳಾಪುರ ಕೆಎಸ್ಆರ್ ಟಿಸಿ ಘಟಕದ ವ್ಯವಸ್ಥಾಪಕ ಎಸ್.ಆರ್.ಸಂತೋಷ್

ರಾಜ್ಯ ಸರ್ಕಾರದ ಐದು ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿ ಬಳಿಕ ತಾಲ್ಲೂಕಿನಾದ್ಯಂತ ಮಹಿಳಾ ಪ್ರಯಾಣಿಕರು ಸೇರಿದಂತೆ ಸಾರ್ವಜನಿಕರ ಪ್ರಯಾಣಿಕರ ಸಂಖ್ಯೆ ಶೇ.32 ರಷ್ಟು ಏರಿಕೆಯಾಗಿದೆ. ದೊಡ್ಡಬಳ್ಳಾಪುರದಿಂದ ಬೆಂಗಳೂರು, ನೆಲಮಂಗಲ, ತುಮಕೂರು, ಚಿಕ್ಕಬಳ್ಳಾಪುರ, ದೇವನಹಳ್ಳಿ, ಕೋಲಾರ ಜಿಲ್ಲೆಗಳಿಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯೂ ಗಣನೀಯವಾಗಿ ವೃದ್ಧಿಯಾಗಿದ್ದು. ಕೆಎಸ್ಆರ್.ಟಿಸಿ ನಿಗಮಕ್ಕೆ ಆಶಾದಾಯಕವಾಗಿದ್ದರೆ ಪ್ರಯಾಣಿಕರಿಗೆ ಮಾತ್ರ ನಿತ್ಯ ಪಿಕಲಾಟವಾಗಿದೆ. ಬಸ್ ಗಳ ಸಮಸ್ಯೆ ಇಲ್ಲದಿದ್ದರೂ ಬಸ್ ಗಳ ಸಾರಥಿಗಳಾದ ಚಾಲಕ, ನಿರ್ವಾಹಕರು ಸೇರಿದಂತೆ ಬಸ್ ಘಟಕಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೊರತೆಯಿಂದ ನಿತ್ಯ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

2018 ರಿಂದ ಆಗಿಲ್ಲ ಸಿಬ್ಬಂದಿ ನೇಮಕಾತಿ:

ದೊಡ್ಡಬಳ್ಳಾಪುರ ಘಟಕಕ್ಕೆ 2018 ರಿಂದಲೂ ಈವರೆಗೆ ವಿವಿಧ ಕಾರಣಗಳಿಂದಾಗಿ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿ, ಡಿ.ಗ್ರೂಪ್ ಸಿಬ್ಬಂದಿ ಸೇರಿದಂತೆ ಆಯಾ ಕಟ್ಟಿನ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಕಳೆದ ಐದಾರು ವರ್ಷಗಳಿಂದ ನಿವೃತ್ತಿ ಹೊಂದಿದ ಸಿಬ್ಬಂದಿ ಸಂಖ್ಯೆಯೂ ಅಧಿಕವಾಗಿದ್ದು ಅವರಿಂದ ತೆರವಾದ ಸ್ಥಾನಗಳಿಗೆ ಭರ್ತಿಯಾಗದೆ ನೆನೆಗುದಿಗೆ ಬಿದ್ದಿದೆ. ಹೀಗಾಗಿ ಸಮರ್ಪಕವಾಗಿ ಬಸ್ ಗಳು ಇದ್ದರೂ ಚಾಲಕ, ನಿರ್ವಾಹಕ, ಸಿಬ್ಬಂದಿ ಕೊರತೆಯಿಂದಾಗಿ ಬಸ್ ಗಳು ರಸ್ತೆಗಿಳಿಯದಂತಾಗಿದೆ. ಪ್ರಯಾಣಿಕರು ಪ್ರತಿನಿತ್ಯ ಪರದಾಡುವಂತಾಗಿದೆ.

ದೊಡ್ಡಬಳ್ಳಾಪುರದ ಕೆಎಸ್ಆರ್ಟಿಸಿ ಘಟಕ್ಕೆ ಒಟ್ಟು 325 ಡ್ರೈವರ್, ಕಂಡಕ್ಟರ್ ಗಳ ಅವಶ್ಯಕತೆ ಇದೆ. ಆದರೆ 2018 ರಿಂದ ನಿವೃತ್ತಿಯಾದವರು ಸೇರಿದಂತೆ ನೂತನ ಸಿಬ್ಬಂದಿ ಸೇರ್ಪಯಾಗಿಲ್ಲ. ಇದರಿಂದಾಗಿ ಪ್ರಸ್ತುತ 214 ಜನ ಡ್ರೈವರ್, ಕಂಡಕ್ಟರ್ ಗಳು ಕರ್ತವ್ಯದಲ್ಲಿದ್ದಾರೆ. ಒಟ್ಟು 111 ಸಿಬ್ಬಂದಿ ಕೊರತೆ ಎದುರಾಗಿದೆ. ಘಟಕಕ್ಕೆ ಒಟ್ಟು 8 ಜನ ತಾಂತ್ರಿಕ ಸಿಬ್ಬಂದಿ ತುರ್ತಾಗಿ ಭರ್ತಿಯಾಗಬೇಕಿದೆ.

76 ರೂಟ್ 87 ಬಸ್ ಗಳು:

ತಾಲ್ಲೂಕಿನ ಗ್ರಾಮಾಂತರ ಭಾಗದಲ್ಲಿಯೂ ಯಾವುದೇ ಬಸ್ ಗಳ ಸಮಸ್ಯೆ ಇಲ್ಲ. ಹಾಲಿ ಇರುವ 76 ಮಾರ್ಗಗಳಿಗೆ 86 ಬಸ್ ಗಳಿವೆ ಆದರೆ‌ ಉಳಿದ 11 ಬಸ್ ಗಳಿಗೆ ಚಾಲಕ, ನಿರ್ವಾಹಕರಿಲ್ಲ. ಮಳೆಗಾಲವಾದ್ದರಿಂದ ಪಿಕಪ್ ಮತ್ತು ಡ್ರಾಪ್ ಸಮಯದಲ್ಲಿ ವ್ಯತ್ಯಾಸವಾಗುತ್ತಿದೆ. ಗ್ರಾಮಾಂತರದಲ್ಲಿ ರಸ್ತೆಗಳಲ್ಲಿ ಜಾರುವಿಕೆ, ಕಿರಿದಾದ ರಸ್ತೆ, ಡಾಂಬರೀಕರಣ ಇಲ್ಲದ ಭಾಗಗಳಲ್ಲಿ ನಿಧಾನಗತಿಯಲ್ಲಿ ಚಾಲನೆ ಮಾಡುವಂತೆ ಘಟಕದಿಂದಲೇ ಸೂಚನೆ ನೀಡಿದ್ದೇವೆ. ರಸ್ತೆಗಳು ಸರಿಇಲ್ಲದ ಭಾಗದಲ್ಲಿ ಸಮಯ ಪಾಲನೆ ಆಗುತ್ತಿಲ್ಲ. ಇತರೆಡೆ ಸರಿಯಾದ ಸಮಯಕ್ಕೆ ಬಸ್ ಗಳು ಸಂಚಾರ ಮಾಡುತ್ತಿವೆ.

ಗುತ್ತಿಗೆ ಆಧಾರದಲ್ಲಿ 25 ರಿಂದ 30 ಜನ ಸಿಬ್ಬಂದಿ ನೇಮಕ:

ಸದ್ಯಕ್ಕೆ ಡ್ರೈವರ್ ಮತ್ತು ಚಾಲಕರ ಸಂಖ್ಯೆ ತೀವ್ರವಾಗಿ ಕಾಡುತ್ತಿರುವುದರಿಂದ ಕೇಂದ್ರ ನಿಗಮದ ನಿರ್ದೇಶನದಂತೆ 25 ರಿಂದ 30 ಜನ ಚಾಲಕ, ನಿರ್ವಾಹಕರನ್ನ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಪ್ರಕ್ರಿಯೆ ಆರಂಭ ಮಾಡಲಾಗುವುದು. ಉಳಿದ ತಾಂತ್ರಿಕ ಸಿಬ್ಬಂದಿಯ ಭರ್ತಿ ಕೆಲಸವು ಶೀಘ್ರವಾಗಿ ಮಾಡಲಾಗುವುದು ಎಂದು ದೊಡ್ಡಬಳ್ಳಾಪುರ ಕೆಎಸ್ಆರ್ಟಿಸಿ ಬಸ್ ಘಟಕ ವ್ಯವಸ್ಥಾಪಕ ಎಸ್.ಆರ್ ಸಂತೋಷ ತಿಳಿಸಿದ್ದಾರೆ.

ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಹೆಚ್ಚುವರಿ ಬಸ್:

ಪ್ರತಿನಿತ್ಯ ಬೆಂಗಳೂರು ಪ್ರಯಾಣ ಮಾಡುವ ಸಾರ್ವಜನಿಕರನ್ನು ಕಾಡುತ್ತಿರುವ ಬಸ್ ಸಮಸ್ಯೆ ನಿಗಿಸಲು ಕ್ರಮ ವಹಿಸಲಾಗಿದ್ದು, ಬೆಳಗ್ಗೆ 5 ಗಂಟೆಯಿಂದ 6:30 ರವರೆಗೆ ಪ್ರತಿ ಅರ್ಧಗಂಟೆಗೊಂದು ಬಸ್, 6:30ರಿಂದ 10ಗಂಟೆವರೆಗೆ ಪ್ರತಿ 10 ರಿಂದ 15 ನಿಮಿಷಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದ್ದು ಬಳಿಕ ಗಂಟೆಗೊಮ್ಮೆ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರ ಸಂಖ್ಯೆ ಆಧಾರಿಸಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.

ದೊಡ್ಡಬಳ್ಳಾಪುರ ಕೆಎಸ್ಆರ್ಟಿಸಿ ಬಸ್ ಘಟಕದಲ್ಲಿ ಬಸ್ ಗಳ ಸಂಖ್ಯೆ ಸಮರ್ಪಕವಾಗಿದೆ. ಬಸ್ ಗಳು ಕೂಡ ಉತ್ತಮ ಸ್ಥಿತಿಯಲ್ಲಿವೆ. ಚಾಲಕ, ನಿರ್ವಾಹಕ ಸೇರಿದಂತೆ ಘಟಕಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಸಮಸ್ಯೆ ಎದುರಾಗಿದೆ. ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಶೀಘ್ರವಾಗಿ 25 ರಿಂದ 30 ಜನ ಡ್ರೈವರ್, ಕಂಡಕ್ಟರ್ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. ಗ್ರಾಮಾಂತರದಲ್ಲಿ ಮಳೆಯಿಂದಾಗಿ ರಸ್ತೆಗಳಲ್ಲಿ ಹಳ್ಳ,ಜಾರುವಿಕೆ ಹೆಚ್ಚಿರುವುದರಿಂದ ಬಸ್ ಗಳು ನಿಧಾನಗತಿಯಲ್ಲಿ ಓಡಾಡುವುದರಿಂದ ಸಮಯದಲ್ಲಿ ಏರುಪೇರಾಗಿದೆ ಎಂದು ದೊಡ್ಡಬಳ್ಳಾಪುರ ಕೆಎಸ್ಆರ್ ಟಿಸಿ ಘಟಕದ ವ್ಯವಸ್ಥಾಪಕ ಎಸ್.ಆರ್ ಸಂತೋಷ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *